ಲಖನೌ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಬ್ರಜೇಶ್ ಪಾಠಕ್ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಠಕ್, ಯುವಕರು ಕೆಲಸವನ್ನು ಬೆನ್ನತ್ತಿ ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ಆಟೊ ಅಥವಾ ಟ್ಯಾಕ್ಸಿ ಓಡಿಸಿ ಹಣ ಗಳಿಸುವಂತೆ ಸಲಹೆ ನೀಡಿದ್ದಾರೆ.
'ಉದ್ಯೋಗದ ಗೋಜಿಗೆ ಹೋಗಬೇಡಿ, ಆಟೊ ರಿಕ್ಷಾ ಅಥವಾ ಟ್ಯಾಕ್ಸಿ ಓಡಿಸಿ ಹಣ ಸಂಪಾದಿಸಿ. ದಿನಕ್ಕೆ ಕೇವಲ 4 ಗಂಟೆ ಆಟೋ ಓಡಿಸಿ, ಉಳಿದ ಸಮಯವನ್ನು ಕುಟುಂಬದೊಂದಿಗೆ ಸಂತೋಷದಿಂದ ಕಳೆಯಿರಿ' ಎಂದಿದ್ದಾರೆ.
ಬ್ರಜೇಶ್ ಪಾಠಕ್ ಅವರು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡಿದ್ದು, ಜನರು ಹಾಗೂ ವಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಪಕ್ಷಗಳ ತರಾಟೆ
ಬ್ರಜೇಶ್ ಪಾಠಕ್ ಹೇಳಿಕೆಯನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಕಟುವಾಗಿ ಖಂಡಿಸಿದೆ. 'ಇಂದಿನ ಯುವಜನತೆಗೆ ದೇಶವನ್ನೇ ಆಳುವ ಸಾಮರ್ಥ್ಯವಿದೆ. ಬಿಜೆಪಿಗೆ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗದೆ ಇಂತಹ ಮೂರ್ಖತನದ ಸಲಹೆಗಳನ್ನು ನೀಡುತ್ತಿದೆ. ನಿಮಗೆ ಆಟೊ ಓಡಿಸಲು ಅಷ್ಟೊಂದು ಇಷ್ಟವಿದ್ದರೆ, ನಿಮಗೇ ಒಂದು ಆಟೋ ಕಳುಹಿಸಿಕೊಡುತ್ತೇನೆ' ಎಂದು ಸಮಾಜವಾದಿ ಪಕ್ಷದ ನಾಯಕರೊಬ್ಬರು ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ ನೆಟ್ಟಿಗರು ಕೂಡ ಡಿಸಿಎಂ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 'ನಿಮ್ಮ ಸ್ವಂತ ಮಕ್ಕಳಿಗೂ ಇದೇ ರೀತಿ ದಿನಕ್ಕೆ 4 ಗಂಟೆ ಆಟೊ ಓಡಿಸಲು ಸಲಹೆ ನೀಡುತ್ತೀರಾ? ಮೊದಲು ನಿಮ್ಮ ಕುಟುಂಬದಿಂದಲೇ ಈ ಪ್ರಯೋಗ ಆರಂಭಿಸಿ' ಎಂದು ಕಾಲೆಳೆದಿದ್ದಾರೆ.

