ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲೇಕ್ ಒಂಟಾರಿಯೊ ಹೆಸರನ್ನು ಬದಲಾಯಿಸುವುದಾಗಿ ಘೋಷಿಸಿದ ನಂತರ, ಗೂಗಲ್ ರವಿವಾರ ಅಮೆರಿಕನ್ ಬಳಕೆದಾರರಿಗೆ ಕಾಣಿಸುವ ತನ್ನ ಮ್ಯಾಪ್‌ನಲ್ಲಿ ಈ ಜಲಮೂಲವನ್ನು `ಲೇಕ್ ಅಮೆರಿಕ' ಎಂದು ಮರುನಾಮಕರಣ ಮಾಡಿದೆ.
ಕೆನಡಾದಲ್ಲಿರುವ ಜನರು ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಇನ್ನೂ 17 ನೇ ಶತಮಾನದಿಂದಲೂ ಬಳಕೆಯಲ್ಲಿರುವ ದೇಶೀಯ ಮೂಲದ `ಲೇಕ್ ಒಂಟಾರಿಯೊ' ಎಂಬ ಹೆಸರನ್ನೇ ನೋಡಲಿದ್ದಾರೆ ಎಂದು ಅಮೆರಿಕ ಮೂಲದ ಈ ಟೆಕ್ ಸಂಸ್ಥೆ ತಿಳಿಸಿದೆ.
ಅಮೆರಿಕದ ಅಧಿಕೃತ ಸರಕಾರಿ ಭೌಗೋಳಿಕ ಹೆಸರುಗಳ ಡೇಟಾಬೇಸ್ ಆದ `ಯುಎಸ್ ಜಿಯೋಗ್ರಾಫಿಕ್ ನೇಮ್ಸ್ ಇನ್ಫರ್ಮೇಷನ್ ಸಿಸ್ಟಮ್'ಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.
ಅಧಿಕೃತ ಸರಕಾರಿ ಮೂಲಗಳ ಹೆಸರು ಬದಲಾವಣೆಗಳನ್ನು ಪ್ರತಿಬಿಂಬಿಸಲು ನಾವು ಗೂಗಲ್ ಮ್ಯಾಪ್ಸ್ ಅನ್ನು ನವೀಕರಿಸುವುದರಿಂದ, ಅಮೆರಿಕದಲ್ಲಿ ಮ್ಯಾಪ್ಸ್ ಬಳಸುವ ಜನರು `ಲೇಕ್ ಅಮೆರಿಕ' ಎಂದು ನೋಡುತ್ತಾರೆ, ಕೆನಡಾದಲ್ಲಿರುವವರು `ಲೇಕ್ ಒಂಟಾರಿಯೊ' ಎಂದೇ ನೋಡುತ್ತಾರೆ; ಹಾಗೂ ಅಮೆರಿಕ ಮತ್ತು ಕೆನಡಾ ಹೊರತುಪಡಿಸಿ ಇತರ ದೇಶಗಳಲ್ಲಿರುವ ಜನರು ಎರಡೂ ಹೆಸರುಗಳನ್ನು ನೋಡುತ್ತಾರೆ' ಎಂದು ಗೂಗಲ್ ತನ್ನ ಬ್ಲಾಗ್‍ನಲ್ಲಿ ತಿಳಿಸಿದೆ.
ಆದರೆ, ಈ ಕ್ರಮವನ್ನು ಕೆನಡಾದ ಅಧಿಕಾರಿಯೊಬ್ಬರು `ಸಂಪೂರ್ಣವಾಗಿ ಹಿಮ್ಮುಖ ನಡೆ' ಎಂದು ತೀವ್ರವಾಗಿ ಟೀಕಿಸಿದ್ದಾರೆ.

