ಕೀವ್: ತನ್ನ ಮೇಲೆ ಒಂದು ಸಾವಿರಕ್ಕೂ ಹೆಚ್ಚಿನ ಡ್ರೋನ್‌ಗಳಿಂದ ದಾಳಿ ನಡೆಸಿದ್ದ ಉಕ್ರೇನ್ ಮೇಲೆ ರಷ್ಯಾ ಪಡೆಗಳು ಭಾನುವಾರ ರಾತ್ರಿ ಡ್ರೋನ್ ಪ್ರತಿದಾಳಿ ನಡೆಸಿವೆ.
ಉಕ್ರೇನ್‌ನ ಒಂಬತ್ತು ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ದಕ್ಷಿಣ ನಗರವಾದ ಜಪೋರಿಝಿಯಾ ಮೇಲೆ ನಡೆದ ದಾಳಿಯಿಂದ ಅಪಾರ್ಟ್‌ಮೆಂಟ್ ಬ್ಲಾಕ್‌ಗಳು, ವಿಶ್ವವಿದ್ಯಾಲಯ ಮತ್ತು ಶಾಪಿಂಗ್ ಮಾಲ್ ಸೇರಿದಂತೆ ವಿವಿಧ ಕಟ್ಟಡಗಳಿಗೆ ಹಾನಿಯಾಗಿದೆ. ಐವರು ಗಾಯಗೊಂಡಿದ್ದಾರೆ.
ರಷ್ಯಾ ಹಾರಿಸಿದ್ದ 148 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್‌ನ ವಾಯುಪಡೆ ತಿಳಿಸಿದೆ.
'ರಷ್ಯಾ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಯುದ್ಧವನ್ನು ಮತ್ತಷ್ಟು ವಿಸ್ತರಿಸಲು ಸಿದ್ಧವಾಗಿರುವುದಕ್ಕೆ ಹಲವು ನಿದರ್ಶನಗಳಿವೆ. ಜಂಟಿ ಪ್ರಯತ್ನಗಳ ಮೂಲಕ ಶಾಂತಿಯನ್ನು ಹೇಗೆ ಸಾಧಿಸಬಹುದು ಎಂಬುದರ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸುತ್ತೇವೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ತಿಳಿಸಿದ್ದಾರೆ.
'ಉಕ್ರೇನ್‌ನ ಸರಕು ಸಾಗಣೆ ವ್ಯವಸ್ಥೆ, ಗೋದಾಮು, ಬಂದರು ಸೇರಿದಂತೆ ಸೇನೆಗೆ ಸಂಬಂಧಿತ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ' ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
'ರಷ್ಯಾದ ಪ್ರದೇಶಗಳು ಮತ್ತು ಕಪ್ಪು ಸಮುದ್ರದ ಮೇಲೆ ಉಕ್ರೇನ್ ಹಾರಿಸಿದ 244 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ' ಎಂದು ಹೇಳಿದೆ.
ನಿಲ್ಲದ ಸಂಘರ್ಷ: ಉಭಯ ದೇಶಗಳ ನಡುವೆ ಸಂಘರ್ಷ ಏರ್ಪಟ್ಟು ನಾಲ್ಕು ವರ್ಷಗಳಿಗೂ ಹೆಚ್ಚು ಸಮಯವಾಗಿದ್ದರೂ, ಯುದ್ಧವನ್ನು ನಿಲ್ಲಿಸಲು ರಾಜತಾಂತ್ರಿಕ ಪ್ರಯತ್ನಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹೀಗಾಗಿ, ನಿರಂತರವಾಗಿ ದಾಳಿಗಳು ನಡೆಯುತ್ತಿವೆ.
ಈ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ನಾಯಕರು ಒಂದೆಡೆ ಸೇರುತ್ತಿದ್ದರೂ ಯುದ್ಧ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ನ್ಯೂಯಾರ್ಕ್‌ನಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾಗವಹಿಸುತ್ತಿಲ್ಲ.
ನೆರೆಯ ರಾಷ್ಟ್ರದೊಳಗೆ ನುಗ್ಗುತ್ತಿವೆ ಡ್ರೋನ್‌ಗಳು
ರಷ್ಯಾ ಹಾಗೂ ಉಕ್ರೇನ್ ನಡುವಿನ ವೈಮಾನಿಕ ದಾಳಿಯಿಂದಾಗಿ ಡ್ರೋನ್‌ಗಳು ನೆರೆಯ ರಾಷ್ಟ್ರಗಳ ಗಡಿಯೊಳಗೆ ಪದೇಪದೇ ನುಗ್ಗುತ್ತಿವೆ. ರಷ್ಯಾ ಬಗ್ಗೆ ಜಾಗರೂಕರಾಗಿರುವ ಮತ್ತು ಸಂಘರ್ಷದೊಳಗೆ ಎಳೆಯಲ್ಪಡುವ ಭೀತಿಯಲ್ಲಿರುವ ಆ ದೇಶಗಳ ನಾಯಕರನ್ನು ಆತಂಕಕ್ಕೀಡುಮಾಡಿದೆ. 'ಸೋಮವಾರ ಮಧ್ಯರಾತ್ರಿ ದೇಶದೊಳಗೆ ವೈಮಾನಿಕ ವಸ್ತುವೊಂದು ಪ್ರವೇಶಿಸಿರುವುದನ್ನು ಕಣ್ಗಾವಲು ವ್ಯವಸ್ಥೆಗಳು ಪತ್ತೆಹಚ್ಚಿದವು. ಹೀಗಾಗಿ ದೇಶದ ಉತ್ತರದ ವೈಮಾನಿಕ ವಲಯದ ಒಂದು ಭಾಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು' ಎಂದು ಮಾಲ್ಡೋವಾದ ರಕ್ಷಣಾ ಸಚಿವಾಲಯ ತಿಳಿಸಿದೆ. ರೋಮಾನಿಯಾದ ವಾಯುಪ್ರದೇಶದೊಳಗೂ ಡ್ರೋನ್‌ಗಳು ನುಗ್ಗುವುದು ಹೆಚ್ಚಾಗಿವೆ.

