ಕಾಸರಗೋಡು: ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ 25 ವರ್ಷ ಪೂರ್ಣಗೊಳಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರಮೋದಿಯವರ ಆರೋಗ್ಯ ಹಾಗೂ ಸುಖಕ್ಕಾಗಿ ಅವರ ಜನ್ಮ ದಿನವಾದ ಗುರುವಾರ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಲ್ಳಲಾಯಿತು.
ನರೇಂದ್ರ ಮೋದಿ ಅವರ ಹೆಸರಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಉದಯಾಸ್ತಮಾನ ಪೂಜೆ ಸಲ್ಲಿಸಲಾಯಿತು. ಇದರೊಂದಿಗೆ
ಒಂದು ತಿಂಗಳ ಕಾಲ ನಡೆಯಲಿರುವ "ಸೇವಾ ಸಂಕಲ್ಪ ಅಭಿಯಾನ" ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ, ಕಾರ್ಯದರ್ಶಿ ಪ್ರಮೀಳಾ ಮಜಲ್, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಜ್ಞಾನಿ ವ್ಯಾನಭೋಗ್, ಮಾಜಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಜನಪ್ರತಿನಿಧಿಗಳಾದ ಮಾಧವ, ಗಣೇಶ್ ಮಜಲು, ಯೋಗೀಶ್, ಮಹೇಶ್ ಮಧೂರು, ಅನಿಲ್ ಚಕ್ಕಣಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಮತಾ ಸಾಗರ್, ಅತಿಥಿ ಸೇರಿದಂತೆ ಹಲವರು ಭಾಗವಹಿಸಿದರು.
ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. 'ಸ್ವಪ್ನ ಭಾರತ, 'ವಿಕಸಿತ ಭಾರತ 2047' ಮುಂತಾದ ವಿಷಯಗಳನ್ನು ಆಧರಿಸಿ 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ 8ನೇ ತರಗತಿಯಿಂದ ಪ್ಲಸ್ ಟು ವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯೊಂದಿಗೆ ಭಾಷಣ ಸ್ಪರ್ಧೆ ನಡೆಸಲಾಗುವುದು. ನರೇಂದ್ರ ಮೋದಿಯವರ ಸಾರ್ವಜನಿಕ ಜೀವನ ಹಾಗೂ ಕಾರ್ಯಚಟುವಟಿಕೆಗಳನ್ನು ಆಧರಿಸಿ ಬೀದಿ ನಾಟಕಗಳನ್ನೂ ಆಯೋಜಿಸಲಾಗುವುದು ಎಂದು ಎಂ.ಎಲ್ ಅಶ್ವಿನಿ ತಿಳಿಸಿದರು.



