ಚೆನ್ನೈ: 'ಜೆನ್ ಝೀ' ಮತ್ತು 'ಜೆನ್ ಆಲ್ಫಾ' ಪೀಳಿಗೆಯವರು ನಾಯಕತ್ವ ವಹಿಸಿಕೊಳ್ಳಬೇಕು ಮತ್ತು ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದರು.
ಡಾ.ಎಂ.ಜಿ.ಆರ್ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯ 36ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 'ದೇಶವು ತಮಗೆ ಏನು ಮಾಡಿದೆ ಎಂದು ಕೇಳುವ ಬದಲು, ತಾವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಯೋಚಿಸುವ ಮೂಲಕ ದೇಶಕ್ಕೆ ಆದ್ಯತೆ ನೀಡಬೇಕು' ಅವರು ಕರೆ ನೀಡಿದರು.
'ಯುವಜನರ ಆಕಾಂಕ್ಷೆಗಳನ್ನು ಆಲಿಸಲು ದೇಶ ಸಿದ್ಧವಿದೆ. ಇದೇ ವೇಳೆ ಯುವಜನರೂ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಪ್ರಜ್ಞೆಯೊಂದಿಗೆ ಮುನ್ನಡೆಯಬೇಕು' ಎಂದು ಅವರು ಸಲಹೆ ನೀಡಿದರು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ನಾಯಕ್ವತ್ವ ವಹಿಸಿಕೊಳ್ಳಬೇಕು ಮತ್ತು ರಾಷ್ಟ್ರೀಯ ಹಿತಾಸಕ್ತಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದರು.
ರಷ್ಯಾ- ಉಕ್ರೇನ್ ಯುದ್ಧ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದ ಕಚ್ಚಾ ತೈಲ, ಅನಿಲ, ರಸಗೊಬ್ಬರ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಜಾಗತಿಕ ಅನಿಶ್ಚಿತತೆ ಉಂಟಾಗಿದ್ದರೂ ಭಾರತ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಜತೆಗೆ ಶೇಕಡ 7.8ರಷ್ಟು ಬೆಳವಣಿಗೆ ದರವನ್ನೂ ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಅಲೈಡ್ ಹೆಲ್ತ್ ಸೈನ್ಸ್, ಕಾನೂನು ಮತ್ತು ನಿರ್ವಹಣಾ ವಿಭಾಗಗಳಲ್ಲಿ 3,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.

