HEALTH TIPS

ಪತ್ನಿ ಒಪ್ಪಿಗೆಯಿಲ್ಲದ ಲೈಂಗಿಕ ಸಂಪರ್ಕ ಅತ್ಯಾಚಾರವೇ? ಕಾನೂನಿನಲ್ಲೇ ವಿನಾಯಿತಿ ಇರುವಾಗ ಪತಿ ವಿರುದ್ಧ ವಿಚಾರಣೆ ಹೇಗೆ ಸಾಧ್ಯ?: ದೇಶದ ಗಮನ ಸೆಳೆದ ಸುಪ್ರೀಂ ಕೋರ್ಟ್ ಪ್ರಶ್ನೆ..!

 ನವದೆಹಲಿ:"ಕಾನೂನಿನಲ್ಲಿ ವಿನಾಯಿತಿ ಇರುವಾಗ, ಪತ್ನಿಯ ಮೇಲಿನ ಅತ್ಯಾಚಾರಕ್ಕಾಗಿ ಪತಿಯನ್ನು ವಿಚಾರಣೆಗೆ ಒಳಪಡಿಸುವುದು ಹೇಗೆ? ವೈವಾಹಿಕ ಅತ್ಯಾಚಾರಕ್ಕೆ (Marital Rape) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎತ್ತಿರುವ ಈ ಒಂದು ಪ್ರಶ್ನೆ ಈಗ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. 


ಪತ್ನಿಯೊಬ್ಬರು ಪತಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿ ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಬುಧವಾರ ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನು ವಿನಾಯಿತಿಯನ್ನು ಪ್ರಸ್ತಾಪಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್‌ 375ರಲ್ಲಿರುವ ವಿನಾಯಿತಿ 2 ಜಾರಿಯಲ್ಲಿರುವಾಗ ಪತ್ನಿಯ ಮೇಲಿನ ಅತ್ಯಾಚಾರ ಆರೋಪದಲ್ಲಿ ಪತಿ ವಿರುದ್ಧ ಪ್ರಕರಣ ಮುಂದುವರಿಸುವುದು ಹೇಗೆ ಸಾಧ್ಯ ಎಂದು ಪತ್ನಿಯ ಪರ ವಕೀಲರನ್ನು ಪ್ರಶ್ನಿಸಿದೆ.

“ಕಾನೂನಿನಲ್ಲಿ ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ ಇರುವಾಗ ಪತ್ನಿಯ ಮೇಲಿನ ಅತ್ಯಾಚಾರ ಆರೋಪದಲ್ಲಿ ಪತಿ ವಿರುದ್ಧ ಹೇಗೆ ವಿಚಾರಣೆ ನಡೆಸಬಹುದೇ? ಇದನ್ನು ಹೇಗೆ ಸಮನ್ವಯಗೊಳಿಸುತ್ತೀರಿ?” ಎಂದು ಪೀಠ ಪ್ರಶ್ನಿಸಿತು.

ಬಲವಂತದ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪದಡಿ ಐಪಿಸಿ ಸೆಕ್ಷನ್‌ 375ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಪತಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಐಪಿಸಿ ಸೆಕ್ಷನ್‌ 375ರ ವಿನಾಯಿತಿ 2ರ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಲ್ಲದ ತನ್ನ ಪತ್ನಿಯೊಂದಿಗೆ ಪುರುಷ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ಪತಿ ವಾದಿಸಿದ್ದರು. ಆದರೆ, ಹೈಕೋರ್ಟ್‌ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.ಸುಪ್ರೀಂ ಕೋರ್ಟ್‌ನಲ್ಲಿ ಪತಿಯ ಪರ ವಕೀಲರು, ಈ ವಿನಾಯಿತಿ ಇನ್ನೂ ಜಾರಿಯಲ್ಲಿದೆ ಎಂದು ವಾದಿಸಿದರು.

ಇದರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ 2024ರಿಂದ ಬಾಕಿ ಇದ್ದು, ಸಂವಿಧಾನ ಪೀಠ ಈ ಕುರಿತು ಇನ್ನೂ ಅಂತಿಮ ತೀರ್ಪು ನೀಡಿಲ್ಲ ಎಂದು ಅವರು ತಿಳಿಸಿದರು.

ಇದಕ್ಕೆ ಪತ್ನಿಯ ಪರ ವಕೀಲರು, ವೈವಾಹಿಕ ಅತ್ಯಾಚಾರ ವಿನಾಯಿತಿಯನ್ನು ಪತಿಗೆ ಸಂಪೂರ್ಣ ರಕ್ಷಣೆಯಾಗಿ ಬಳಸಲು ಸಾಧ್ಯವಿಲ್ಲ. ವಿವಾಹದೊಳಗೂ ವ್ಯಕ್ತಿಯ ದೇಹದ ಮೇಲಿನ ಸ್ವಾಯತ್ತತೆಯ ಹಕ್ಕು ಅನ್ವಯಿಸುತ್ತದೆ ಎಂದು ವಾದಿಸಿದರು.

ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ಕಾನೂನಿನಲ್ಲಿ ವಿನಾಯಿತಿ ಇದೆ. ಅದನ್ನು ರದ್ದುಗೊಳಿಸುವವರೆಗೆ ಅದು ಕಾನೂನಾಗಿಯೇ ಇರುತ್ತದೆ. ಸೆಕ್ಷನ್‌ 375ರ ಅಡಿಯಲ್ಲಿ ಪ್ರಕರಣ ಮುಂದುವರಿಸಬಹುದೇ? ಅಥವಾ ಸೆಕ್ಷನ್‌ 498ಎ, ಕೌಟುಂಬಿಕ ಹಿಂಸಾಚಾರದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೇ?” ಎಂದು ಪ್ರಶ್ನಿಸಿದರು.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), 2023ರಲ್ಲೂ ಸೆಕ್ಷನ್‌ 63ರ ವಿನಾಯಿತಿ 2ರ ಮೂಲಕ ಇದೇ ವಿನಾಯಿತಿಯನ್ನು ಮುಂದುವರಿಸಲಾಗಿದೆ ಎಂದು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಗಮನಿಸಿದರು. ಇದರಿಂದ ಶಾಸನ ರೂಪಿಸುವವರು ಈ ವಿನಾಯಿತಿಯನ್ನು ಉದ್ದೇಶಪೂರ್ವಕವಾಗಿಯೇ ಮುಂದುವರಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ವೈವಾಹಿಕ ಅತ್ಯಾಚಾರದ ಕಾನೂನು ಮಾನ್ಯತೆ ಕುರಿತು ಸಂವಿಧಾನ ಪೀಠ ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ, ಪತ್ನಿಯೊಂದಿಗೆ ಆಕೆಯ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಪರ್ಕ ಹೊಂದಿದ ಆರೋಪವೊಂದೇ ಇದ್ದಲ್ಲಿ, ಪ್ರತ್ಯೇಕ ವಾಸ ಅಥವಾ ಗಂಭೀರ ಕ್ರೌರ್ಯದಂತಹ ಅಂಶಗಳಿಲ್ಲದೆ ಪತಿ ವಿರುದ್ಧ ಅತ್ಯಾಚಾರ ಆರೋಪವನ್ನು ಕೆಳ ನ್ಯಾಯಾಲಯಗಳು ರೂಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತು.

ಈ ವಿವಾದಕ್ಕೆ ಸಂಬಂಧಿಸಿದ ಬಾಕಿ ಇರುವ ಅರ್ಜಿಗಳನ್ನು ಮೂರು ವಾರಗಳ ಬಳಿಕ ಅಂತಿಮ ವಿಚಾರಣೆಗೆ ಪಟ್ಟಿ ಮಾಡುವುದಾಗಿ ನ್ಯಾಯಾಲಯ ತಿಳಿಸಿದ್ದು, ಅಕ್ಟೋಬರ್‌ 14ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಅಪ್ರಾಪ್ತಳಲ್ಲದ ಪತ್ನಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದರೆ ಪತಿಗೆ ಅತ್ಯಾಚಾರ ಪ್ರಕರಣದಿಂದ ಕಾನೂನು ರಕ್ಷಣೆ ಇರಬೇಕೇ ಎಂಬ ಮಹತ್ವದ ಪ್ರಶ್ನೆಯನ್ನು ಈ ಪ್ರಕರಣಗಳು ಒಳಗೊಂಡಿವೆ.

ಈ ಹಿಂದೆ ಜಾರಿಯಲ್ಲಿದ್ದ ಐಪಿಸಿ ಸೆಕ್ಷನ್‌ 375ರ ವಿನಾಯಿತಿ ಪ್ರಕಾರ, ಅಪ್ರಾಪ್ತಳಲ್ಲದ ತನ್ನ ಪತ್ನಿಯೊಂದಿಗೆ ಪುರುಷ ನಡೆಸುವ ಲೈಂಗಿಕ ಸಂಪರ್ಕ ಅಥವಾ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ. ಐಪಿಸಿಯನ್ನು ಇದೀಗ ರದ್ದುಪಡಿಸಿ ಅದರ ಬದಲಿಗೆ ಭಾರತೀಯ ನ್ಯಾಯ ಸಂಹಿತೆ, 2023 ಜಾರಿಗೆ ತರಲಾಗಿದೆ.

2023ರ ಜನವರಿ 16ರಂದು ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ಕುರಿತು ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಕೋರಿತ್ತು. ಬಳಿಕ ಬಿಎನ್‌ಎಸ್‌ನಲ್ಲಿನ ಸಂಬಂಧಿತ ನಿಯಮವನ್ನು ಪ್ರಶ್ನಿಸಿದ ಮತ್ತೊಂದು ಅರ್ಜಿಯ ಮೇಲೂ ಕೇಂದ್ರಕ್ಕೆ ನೋಟಿಸ್‌ ಜಾರಿಗೊಳಿಸಿತ್ತು.

ಈ ಅರ್ಜಿಗಳಲ್ಲಿ ಒಂದಕ್ಕೆ ದೆಹಲಿ ಹೈಕೋರ್ಟ್‌ನ 2022ರ ಮೇ 11ರ ವಿಭಜಿತ ತೀರ್ಪು ಸಂಬಂಧಿಸಿದೆ. ನ್ಯಾಯಮೂರ್ತಿ ರಾಜೀವ್‌ ಶಕ್ಧರ್‌ ವೈವಾಹಿಕ ಅತ್ಯಾಚಾರ ವಿನಾಯಿತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದರೆ, ನ್ಯಾಯಮೂರ್ತಿ ಸಿ. ಹರಿ ಶಂಕರ್‌ ಅದನ್ನು ಎತ್ತಿಹಿಡಿದಿದ್ದರು. ಈ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮತ್ತೊಂದು ಅರ್ಜಿ ಕರ್ನಾಟಕ ಹೈಕೋರ್ಟ್‌ನ ತೀರ್ಪಿಗೆ ಸಂಬಂಧಿಸಿದ್ದು, ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪತಿ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡಲಾಗಿತ್ತು.

ಈ ವಿಚಾರವು ವ್ಯಾಪಕ ಸಾಮಾಜಿಕ ಪರಿಣಾಮಗಳನ್ನು ಹೊಂದಿದ್ದು, ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಿಳಿಸಿತ್ತು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries