ನವದೆಹಲಿ: ಪಾಕಿಸ್ತಾನ ತನ್ನ ವಾಯುಪ್ರದೇಶ ಬಳಕೆಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪರ್ಯಾಯ ಮಾರ್ಗವಾಗಿ ಚೀನಾದ ಚಿನ್‌ಜಿಯಾಂಗ್ ವಾಯುಪ್ರದೇಶ ಬಳಸುವ ಕುರಿತು ಭಾರತವು ಚೀನಾ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಚೀನಾದ ಹೊತಾನ್ ಪ್ರದೇಶ ಮಾರ್ಗದ ಮೂಲಕ ವಿಮಾನ ಕಾರ್ಯಾಚರಣೆ ನಡೆಸುವ ಕುರಿತು ಕಳೆದೊಂದು ವರ್ಷದಿಂದ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರ್ಯಾಯ ಮಾರ್ಗಗಳ ಕುರಿತು ಚೀನಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಚೀನಾ ನಡುವೆ ರಾಜತಾಂತ್ರಿಕ ಸಂಬಂಧಗಳು ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುವಾಂಗ್‌ಝೌ ಮತ್ತು ನವದೆಹಲಿ ನಡುವಿನ ನೇರ ವಿಮಾನ ಸೇವೆಯನ್ನು ಸೆಪ್ಟೆಂಬರ್ 21ರಿಂದ ಪುನರಾರಂಭ ಮಾಡುವುದಾಗಿ 'ಚೀನಾ ಸದರನ್ ಏರ್‌ಲೈನ್ಸ್' ಷಿ ಜಿನ್‌ಪಿಂಗ್ ಭಾರತಕ್ಕೆ ಆಗಮಿಸುವ ಕೆಲವೇ ದಿನಗಳ ಮುನ್ನ ಘೋಷಣೆ ಮಾಡಿತ್ತು.
ಕೋವಿಡ್ ಹಾಗೂ ಭಾರತ-ಚೀನಾ ಗಡಿ ಉದ್ವಿಗ್ನತೆಯಿಂದ ಸ್ಥಗಿತಗೊಂಡಿದ್ದ ನೇರ ವಿಮಾನ ಸೇವೆಗಳನ್ನು ಮರುಸ್ಥಾಪಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚೀನಾ ಸದರನ್ ತಿಳಿಸಿತ್ತು. ದಕ್ಷಿಣ ಏಷ್ಯಾದಾದ್ಯಂತ 8 ಮಾರ್ಗಗಳಲ್ಲಿ ವಾರಕ್ಕೆ 100ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುವುದಾಗಿ ಅದು ತಿಳಿಸಿದೆ.
ಉಭಯ ದೇಶಗಳ ನಡುವೆ ಮೊದಲ ವಿಮಾನಯಾನ ಸೇವೆಯನ್ನು ಇಂಡಿಗೊ ಸಂಸ್ಥೆ ಆರಂಭಿಸಿತು. 2025ರ ಅಕ್ಟೋಬರ್‌ನಲ್ಲಿ ಕೋಲ್ಕತ್ತ-ಗುವಾಂಗ್‌ಝೌ ಹಾಗೂ ನವೆಂಬರ್‌ನಲ್ಲಿ ದೆಹಲಿ-ಗುವಾಂಗ್‌ಝೌ ಮಾರ್ಗದಲ್ಲಿ ಇಂಡಿಗೊ ವಿಮಾನಗಳು ಹಾರಾಟ ನಡೆಸುತ್ತಿವೆ.
'ಏರ್ ಇಂಡಿಯಾ' ಆರು ವರ್ಷಗಳ ಬಳಿಕ ಫೆಬ್ರುವರಿಯಲ್ಲಿ ದೆಹಲಿ ಮತ್ತು ಶಾಂಘೈ ನಡುವೆ ನೇರ ವಿಮಾನ ಸೇವೆಯನ್ನು ಮರುಸ್ಥಾಪಿಸಿತ್ತು. ಸದ್ಯ ವಾರಕ್ಕೆ ಐದು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

