ಬದಿಯಡ್ಕ: ದೇಶದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಸಂಘಟನೆ ತನ್ನದೇ ಆದ ಉದ್ದೇಶ ಮತ್ತು ಸಿದ್ಧಾಂತಗಳೊಂದಿಗೆ ಕಾರ್ಯನಿರ್ವಹಿಸಿದರೂ, ಅದರ ಕಾರ್ಯಚಟುವಟಿಕೆಗಳು ಅಂತಿಮವಾಗಿ ಸಮಾಜದ ಹಾಗೂ ದೇಶದ ಹಿತಕ್ಕೆ ಪೂರಕವಾಗಿರಬೇಕು ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.
ಅವರು ಕೇರಳ ಕನ್ನಡ ಸಾಹಿತ್ಯ ಸಾಂಸ್ಕøತಿಕ ಪರಿಷತ್ತಿನ (ಮೀಡಿಯಾ ಕ್ಲಾಸಿಕಲ್ಸ್) ಬದಿಯಡ್ಕದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿ, ಧರ್ಮ, ಭಾಷೆ, ಪ್ರದೇಶ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ದೇಶದ ಏಕತೆ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆಗಳು ಕಾರ್ಯನಿರ್ವಹಿಸಬೇಕು. ಯುವಜನರಿಗೆ ಉತ್ತಮ ಮಾರ್ಗದರ್ಶನ ನೀಡುವುದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಹಕಾರ ನೀಡುವುದು, ಪರಿಸರ ಸಂರಕ್ಷಣೆ, ಸಾರ್ವಜನಿಕ ಸೇವೆ ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಸಂಘಟನೆಗಳ ಪ್ರಮುಖ ಆದ್ಯತೆಯಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ ವಹಿಸಿದ್ದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶಿವರೆಡ್ಡಿ, ಎ.ಆರ್.ಸುಬ್ಬಯ್ಯಕಟ್ಟೆ ಹಾಗೂ ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ಯಾಮಪ್ರಸಾದ ಮಾನ್ಯ ಶುಭ ಹಾರೈಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಗಂಗಾಧರ ಗೋಳಿಯಡ್ಕ, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚಿನಿಯಪ್ಪ ನಾಯ್ಕ, ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಆಯಿಷಾ ಎ.ಎ.ಪೆರ್ಲ, ಧಾರ್ಮಿಕ ಮುಖಂಡ ರಾಮನಾಥ ರೈ ಮೇಗಿನ ಕಡಾರು, ಸುಂದರ ಬಾರಡ್ಕ, ನಾರಾಯಣ ಗೋಸಾಡ, ಪಿ. ಜಿ ಚಂದ್ರಹಾಸ ರೈ, ಈಶ್ವರ ಮಾಸ್ತರ್, ಅನಂತಕುಮಾರ್ ಬರ್ಲಾ, ಹರೀಶ್ ಗೋಸಾಡ, ತಾರನಾಥ ರೈ ಉಪಸ್ಥಿತರಿದ್ದರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಅಖಿಲೇಶ್ ನಗುಮುಗಂ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಕರುಣಾಕರನ್ ಆದೂರು ವಂದಿಸಿದರು. ಗಾಯಕ ವಸಂತ ಬಾರಡ್ಕ ಮತ್ತು ಲೀಲಾವತಿ ಕನಕಪಾಡಿ ಅವರ ಗಾಯನ ಕಾರ್ಯಕ್ರಮಕ್ಕೆ ಮೆರುಗು ತಂದಿತು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು:
ಪದಗ್ರಹಣ ಸ್ವೀಕರಿಸಿ ಮಾತನಾಡಿದ ಪರಿಷತ್ತಿನ ನೂತನ ಅಧ್ಯಕ್ಷ ಮೊಹಮ್ಮದ್ ಅಲಿ ಪೆರ್ಲ ಅವರು, ಬದಿಯಡ್ಕ ಕಾಸರಗೋಡು ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದ್ದು, ವಿವಿಧ ಭಾಷೆ, ಆಚಾರ-ವಿಚಾರ ಮತ್ತು ಸಂಸ್ಕೃತಿಗಳ ಸಮ್ಮಿಲನದ ನೆಲೆಯಾಗಿದೆ. ಇಂತಹ ಪ್ರದೇಶದಲ್ಲಿ ನಿರಂತರವಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.
ಬದಿಯಡ್ಕ ಕನ್ನಡ ಭಾಷೆಯ ಪ್ರಾಬಲ್ಯವಿರುವ ಪ್ರದೇಶವಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ಕನ್ನಡದ ಉಳಿವು ಮತ್ತು ಅಭಿವೃದ್ಧಿಗಾಗಿ ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದು ಅವರು ಹೇಳಿದರು.
ವಿದ್ಯಾಭ್ಯಾಸದ ಸಂದರ್ಭದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿ ಕನ್ನಡ ಭಾಷೆಗಾಗಿ ಕೆಲಸ ಮಾಡಿದ್ದನ್ನು ಸ್ಮರಿಸಿದ ಅವರು, ಶ್ರೀಯುತ ಕೇಳು ಮಾಸ್ತರ್ ಅವರ ಸಹಕಾರದೊಂದಿಗೆ ಕನ್ನಡ ಸಿರಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿಯೂ ಈ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದರು.
ವಿಶೇಷವಾಗಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಕೂಡ 'ಕನ್ನಡ ಸಿರಿ' ಸೇರಿದಂತೆ ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಯುವಜನರನ್ನು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯೊಂದಿಗೆ ಮತ್ತಷ್ಟು ಬೆಸೆಯುವ ನಿಟ್ಟಿನಲ್ಲಿ ಪರಿಷತ್ತು ಮುಂದಿನ ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಮೊಹಮ್ಮದ್ ಅಲಿ ಪೆರ್ಲ ಹೇಳಿದರು.
ಕನ್ನಡ ಸಿರಿ ಮಾಸಿಕ ಕಾರ್ಯಕ್ರಮಕ್ಕೆ ನಿರ್ಧಾರ:
ಇದೇ ಸಂದರ್ಭದಲ್ಲಿ ಡಾ.ಬೇ.ಸಿ. ಗೋಪಾಲಕೃಷ್ಣ ಭಟ್ ಅವರಿಗೆ ಕನ್ನಡ ಸಿರಿ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಲು ತೀರ್ಮಾನಿಸಲಾಯಿತು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಒಳಗೊಂಡಂತೆ ಪ್ರತಿತಿಂಗಳು ಕನ್ನಡ ಸಿರಿ ಕಾರ್ಯಕ್ರಮವನ್ನು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

.jpg)
.jpg)
