ಠಾಣೆ: ಮಹಾರಾಷ್ಟ್ರದ ಠಾಣೆ ನಗರದಲ್ಲಿ ಸ್ಥಳೀಯ ಶಿವಸೇನಾ ನಾಯಕ ಪ್ರದೀಪ್ ಪೂರ್ಣೇಕರ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯ ವೇಳೆ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರದೀಪ್ ಪೂರ್ಣೇಕರ್ ಅವರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ(ಯುಬಿಟಿ) ಪಕ್ಷದ ಠಾಣೆಯ ವಿಭಾಗೀಯ ಮುಖ್ಯಸ್ಥ ಆಗಿದ್ದರು.
ಮಂಗಳವಾರ(ಸೆ.29) ರಾತ್ರಿ ಸುಮಾರು 9 ಗಂಟೆಗೆ ಕಾಪೂರ್‌ಬಾವಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಾಳಿಯ ನಂತರ, ಪೂರ್ಣೇಕರ್ ಅವರನ್ನು ಘೋಡ್‌ಬಂದರ್ ರಸ್ತೆಯಲ್ಲಿರುವ ಇನ್ಫಿನಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಕ್ಷಣ ತುರ್ತು ಚಿಕಿತ್ಸೆ ನೀಡಲಾಯಿತು. ಅವರಿಗೆ ತೀವ್ರ ಗುಂಡೇಟಿನ ಗಾಯಗಳಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ರಾಜಕೀಯ ವೈರತ್ವ ಮತ್ತು ವೈಯಕ್ತಿಕ ದ್ವೇಷ ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ತನಿಖೆ ಮಾಡಲಾಗುತ್ತಿದೆ. ದುಷ್ಕರ್ಮಿಗಳು ಪರಾರಿಯಾದ ದಾರಿಯನ್ನು ಪತ್ತೆ ಮಾಡಲು ಸುತ್ತಮುತ್ತಲಿನ ಪ್ರಮುಖ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಘಟನೆಯ ಕುರಿತು ಶೀಘ್ರ ತನಿಖೆ ನಡೆಸಬೇಕೆಂದು ಪಕ್ಷದ ಹಿರಿಯ ನಾಯಕರು ಒತ್ತಾಯಿಸಿದ್ದಾರೆ.

