HEALTH TIPS

ಎಸ್‌ಐಆರ್‌: ಜ್ಞಾನೇಶ್‌ ಕುಮಾರ್ ಕಾರ್ಯವೈಖರಿಗೆ ಆಯೋಗದಲ್ಲೇ ಆಕ್ಷೇಪ

ನವದೆಹಲಿ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಸೇರಿದಂತೆ ಹಲವು ಪ್ರಮುಖ ವಿಷಯಗಳಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್‌' ವರದಿ ಮಾಡಿದೆ. 


ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾದ ಹಲವು ಆಡಳಿತಾತ್ಮಕ ಮತ್ತು ನೀತಿ ನಿರ್ಧಾರಗಳಿಗೆ ಕಳೆದ 10 ತಿಂಗಳಲ್ಲಿ ಇಬ್ಬರೂ ಆಯುಕ್ತರು 14 ಬಾರಿ ಲಿಖಿತ ಆಕ್ಷೇಪ ದಾಖಲಿಸಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ 2025ರ ನವೆಂಬರ್‌ನಿಂದ 2026ರ ಆಗಸ್ಟ್‌ವರೆಗೆ ಎಸ್‌ಐಆರ್‌, ಹಿರಿಯ ಅಧಿಕಾರಿಗಳ ನೇಮಕಾತಿ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳನ್ನು ಸಮಾಲೋಚನೆ ಇಲ್ಲದೆ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.

2025ರ ಜೂನ್‌ನಲ್ಲಿ ಬಿಹಾರದಲ್ಲಿ ಆರಂಭವಾದ ಎಸ್‌ಐಆರ್‌ ಪ್ರಕ್ರಿಯೆ ನಂತರ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿತ್ತು. ಈ ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಕೋಟ್ಯಂತರ ಹೆಸರುಗಳನ್ನು ಕೈಬಿಡಲಾಗಿದೆ.

ಫಾರ್ಮ್‌ 6ನಲ್ಲಿ ಬದಲಾವಣೆ: ಆಕ್ಷೇಪಗಳ ಪೈಕಿ ಹೊಸ ಮತದಾರರ ಸೇರ್ಪಡೆಗೆ ಬಳಸುವ ಫಾರ್ಮ್-6ರಲ್ಲಿ ಮಾಡಲಾದ ಬದಲಾವಣೆ ಪ್ರಮುಖವಾಗಿದೆ. ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಲು ಬಯಸುವವರು ತಾವು ಅಥವಾ ತಮ್ಮ ಪೋಷಕರು ಅಥವಾ ಅಜ್ಜ-ಅಜ್ಜಿಯರು ಹಿಂದಿನ ಎಸ್‌ಐಆರ್‌ ಪಟ್ಟಿಯಲ್ಲಿ ಇದ್ದರೇ ಎಂಬ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕೆಂಬ ಷರತ್ತು ಸೇರಿಸಲಾಗಿತ್ತು. ನಿಯಮಗಳಲ್ಲಿ ತಿದ್ದುಪಡಿ ಮಾಡದೆ ಅರ್ಜಿ ನಮೂನೆಯಲ್ಲಿ ಇಂತಹ ಬದಲಾವಣೆ ತರುವುದು ಕಾನೂನುಬಾಹಿರ ಎಂದು ವಿವೇಕ್ ಜೋಶಿ ಎಚ್ಚರಿಸಿದ್ದರು. ಸಂಧು ಅವರು ಈ ಕ್ರಮವನ್ನು 'ಅನಧಿಕೃತ ಮತ್ತು ಕಾನೂನುಬಾಹಿರ' ಎಂದು ಕರೆದಿದ್ದು, ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದ್ದರು.

ಗೋವಾ ಎಸ್‌ಐಆರ್‌: ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದ 97 ಅರ್ಹ ಮತದಾರರನ್ನು ಮರುಸೇರ್ಪಡೆಗೊಳಿಸಲು ಸ್ಥಳೀಯ ಚುನಾವಣಾ ಅಧಿಕಾರಿಗಳಿಗೆ ಸಾಫ್ಟ್‌ವೇರ್‌ ಅನ್ನೇ ನಿರ್ಬಂಧಿಸಲಾಗಿತ್ತು ಎಂಬ ವಿಷಯವನ್ನೂ ಅವರು ಪ್ರಸ್ತಾಪಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮತದಾರರು ದಾಖಲೆಗಳನ್ನು ಸಲ್ಲಿಸಿದ್ದರೂ, ಹೆಸರುಗಳನ್ನು ಮರುಸ್ಥಾಪಿಸಲು ಅಗತ್ಯವಾದ 'ರೋಲ್‌ಬ್ಯಾಕ್' ವ್ಯವಸ್ಥೆಯನ್ನು ಸಕ್ರಿಯಗೊಳಿಸುವಂತೆ ಗೋವಾ ಮುಖ್ಯ ಚುನಾವಣಾಧಿಕಾರಿಯ ಕಚೇರಿ ಫೆಬ್ರುವರಿ 11ರಿಂದ 17ರವರೆಗೆ ಎಂಟು ಬಾರಿ ಮನವಿ ಮಾಡಿತ್ತು. ಆದರೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಗಡುವು ಸಮೀಪಿಸುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮ ಬಂಗಾಳ ಎಸ್‌ಐಆರ್‌: ನ್ಯಾಯಾಂಗದ ಆದೇಶದ ಮೇರೆಗೆ ಮರು ಸೇರ್ಪಡೆಯಾಗಿದ್ದ ಮತದಾರರ ವಿರುದ್ಧ ಸಲ್ಲಿಸಲಾದ 16.1 ಲಕ್ಷ ಮೇಲ್ಮನವಿಗಳ ವಿಷಯದಲ್ಲೂ ಸುಖಬೀರ್ ಸಿಂಗ್ ಸಂಧು ಅನುಮಾನ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಹೆಸರಿನಲ್ಲಿ ಸಲ್ಲಿಸಲಾದ ಈ ಮೇಲ್ಮನವಿಗಳಿಗೆ ಯಾರು ಅನುಮತಿ ನೀಡಿದರು ಮತ್ತು ಆಯೋಗದ ಪರವಾಗಿ ಅವುಗಳನ್ನು ಯಾರು ಸಲ್ಲಿಸಿದರು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದ್ದಾರೆ.

ಈ ಕುರಿತು ತಮಗಾಗಲಿ, ವಿವೇಕ್ ಜೋಶಿಗಾಗಲಿ ಅಥವಾ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗಾಗಲಿ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಏಕಪಕ್ಷೀಯ ನಡೆ: ಸಂವಿಧಾನದ 324ನೇ ವಿಧಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ-2023ರ 18ನೇ ಕಲಂ ಪ್ರಕಾರ ಆಯೋಗದ ವ್ಯವಹಾರಗಳನ್ನು ಸರ್ವಾನುಮತದಿಂದ ಅಥವಾ ಬಹುಮತದ ನಿರ್ಧಾರದ ಆಧಾರದಲ್ಲಿ ನಡೆಸಬೇಕು. ಆದರೆ ಕೆಲವು ಆಡಳಿತಾತ್ಮಕ ಹಾಗೂ ಕಾರ್ಯನಿರ್ವಹಣಾ ನಿರ್ದೇಶನಗಳನ್ನು 'ಆಯೋಗದ ನಿರ್ಧಾರ' ಎಂಬ ಹೆಸರಿನಲ್ಲಿ ಜಾರಿಗೊಳಿಸಲಾಗಿದೆ ಎಂಬುದು ಸಂಧು ಮತ್ತು ಜೋಶಿ ಅವರ ಪ್ರಮುಖ ಆರೋಪವಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries