ಮುಂಬೈ (ಪಿಟಿಐ): ದೇಶದ ಕೃಷಿ ವಲಯಕ್ಕೆ ನೀಡಿರುವ ಸಾಲದಲ್ಲಿ ಎನ್‌ಪಿಎ (ಅನುತ್ಪಾದಕ ಆಸ್ತಿಗಳು) ಪ್ರಮಾಣವು ಗಣನೀಯವಾಗಿ ಕಡಿಮೆ ಆಗಿದೆ ಎಂದು ನಬಾರ್ಡ್ ಅಧ್ಯಕ್ಷ ಶಾಜಿ ಕೃಷ್ಣನ್ ವಿ. ಗುರುವಾರ ಹೇಳಿದ್ದಾರೆ.
ಬೆಳೆ ಪ್ರಮಾಣ ಹೆಚ್ಚಳಕ್ಕೆ ಆದ್ಯತೆ ನೀಡುವುದು ಹಾಗೂ ಸಾಲ ನೀಡಿಕೆಯನ್ನು ಹೆಚ್ಚು ಮಾಡುವುದರಿಂದ ಇನ್ನಷ್ಟು ಸುಧಾರಣೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ನಡೆಯುತ್ತಿರುವ ಜಾಗತಿಕ ಫಿನ್‌ಟೆಕ್ ಉತ್ಸವದಲ್ಲಿ ಮಾತನಾಡಿದ ಅವರು, 'ಕೃಷಿ ವಲಯಕ್ಕೆ ನೀಡಿದ ಸಾಲದಲ್ಲಿ ಎನ್‌ಪಿಎ ಪ್ರಮಾಣವು ಒಂದು ಸಂದರ್ಭದಲ್ಲಿ ಎರಡು ಅಂಕಿಗಳ ಮಟ್ಟದಲ್ಲಿತ್ತು. ಅದು ಈಗ ಒಂದು ಅಂಕಿಯ ಮಟ್ಟಕ್ಕೆ ಇಳಿದಿದೆ' ಎಂದು ಹೇಳಿದ್ದಾರೆ.
'ಉತ್ಪಾದಕತೆಯನ್ನು ಸುಧಾರಿಸುವ ಮೂಲಕ ಎನ್‌ಪಿಎ ಮಟ್ಟವನ್ನು ಇನ್ನಷ್ಟು ಸುಧಾರಿಸಬಹುದು. ಉತ್ಪಾದಕತೆ ಹೆಚ್ಚಬೇಕು. ಉತ್ಪಾದಕತೆ ಹೆಚ್ಚಾದಾಗ ರೈತರ ಹಣಕಾಸಿನ ಶಕ್ತಿ ಹೆಚ್ಚುತ್ತದೆ. ಅದಾದ ನಂತರ ನಾವು ವಿಮೆ ಮತ್ತು ಸಾಲವನ್ನು ಹೆಚ್ಚಿಸಬೇಕು... ನಾವು ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇವೆ' ಎಂದು ಅವರು ವಿವರಿಸಿದ್ದಾರೆ.
ಕೃಷಿ ವಲಯದ ಬೆಳವಣಿಗೆ ಪ್ರಮಾಣವು ಶೇ 3.5ರಷ್ಟು ಇದೆ. ವಿಕಸಿತ ಭಾರತ ನಿರ್ಮಾಣಕ್ಕೆ ಈ ಪ್ರಮಾಣವನ್ನು ಹೆಚ್ಚು ಮಾಡಬೇಕು ಎಂದಿದ್ದಾರೆ.
ಕೃಷಿ ವಲಯಕ್ಕೆ ಸಂಬಂಧಿಸಿದ ಡಿಜಿಟಲ್ ಮೂಲಸೌಕರ್ಯದ (ಅಗ್ರಿ ಸ್ಟ್ಯಾಕ್) ಕುರಿತ ಮಾತನಾಡಿದ ಅವರು, 'ಇದನ್ನು ಮೂರು ಹಂತಗಳ ಅಡಿಪಾಯದ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ವ್ಯಕ್ತಿಯ ಗುರುತಿನ ಹಂತ, ಕೃಷಿ ಜಮೀನು ವಿವರಗಳ ಹಂತ ಹಾಗೂ ಕೃಷಿ ಚಟುವಟಿಕೆಗಳ ಹಂತ ಇರುತ್ತದೆ' ಎಂದು ವಿವರಿಸಿದ್ದಾರೆ.

