ಗುವಾಹಟಿ: ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಥಾಡೌ ಸಮುದಾಯದ ಮೂವರು ಚರ್ಚ್ ನಾಯಕರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಿ 100 ದಿನಗಳಿಗೂ ಹೆಚ್ಚು ಕಳೆದರೂ, ಆರೋಪಿಗಳನ್ನು ಬಂಧಿಸಿ ನ್ಯಾಯದ ಮುಂದೆ ತರುವಲ್ಲಿ ಸರಕಾರ ವಿಫಲವಾಗಿದೆ ಎಂದು ಥಾಡೌ ಇನ್ಪಿ ಮಣಿಪುರ (TIM) ಕಳವಳ ವ್ಯಕ್ತಪಡಿಸಿದೆ.
ಮೇ 13ರಂದು ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಶಂಕಿತರು ನಡೆಸಿದ ಹೊಂಚುದಾಳಿಯಲ್ಲಿ ಥಾಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ ಇಂಡಿಯಾ (TBAI) ಹಿರಿಯ ನಾಯಕರಾದ ರೆವರೆಂಡ್ ಡಾ.ವುಮ್ಥಾಂಗ್ ಸಿಟ್ಲ್ಹೌ, ರೆವರೆಂಡ್ ಕೈಗೌಲುನ್ ಲೌವುಮ್ ಮತ್ತು ಪಾದ್ರಿ ಪಾಗೊಲೆನ್ ಸಿಟ್ಲ್ಹೌ ಮೃತಪಟ್ಟಿದ್ದರು. ಘಟನೆಯಲ್ಲಿ ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ನಡೆದು 100 ದಿನಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಪ್ರಕರಣದಲ್ಲಿ ಯಾರನ್ನೂ ಬಂಧಿಸಿರುವ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಪ್ರಕಟವಾಗಿಲ್ಲ. ಇದು ಎನ್‌ಐಎ ತನಿಖೆಯ ಪರಿಣಾಮಕಾರಿತ್ವ, ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಟಿಐಎಂ ಹೇಳಿದೆ.
ಕಾರ್ಯಾಚರಣೆ ಸ್ಥಗಿತ ಒಪ್ಪಂದಕ್ಕೆ (SIO) ಸಹಿ ಹಾಕಿರುವ ಕುಕಿ ಬಂಡುಕೋರ ಗುಂಪುಗಳು ಕಾರ್ಯನಿರ್ವಹಿಸುವ ಪ್ರದೇಶದಲ್ಲೇ ಈ 'ಹತ್ಯಾಕಾಂಡ' ನಡೆದಿದೆ ಎಂದು ಸಂಘಟನೆ ಹೇಳಿದೆ. ಚರ್ಚ್ ನಿಯೋಗದ ಮುಂದೆ ಮತ್ತು ಹಿಂದೆ ಸಂಚರಿಸುತ್ತಿದ್ದ ವಾಹನಗಳಲ್ಲಿದ್ದ ಕುಕಿಗಳು ಸೇರಿದಂತೆ ಜನರನ್ನು ಕರೆದೊಯ್ಯುತ್ತಿದ್ದ ಇತರ ವಾಹನಗಳ ಮೇಲೆ ದಾಳಿ ನಡೆದಿಲ್ಲ ಎಂದು ಅದು ತಿಳಿಸಿದೆ.
'ದಾಳಿಯ ಈ ಆಯ್ದ ಸ್ವರೂಪವು ಎನ್‌ಐಎ ಉತ್ತರಿಸಬೇಕಾದ ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಂತ್ರಸ್ತರನ್ನು ಅವರ ಥಾಡೌ ಗುರುತು ಮತ್ತು ಟಿಬಿಎಐ ಜತೆಗಿನ ಸಂಬಂಧದ ಕಾರಣಕ್ಕಾಗಿಯೇ ನಿರ್ದಿಷ್ಟವಾಗಿ ಗುರುತಿಸಿ ಗುರಿಯಾಗಿಸಲಾಗಿತ್ತೇ?' ಎಂದು ಟಿಐಎಂ ಪ್ರಶ್ನಿಸಿದೆ.
ದಾಳಿಯಲ್ಲಿನ ಈ ಸ್ಪಷ್ಟ ಆಯ್ಕೆಯು ಸಂತ್ರಸ್ತರ ಜನಾಂಗೀಯ ಗುರುತನ್ನು ದಾಳಿಯ ಉದ್ದೇಶವನ್ನು ನಿರ್ಧರಿಸುವಲ್ಲಿ ಹಾಗೂ ಹೊಣೆಗಾರರನ್ನು ಗುರುತಿಸುವಲ್ಲಿ ನಿರ್ಣಾಯಕ ಅಂಶವನ್ನಾಗಿ ಮಾಡುತ್ತದೆ ಎಂದು ಸಂಘಟನೆ ಹೇಳಿದೆ.
ಚರ್ಚ್ ನಾಯಕರ ಚಲನವಲನದ ಬಗ್ಗೆ ಯಾವುದೇ ಬಂಡುಕೋರರು, ಕಮಾಂಡರ್ ಗಳು, ಗುಪ್ತಚರ ಜಾಲದ ಸದಸ್ಯರು ಅಥವಾ ಸಹಚರರಿಗೆ ಮೊದಲೇ ಮಾಹಿತಿ ಇತ್ತೇ, ಯಾರಾದರೂ ಗುಪ್ತಚರ ಮಾಹಿತಿ ಒದಗಿಸಿದ್ದರೇ, ದಾಳಿಗೆ ಸಹಾಯ ಮಾಡಿದ್ದರೇ ಅಥವಾ ಬಳಿಕ ಸಾಕ್ಷ್ಯಗಳನ್ನು ಮರೆಮಾಚಲು ಹಾಗೂ ನ್ಯಾಯಕ್ಕೆ ಅಡ್ಡಿಪಡಿಸಲು ನೆರವಾಗಿದ್ದರೇ ಎಂಬುದನ್ನು ಎನ್‌ಐಎ ತನಿಖೆಯಲ್ಲಿ ಪತ್ತೆಹಚ್ಚಬೇಕು ಎಂದು ಟಿಐಎಂ ಒತ್ತಾಯಿಸಿದೆ.
'100 ದಿನಗಳಿಗೂ ಹೆಚ್ಚು ಸಮಯ ಕಳೆದಿರುವ ಹಿನ್ನೆಲೆಯಲ್ಲಿ, ನಡೆಯುತ್ತಿರುವ ತನಿಖೆಯ ಮಿತಿಯೊಳಗೆ ಯಾವ ಪ್ರಗತಿ ಸಾಧಿಸಲಾಗಿದೆ, ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಮತ್ತು ಯಾರನ್ನೂ ಏಕೆ ಬಂಧಿಸಲಾಗಿಲ್ಲ ಎಂಬುದನ್ನು ಎನ್‌ಐಎ ವಿವರಿಸಬೇಕು' ಎಂದು ಟಿಐಎಂ ಆಗ್ರಹಿಸಿದೆ.
48 ಮಂದಿಯ ಅಪಹರಣ
ಮೂವರು ಚರ್ಚ್ ನಾಯಕರ ಹತ್ಯೆಯ ಬಳಿಕ ನಾಗಾ ಮತ್ತು ಕುಕಿ ಸಮುದಾಯಗಳಿಗೆ ಸೇರಿದ 48 ಮಂದಿಯನ್ನು ಅಪಹರಿಸಲಾಗಿತ್ತು. ಅವರಲ್ಲಿ 42 ಮಂದಿಯನ್ನು ಅಪಹರಣಕಾರರು ಬಳಿಕ ಬಿಡುಗಡೆ ಮಾಡಿದ್ದರು. ಉಳಿದ ಆರು ಮಂದಿಯ ಮೃತದೇಹಗಳು ಕೆಲವು ವಾರಗಳ ಬಳಿಕ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದವು.

