ಚಂಡಿಗಢ: ಹರಿಯಾಣ ಸರಕಾರದೊಂದಿಗೆ ನಂಟು ಹೊಂದಿದ ಮತ್ತು ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕಿನಲ್ಲಿ ನಿರ್ವಹಿಸಲ್ಪಡುತ್ತಿದ್ದ ಬ್ಯಾಂಕ್ ಖಾತೆಗಳಿಂದ 645 ಕೋ.ರೂ. ದುರುಪಯೋಗ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಈ.ಡಿ.) ಮಂಗಳವಾರ ಹರಿಯಾಣ ಮತ್ತು ಪಂಜಾಬ್‌ನ ಕೆಲವು ಆಭರಣ ಮಳಿಗೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡೀಗಢ, ಮೊಹಲಿ (ಪಂಜಾಬ್) ಮತ್ತು ಪಂಚಕುಲ (ಹರಿಯಾಣ) ಪ್ರದೇಶಗಳ ಸುಮಾರು 14 ಸ್ಥಳಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ರಮವಾಗಿ ಗಳಿಸಿದ ಸಾರ್ವಜನಿಕ ಹಣವನ್ನು ವಿವಿಧ ಆಭರಣ ಮಳಿಗೆಗಳ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಲಾಗಿದೆ. ಅನಂತರ ಅದನ್ನು ವಹಿವಾಟು ಎಂದು ಬಿಂಬಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಅಪರಾಧದ ಆದಾಯವನ್ನು ಮರೆಮಾಚಿ, ಅದನ್ನು ಸಕ್ರಮ ಹಣವೆಂದು ಬಿಂಬಿಸುವ ಉದ್ದೇಶದಿಂದ ಆರೋಪಿಗಳೊಂಡನೆ ಶಾಮೀಲಾಗಿ ಈ ವಹಿವಾಟುಗಳನ್ನು ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ವಂಚನೆಯಲ್ಲಿ ಐಎಎಸ್ ಅಧಿಕಾರಿಗಳು ಹಾಗೂ ಸರಕಾರಿ ನೌಕರರು ಭಾಗಿಯಾಗಿದ್ದಾರೆ. ಅವರಿಗೆ ತಲುಪಿದ ಅಕ್ರಮ ಹಣವನ್ನು ಆಭರಣ ವ್ಯಾಪಾರಿಗಳು ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಇತ್ತೀಚೆಗೆ ಪಂಚಕುಲ ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೂರನೇ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಹರ್ಯಾಣ ಕೇಡರ್‌ನ ಐಎಎಸ್ ಅಧಿಕಾರಿಗಳು ಮತ್ತು ಇತರ ಸರಕಾರಿ ನೌಕರರನ್ನು ಹೆಸರಿಸಿದೆ.
ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ನಾಲ್ವರನ್ನು ಬಂಧಿಸಿದೆ, 14 ಸಂಸ್ಥೆಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ ಮತ್ತು 211 ಕೋ.ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

