ನವದೆಹಲಿ (PTI):ದೇಶದ ಎಲ್ಲ ವಿಮಾನಯಾನ ಸಂಸ್ಥೆಗಳು, ಪೈಲಟ್‌ಗಳಿಗೆ ಮಾದಕ ವಸ್ತು ಸೇವಿಸಿದ್ದಾರೆಯೇ ಎನ್ನುವುದನ್ನು ಪತ್ತೆ ಹಚ್ಚುವ ಪರೀಕ್ಷೆ ನಡೆಸಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಗುರುವಾರ ಆದೇಶಿಸಿದೆ.
2027ರ ಜುಲೈ ಅಂತ್ಯದೊಳಗೆ ಈ ಪರೀಕ್ಷೆ ಪೂರ್ಣಗೊಳಿಸುವಂತೆಯೂ ಸೂಚಿಸಿದೆ ಎಂದು ಮೂಲಗಳು ಹೇಳಿವೆ.
'ವಿಮಾನ ಪೈಲಟ್‌ಗಳ ಡ್ರಗ್ಸ್ ಸೇವನೆ ಪರೀಕ್ಷೆಗೆ ಸಂಬಂಧಿಸಿದ ಹೊಸ ಮಾನದಂಡಗಳ ಕರಡನ್ನು ಸೆಪ್ಟೆಂಬರ್ ಅಂತ್ಯದೊಳಗೆ ಡಿಜಿಸಿಎ ಅಂತಿಮಗೊಳಿಸುವ ನಿರೀಕ್ಷೆ ಇದೆ' ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸದ್ಯ ವಾರ್ಷಿಕವಾಗಿ ಶೇ 10ರಷ್ಟು ಪೈಲಟ್‌ಗಳಿಗೆ ಮಾತ್ರ ಡ್ರಗ್ಸ್ ಸೇವನೆ ಪತ್ತೆ ಪರೀಕ್ಷೆ ಮಾಡಲಾಗುತ್ತಿದೆ. ದೇಶದ ವಿವಿಧ ವಿಮಾನಯಾನ ಸಂಸ್ಥೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಪೈಲಟ್‌ಗಳಿದ್ದಾರೆ.
ಆಗಸ್ಟ್ 4ರಂದು ಫುಕೆಟ್-ನವದೆಹಲಿ ನಡುವೆ ಸಂಚರಿಸಿದ್ದ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್, ಮಾದಕದ್ರವ್ಯ ಸೇವಿಸಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ವಿಮಾನಯಾನ ಸಂಸ್ಥೆಯು ಕೆಲಸದಿಂದ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಡಿಜಿಸಿಎ ಈ ಆದೇಶ ಹೊರಡಿಸಿದೆ.

