HEALTH TIPS

El Nino: ದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಸಾವು ಸಾಧ್ಯತೆ;ತಜ್ಞರ ಎಚ್ಚರಿಕೆ

ನವದೆಹಲಿ: ದೇಶದ ವಿವಿಧೆಡೆ ಬರ ತಾಂಡವವಾಡುತ್ತಿದೆ. ಎಲ್ ನಿನೊ ಪರಿಣಾಮ ಮಳೆ ಕುಸಿತವಾಗಿ, ಒಣಹವೆ ಆವರಿಸಿದೆ. ಕೆಲವೆಡೆ ಬೆಳೆ ಒಣಗುತ್ತಿದ್ದರೆ, ಮತ್ತೆ ಕೆಲವೆಡೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇದರ ಪರಿಣಾಮ ಇಷ್ಟಕ್ಕೇ ನಿಲ್ಲುವುದಿಲ್ಲ. ಜನರ ಜೀವಕ್ಕೂ ಅಪಾಯವಿದೆ ಎಂಬ ವರದಿ ಬಂದಿದೆ.


ದೇಶದಲ್ಲೀಗ, 'ಸೂಪರ್ ಎಲ್ ನಿನೊ' ಪ್ರಭಾವವಿದ್ದು, ಉಷ್ಣಾಂಶ ಹೆಚ್ಚಳ, ಬಿಸಿಗಾಳಿ ಸಂಬಂಧಿತ ಅವಘಡಗಳಲ್ಲಿ ಈ ವರ್ಷದ ಸೆಪ್ಟೆಂಬರ್‌ನಿಂದ 2027ರ ಸೆಪ್ಟೆಂಬರ್ 23ರವರೆಗಿನ ಅವಧಿಯಲ್ಲಿ ಸುಮಾರು 15,800 ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಹವಾಮಾನದ ಬದಲಾವಣೆಯ ಪರಿಣಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ವರದಿ ತಿಳಿಸಿದೆ ಎಂಬುದಾಗಿ 'ದಿ ಹಿಂದೂ' ವರದಿ ಮಾಡಿದೆ.

ಜಾಗತಿಕವಾಗಿ 4.51 ಲಕ್ಷ ಮಂದಿ ಸಾವು ಸಾಧ್ಯತೆ

ಇನ್ನೂ, ಜಾಗತಿಕವಾಗಿ ಎಲ್ ನಿನೊ ಪರಿಣಾಮದಿಂದ ಮೊದಲ ಆರು ತಿಂಗಳಲ್ಲಿ 4.51 ಲಕ್ಷ ಮಂದಿ ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ. 2026ರ ಸೆಪ್ಟೆಂಬರ್ ಮತ್ತು 2027ರ ಫೆಬ್ರುವರಿ ನಡುವೆಯೇ 2.39 ಲಕ್ಷ ಮಂದಿ ಸಾಯುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ. ಇಂಡೋನೇಷ್ಯಾದಲ್ಲಿ 19,300, ಫಿಲಿಪ್ಪಿನ್ಸ್, ವಿಯೆಟ್ನಾಂ, ಥಾಯ್ಲೆಂಡ್, ಕಾಂಬೋಡಿಯಾಗಳಲ್ಲಿ 19,400, ಬ್ರೆಜಿಲ್‌ನಲ್ಲಿ 13,300 ಮತ್ತು ಸೆನೆಗಲ್, ಗ್ಯಾಂಬಿಯಾ, ಉತ್ತರ ನೈಜೀರಿಯಾ ಸೇರಿ ಆಫ್ರಿಕಾದ ಸುಮಾರು 10 ದೇಶಗಳನ್ನು ಒಳಗೊಂಡ 5,000 ಕಿ.ಮೀ ವಿಸ್ತಾರವಿರುವ 'ಸಾಹೇಲ್'ನಲ್ಲಿ 66,800 ಮಂದಿ ಮೃತರಾಗಬಹುದು ಎಂದು ಅಂದಾಜಿಸಲಾಗಿದೆ.

ಎಲ್ ನಿನೊ ಪ್ರಭಾವದಿಂದ ಲಕ್ಷಾಂತರ ಜನರ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ ಯಾವ ರೀತಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ತಜ್ಞರಿಗೆ ಈ ವರದಿ ಅನುಕೂಲಕರವಾಗಿದೆ ಎಂದು ಷಿಕಾಗೊ ವಿಶ್ವವಿದ್ಯಾಲಯದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್‌ನ ಸಹ-ಸಂಸ್ಥಾಪಕ ಮೈಕೆಲ್ ಗ್ರೀನ್‌ಸ್ಟೋನ್ ತಿಳಿಸಿದ್ದಾರೆ.

'ಸೂಪರ್ ಎಲ್ ನಿನೊ' ಎನ್ನುವುದೇಕೆ?

ಅಸಾಮಾನ್ಯ ಎಲ್ ನಿನೊ ಪರಿಸ್ಥಿತಿಗಳನ್ನು ಸೃಷ್ಟಿಸುವ ಸಾಧ್ಯತೆ ಇರುವುದರಿಂದ ಇದನ್ನು 'ಸೂಪರ್ ಎಲ್ ನಿನೊ' ಎಂದು ಕರೆಯಲಾಗಿದೆ. ಮಧ್ಯ ಮತ್ತು ಪೂರ್ವ ಪೆಸಿಫಿಕ್‌ ಸಾಗರದಲ್ಲಿ ನೀರು ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗುವ ಪ್ರಕ್ರಿಯೆಯನ್ನು ಎಲ್ ನಿನೊ ಎನ್ನಲಾಗುತ್ತದೆ. ಇದರ ಪರಿಣಾಮ, ಜಗತ್ತಿನಾದ್ಯಂತ ಮಳೆ ಮತ್ತು ಉಷ್ಣಾಂಶದಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ತಿಂಗಳ ಆರಂಭದಲ್ಲಿ ಹೊರಬಿದ್ದ ವರದಿ ಪ್ರಕಾರ, ಉತ್ತರ ಗೋಳಾರ್ಧದ ಮೇಲೆ ಬಲವಾದ ಎಲ್ ನಿನೊ ಪರಿಣಾಮ ಬೀರುವ ಸಾಧ್ಯತೆ ಶೇ 90ಕ್ಕಿಂತ ಹೆಚ್ಚಾಗಿದೆ. ಪೆಸಿಫಿಕ್ ಸಮುದ್ರದ ಮೇಲ್ಮೈ ತಾಪಮಾನವು ಈಗಾಗಲೇ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಭವಿಷ್ಯದ ಜೀವಹಾನಿ ತಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪರಿಸರ ತಜ್ಞರು ಒತ್ತಾಯಿಸಿದ್ದಾರೆ.

ಸೂಪರ್ ಎಲ್ ನಿನೊ ಪರಿಣಾಮಗಳ ಬಗ್ಗೆ ಈಗಾಗಲೇ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಇಂಡೋನೇಷ್ಯಾದಲ್ಲಿ ಕಾಡ್ಗಿಚ್ಚು, ಮಧ್ಯ ಅಮೆರಿಕದ ಕೆಲವೆಡೆ ಬರ ಎದುರಾಗಿದೆ. ಈ ಎಲ್‌ ನಿನೊ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.

ಮಳೆ ಕೊರತೆ ನಡುವೆ ನೈರುತ್ಯ ಮುಂಗಾರು ಅಂತ್ಯದತ್ತ ಸಾಗುತ್ತಿದೆ. ಸೆಪ್ಟೆಂಬರ್ 22ರ ಹೊತ್ತಿಗೆ ದೇಶದ ಒಟ್ಟು ಮಳೆ ಪ್ರಮಾಣವು ಸಾಮಾನ್ಯಕ್ಕಿಂತ ಸುಮಾರು ಶೇ 15 ರಷ್ಟು ಕುಸಿದಿದೆ. ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಈ ಕೊರತೆ ಮತ್ತಷ್ಟು ಹೆಚ್ಚಿದೆ.

ಉಷ್ಣಾಂಶ ಸಹ ಏರಿಕೆಯ ಪರಿಣಾಮ ವಿದ್ಯುತ್ ಬೇಡಿಕೆಯೂ ಹೆಚ್ಚಿದೆ. ಹೀಗಾಗಿ, ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಸ್ಥಾವರಗಳಲ್ಲಿನ ಸಂಗ್ರಹ ಸಾಮಾನ್ಯಕ್ಕಿಂತ ಶೇ 40ರಷ್ಟು ಕುಸಿದಿದೆ.

ಜನಸಂಖ್ಯೆ ಹೆಚ್ಚಿರುವೆಡೆಯೇ ಸಾವು ಅಧಿಕ ಸಾಧ್ಯತೆ

ಜನಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಉಷ್ಣ ಹವೆಗೆ ಒಡ್ಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಿರುವುದರಿಂದ ಸಾವಿನ ಸಂಖ್ಯೆಯೂ ಹೆಚ್ಚಿರಬಹುದು. ಆದರೆ, ಸಾವು ಹೆಚ್ಚಾಗಲು ಜನಸಂಖ್ಯೆ ಹೆಚ್ಚಿರುವುದೊಂದೇ ಕಾರಣ ಎನ್ನಲಾಗದು. ತಾಪಮಾನ ಯಾವ ಪ್ರಮಾಣದಲ್ಲಿ ಹೆಚ್ಚಿದೆ, ಆ ದೇಶದ ದುರ್ಬಲತೆ, ವೃದ್ಧರ ಸಂಖ್ಯೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವೂ ಪ್ರಮುಖ ಪಾತ್ರವಹಿಸುತ್ತವೆ. ಉಷ್ಣವಲಯಕ್ಕೆ ಹೋಲಿಸಿದರೆ, ಯೂರೋಪ್‌ನಲ್ಲಿ ಎಲ್ ನಿನೊ ಪರಿಣಾಮ ಕಡಿಮೆ ಇದೆ. ಆದರೂ ಈ ವರ್ಷ ಉಷ್ಣಾಂಶ ಏರಿಕೆಯ ಪರಿಣಾಮ 36,000 ಮಂದಿ ಮೃತಪಟ್ಟಿದ್ದಾರೆ.

ಭಾರತದ ಸಮುದ್ರ, ಸಿಹಿನೀರಿನ ತಾಣಗಳು ಮತ್ತು ಭೂಮಿಯ ಪರಿಸರ ವ್ಯವಸ್ಥೆ ಮೇಲೆ 'ಎಲ್ ನಿನೊ ಪರಿಣಾಮದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು 188 ಭಾರತೀಯ ವಿಜ್ಞಾನಿಗಳು, ಪರಿಸರ ತಜ್ಞರು ಕರೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಜೀವ ಉಳಿಸಲು ಬೇಕಾದ ಸಿದ್ಧತೆಗೆ ಈಗಲೇ ಸಂಪನ್ಮೂಲ ಒಗ್ಗೂಡಿಸಬೇಕು ಎಂದೂ ತಿಳಿಸಿದ್ಧಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries