ಕಾಸರಗೋಡು: ಕಳೆದ ಮೂರು ದಿವಸಗಳಿಂದ ಮಳೆ ದೂರಾಗಿದ್ದು, ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿದೆ. ಪ್ರಖರ ಸೂರ್ಯನ ಬಿಸಿಲಿಗೆ ತಾಪಮಾನವೂ ಹೆಚ್ಚಾಗತೊಡಗಿದೆ.
ಕೇರಳ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ತಾಪಮಾನ ಮಟ್ಟದಲ್ಲಿ 3ರಿಂದ 4 ಡಿಗ್ರಿ ತನಕ ಏರಿಕೆ ಉಂಟಾಗುವ ಸಾಧ್ಯತೆಯಿದ್ದು ಇದರಿಂದ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಜ್ಯಾದ್ಯಂತವಾಗಿ ಗರಿಷ್ಠ ಜಾಗ್ರತಾ ನಿರ್ದೇಶ ನೀಡಿದೆ. ಇದೇ ಸಂದರ್ಭ ದಕ್ಷಿಣ ಕೇರಳದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಯೂ ಇರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿದ್ಯುತ್ ನಿಯಂತ್ರಣ:
ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆಯಲ್ಲೂ ವ್ಯಾಪಕ ಹೆಚ್ಚಳ ಉಂಟಾಗತೊಡಗಿದೆ. ರಾಜ್ಯದಲ್ಲಿ ವಿದ್ಯುತ್ತಿನ ತೀವ್ರ ಕೊರತೆ ಎದುರಾಗಿದ್ದು, ಕಳೆದ ಹಲವು ದಿವಸಗಳಿಂದ ಅನಿಯಂತ್ರಿತ ಪವರ್ ಕಟ್‍ನಿಂದಾಗಿ ಜನತೆ ಕಂಗಾಲಾಗಿದ್ದಾರೆ. ಯಾವುದೇ ಮುನ್ಸೂಚನೆಯಿಲ್ಲದೆ ವಿದ್ಯುತ್ ಪವರ್‍ಕಟ್ ನಡೆಸಲಾಗುತ್ತಿದ್ದು, ಇದರಿಂದ ಕಿರು ಕೈಗಾರಿಕೆಗಳಿಗೆ ಹಾಗೂ ಇತರ ಕೆಲಸದಲ್ಲಿ ತೊಡಗಿಸಿಕೊಳ್ಳುವವರಿಗೆ ತೀವ್ರ ಸಮಸ್ಯೆ ಎದುರಾಗತೊಡಗಿದೆ.

