HEALTH TIPS

ವಾಹನಗಳು, ಶಾಲೆಗಳು, ಮತದಾರರ ಧರ್ಮವಾರು ಮಾಹಿತಿ ಕೋರಿದ ಜನಸಂಖ್ಯಾ ಸಮಿತಿ; ದಂಗಾದ ರಾಜ್ಯಗಳು!

ನವದೆಹಲಿ:  ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯೊಂದು ಮುಂದಿಟ್ಟಿರುವ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲು ರಾಜ್ಯ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಸಮಿತಿಯು ಕೋರಿರುವ ಧರ್ಮದ ಆಧಾರದ ಮೇಲೆ ಮಾಹಿತಿಯನ್ನು ಸಾಮಾನ್ಯವಾಗಿ ಸರಕಾರಿ ಇಲಾಖೆಗಳು ನಿರ್ವಹಿಸದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು thehindu.com ವರದಿ ಮಾಡಿದೆ.


ಜನಸಂಖ್ಯಾ ಬದಲಾವಣೆಗಳ ಕುರಿತ ಉನ್ನತ ಮಟ್ಟದ ಸಮಿತಿಯು ಕಳೆದ 15 ವರ್ಷಗಳ ಜನನ ಮತ್ತು ವಾಹನ ನೋಂದಣಿ, ಶಾಲಾ ದಾಖಲಾತಿ, ಆಸ್ತಿ ವಹಿವಾಟು ಹಾಗೂ ಧಾರ್ಮಿಕ ಕಟ್ಟಡಗಳ ವಿವರಗಳನ್ನು ಕೋರಿದೆ. ಇದರೊಂದಿಗೆ ಗುರುತಿನ ಚೀಟಿಗಳಲ್ಲಿ ಕಂಡುಬಂದಿರುವ ಅಸಾಮಾನ್ಯ ಏರಿಕೆ, ಪರಿಶಿಷ್ಟ ಪಂಗಡಗಳಲ್ಲಿನ ಮತಾಂತರದ ಗುಪ್ತಚರ ವರದಿಗಳು ಮತ್ತು ಸಕ್ರಿಯವಾಗಿರುವ ಬಂಧನ ಕೇಂದ್ರಗಳ ವಿವರಗಳನ್ನು ಕೇಳಿದೆ.

ಸಂವಿಧಾನದ ಜಾತ್ಯತೀತ ತತ್ವವು ಧಾರ್ಮಿಕ ವರ್ಗಗಳ ಅಡಿಯಲ್ಲಿ ದತ್ತಾಂಶ ಸಂಗ್ರಹಣೆಯನ್ನು ನಿಷೇಧಿಸಿರುವುದರಿಂದ ಸಮಿತಿಯು ಕೇಳಿರುವ 35 ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟಕರವಾಗಿದೆ ಎಂದು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ. ನವಜಾತ ಶಿಶುವಿನ ಜನನ ನೋಂದಣಿ ಮತ್ತು ಗಡೀಪಾರು ಮಾಡಲಾದ ವಲಸಿಗರ ಸಂಖ್ಯೆಯನ್ನು ಹೊರತುಪಡಿಸಿ, ಇತರ ಯಾವುದೇ ದತ್ತಾಂಶಗಳು ಧರ್ಮವಾರು ಆಧಾರದಲ್ಲಿ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

2006ರಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಬಿಜೆಪಿ, ಯುಪಿಎ ಸರಕಾರವು ನೇಮಿಸಿದ್ದ ಸಾಚಾರ್ ಸಮಿತಿಯ ಶಿಫಾರಸುಗಳನ್ನು ವಿರೋಧಿಸಿತ್ತು. ಅದು ಧಾರ್ಮಿಕ ಮೀಸಲಾತಿಯನ್ನು ಉತ್ತೇಜಿಸುತ್ತದೆ ಮತ್ತು ಸಾಮಾಜಿಕವಾಗಿ ವಿಭಜನೆ ಉಂಟುಮಾಡುತ್ತದೆ ಎಂದು ಹೇಳಿತ್ತು.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವೋಲೆಕರ್ ಅವರ ನೇತೃತ್ವದ ಈಗಿನ ಉನ್ನತ ಮಟ್ಟದ ಸಮಿತಿಯು ಅಕ್ರಮ ವಲಸೆಯಿಂದ ಉಂಟಾಗುವ ಜನಸಂಖ್ಯಾ ಬದಲಾವಣೆಗಳನ್ನು ಅಧ್ಯಯನ ಮಾಡಲು ಮೇ 26 ರಂದು ಗೃಹ ಸಚಿವಾಲಯದಿಂದ ರಚಿಸಲ್ಪಟ್ಟಿದೆ.

ಸಮಿತಿಯ ಪ್ರಶ್ನೆಗಳು ಐತಿಹಾಸಿಕ ಜನನ ದರಕ್ಕೆ ತಾಳೆಯಾಗದ ಅಸಾಮಾನ್ಯ ಶಾಲಾ ದಾಖಲಾತಿ, ಕಳೆದ 15 ವರ್ಷಗಳಲ್ಲಿ ಸ್ಥಾಪಿಸಲಾದ ಧಾರ್ಮಿಕ ಕಟ್ಟಡಗಳು ಮತ್ತು ಅವುಗಳ ಜಿಐಎಸ್ ಮ್ಯಾಪಿಂಗ್ ವಿವರಗಳನ್ನು ಒಳಗೊಂಡಿವೆ. ಕುಟುಂಬದ ಪರಂಪರೆಯ ದಾಖಲೆಗಳಿಲ್ಲದ ವ್ಯಕ್ತಿಗಳ ಧರ್ಮವಾರು ಮತದಾರರ ನೋಂದಣಿ ದತ್ತಾಂಶ ಹಾಗೂ ಪ್ರವೃತ್ತಿಗಳನ್ನೂ ಸಮಿತಿಯು ಕೇಳಿದೆ.

ವಿಶೇಷವಾಗಿ ಗಡಿ, ನಗರ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ಧಾರ್ಮಿಕ ಸಂಯೋಜನೆಯ ಬದಲಾವಣೆಗಳು, ಮತಾಂತರದ ವರದಿಗಳು ಹಾಗೂ ಕಲ್ಯಾಣ ಯೋಜನೆಗಳ ದುರುಪಯೋಗದ ಬಗ್ಗೆ ಮಾಹಿತಿ ಕೋರಲಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿನ ಮದರಸಾಗಳು ಸೇರಿದಂತೆ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ವಿವರಗಳು ಮತ್ತು ವಾಹನ ಪರವಾನಿಗೆಗಳ ಮಾಹಿತಿಯನ್ನೂ ಕೇಳಲಾಗಿದೆ.

ದಾಖಲೆರಹಿತ ವಲಸಿಗರ ಗುರುತಿಸುವಿಕೆ, ಬಂಧನ ಮತ್ತು ಅಪರಾಧ ನಂಟುಗಳ ಮಾಹಿತಿಯನ್ನು ಒದಗಿಸಲು ಸೂಚಿಸಲಾಗಿದೆ. ಅಕ್ರಮ ವಲಸೆ ತಡೆಯಲು ಜಾರಿಗೆ ತಂದಿರುವ ಕಾಯ್ದೆಗಳು ಮತ್ತು ಅಸಾಮಾನ್ಯ ಧಾರ್ಮಿಕ ಜನಸಂಖ್ಯಾ ಬದಲಾವಣೆಯನ್ನು ತಡೆಯಲು ಹೊಸ ಶಾಸನದ ಅಗತ್ಯವಿದೆಯೇ ಎಂಬ ಬಗ್ಗೆ ಸಮಿತಿಯು ಸಲಹೆ ಕೋರಿದೆ.

ಮೇ 27ರಂದು ಸರ್ವೋಚ್ಚ ನ್ಯಾಯಾಲಯವು ಬಿಹಾರದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಎತ್ತಿಹಿಡಿದು, ಪೌರತ್ವ ಪರಿಶೀಲನೆಗೆ ಚುನಾವಣಾ ಆಯೋಗಕ್ಕೆ ಅಧಿಕಾರವಿದೆ ಎಂದು ಹೇಳಿತ್ತು. 2003ರ ಮತದಾರರ ಪಟ್ಟಿಯಲ್ಲಿ ಹೆಸರುಗಳಿದ್ದು,ಭಾರತೀಯ ಪ್ರಜೆಗಳಲ್ಲ ಎಂಬ ಕಾರಣಕ್ಕೆ ಬಿಹಾರ ಎಸ್‌ಐಆರ್‌ನಲ್ಲಿ ಕೈಬಿಡಲಾದ ಮತದಾರರ ಹೆಸರರುಗಳನ್ನು ಮುಂದಿನ ನಾಲ್ಕು ವಾರಗಳಲ್ಲಿ ಉಲ್ಲೇಖಿಸುವಂತೆ ಅದು ಚುನಾವಣಾ ಆಯೋಗಕ್ಕೆ ನಿರ್ದೆಶನ ನೀಡಿತ್ತು. ಆಯೋಗವು ಈ ದತ್ತಾಂಶವನ್ನು ಸಮಿತಿಗೆ ಇನ್ನೂ ಒದಗಿಸಿಲ್ಲ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಸಮಿತಿಯು ಜಮ್ಮು ಪ್ರದೇಶಕ್ಕೆ ಭೇಟಿ ನೀಡಿದ್ದು, ಮುಂದಿನ ಹಂತದಲ್ಲಿ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದೆ ಎಂದು ವರದಿಯಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries