ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಬ್ಯಾವರಾ ಪಟ್ಟಣದ 20 ವರ್ಷದ ಯುವಕ ಕಲುಷಿತಗೊಂಡಿದ್ದ ಅಜ್ನಾರ್ ನದಿಯನ್ನು ಸ್ವತಃ ಕೈಯಾರೆ ಸ್ವಚ್ಛಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದ. ಇದೀಗ ಯುವಕ ಸುರೇಂದ್ರ ಸಿಂಗ್ ಚೌಧರಿಗೆ ಡಚ್ ಸಿಇಓ ಭರ್ಜರಿ ಅವಕಾಶವೊಂದನ್ನು ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅಜ್ನಾರ್ ನದಿ ಪ್ಲಾಸ್ಟಿಕ್ ತ್ಯಾಜ್ಯ, ಕಸದ ರಾಶಿ ಹಾಗೂ ಪಾಚಿಯಿಂದ ಕಲುಷಿತ ನದಿಯನ್ನು ಯಾರ ಸಹಾಯವೂ ಇಲ್ಲದೆ ತಾನೊಬ್ಬನೇ ಸ್ವಚ್ಛಗೊಳಿಸಿದ್ದ. ಸುರೇಂದ್ರ ಸಿಂಗ್ ಚೌಧರಿ ಅವರ ಪರಿಸರ ಕಾಳಜಿಗೆ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವ ಸಿಕ್ಕಿದೆ.
ಸಾಗರ ಹಾಗೂ ನದಿಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸುವ ಜಾಗತಿಕ ಮಟ್ಟದ ಖ್ಯಾತ 'ದಿ ಓಷನ್ ಕ್ಲೀನಪ್' ಸಂಸ್ಥೆಯ ಸಿಇಒ ಬೋಯನ್ ಸ್ಲ್ಯಾಟ್, ಈ ಯುವಕನ ಶ್ರಮಕ್ಕೆ ಮನಸೋತು ತಮ್ಮ ಸಂಸ್ಥೆಯಲ್ಲಿ ನೇರವಾಗಿ ಉದ್ಯೋಗದ ಆಫರ್ ನೀಡಿದ್ದಾರೆ.
ಸ್ವಚ್ಛತಾ ಕಾರ್ಯದ ವಿಡಿಯೊಗಳನ್ನು ಸುರೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಆ ವಿಡಿಯೊಗಳು ಕೋಟಿಗಟ್ಟಲೆ ವೀಕ್ಷಣೆ ಪಡೆದಕೊಂಡು ಎಲ್ಲರ ಗಮನ ಸೆಳೆದಿದ್ದವು. ಇದೇ ವಿಡಿಯೊವನ್ನು ಎಕ್ಸ್ನಲ್ಲಿ ಗಮನಿಸಿದ ಡಚ್ ಸಿಇಒ ಬೋಯನ್ ಸ್ಲ್ಯಾಟ್ ಅವರು, 'ನಮ್ಮೊಂದಿಗೆ ಬಂದು ಕೆಲಸ ಮಾಡಿ' ಎಂದು ಕಮೆಂಟ್ ಮೂಲಕ ಸುರೇಂದ್ರಗೆ ಆಹ್ವಾನ ನೀಡಿದ್ದಾರೆ.
ಕೆಲವು ಸ್ಥಳೀಯರಿಂದ ವ್ಯಂಗ್ಯಕ್ಕೊಳಗಾಗಿದ್ದ ಸುರೇಂದ್ರ ಅವರ ನಿರಂತರ ಪರಿಶ್ರಮ, ಇಂದು ಅವರನ್ನು ವಿಶ್ವದ ಅತಿದೊಡ್ಡ ಪರಿಸರ ಸಂರಕ್ಷಣಾ ಸಂಸ್ಥೆಯಲ್ಲಿ ಒಬ್ಬರಾಗುವ ಮಟ್ಟಿಗೆ ತಂದು ನಿಲ್ಲಿಸಿದೆ. ಕೇವಲ ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಜಗತ್ತನ್ನು ಹೇಗೆ ಬದಲಾಯಿಸಬಹುದು ಎನ್ನುವುದಕ್ಕೆ 20 ವರ್ಷದ ಯುವಕ ಸುರೇಂದ್ರ ಅವರು ಸಾಕ್ಷಿಯಾಗಿದ್ದಾರೆ.

ಎಕ್ಸ್ ಚಿತ್ರ

