HEALTH TIPS

NRC ಜಾರಿಗೆ ಹೆಚ್ಚಿದ ಒತ್ತಡ: ಮಣಿಪುರದಲ್ಲಿ ಜನಗಣತಿ ಮುಂದೂಡಿದ ಕೇಂದ್ರ ಸರ್ಕಾರ

ಇಂಫಾಲ್: ಮಣಿಪುರದ ಇಂಫಾಲ್ ಕಣಿವೆಯಲ್ಲಿ ಜನಗಣತಿಗೂ ಮೊದಲು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನವೀಕರಣ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಸಂಘರ್ಷ ಪೀಡಿತ ಮಣಿಪುರದಲ್ಲಿ ಜನಗಣತಿ ಪ್ರಕ್ರಿಯೆ ಮುಂದೂಡಲು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿದೆ. 


ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಮಣಿಪುರದ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ.

'ರಾಜ್ಯದಲ್ಲಿ ಜನಗಣತಿಗೂ ಮೊದಲು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನವೀಕರಣ ಮಾಡಬೇಕು ಎಂಬ ಮಣಿಪುರದ ಜನರ ಬೇಡಿಕೆಯ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಮಣಿಪುರದ ಜನರ ಭಾವನೆಗಳು ಮತ್ತು ಆಶೋತ್ತರಗಳನ್ನು ಪರಿಗಣಿಸಿ ಜನಗಣತಿ ಕಾರ್ಯವನ್ನು ಮುಂದೂಡಲು ಸಮ್ಮತಿಸಲಾಗಿದೆ' ಎಂದು ಮಣಿಪುರ ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಉನ್ನತ ಮಟ್ಟದ ಸಭೆಯಲ್ಲಿ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ, ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖೇಮ್‌ಚಂದ್ ಸಿಂಗ್, 'ಜನರ ಧ್ವನಿಗೆ ಓಗೊಟ್ಟು, ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸಿದ್ದಕ್ಕಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದಿದ್ದಾರೆ.

ಇದೇ ವೇಳೆ, ಮಣಿಪುರ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಮತ್ತು ರಿಟ್ ಅರ್ಜಿಯ ವಿಶೇಷ ವಿಚಾರಣೆ ನಡೆಸಿ ಜನಗಣತಿ ಪ್ರಕ್ರಿಯೆಗೆ ತಡೆ ನೀಡಿದೆ.

ಕಾಂಗ್ಲೈಪಾಕ್ ವಿದ್ಯಾರ್ಥಿ ಸಂಘಟನೆ (ಕೆಎಸ್‌ಎ) ಪಿಐಎಲ್ ಸಲ್ಲಿಸಿದ್ದರೆ, ಕಣಿವೆ ಮೂಲದ 14 ಸಂಘಟನೆಗಳ ನಾಯಕರಲ್ಲಿ ಒಬ್ಬರಾದ ಶಾಂತ್ ಸಿಂಗ್ ನಹಕ್ಪಮ್ ರಿಟ್ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳು 1951 ಅನ್ನು ಆಧಾರ ವರ್ಷವಾಗಿಟ್ಟುಕೊಂಡು ಎನ್‌ಆರ್‌ಸಿ ನವೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕೋರ್ಟ್ ನಿರ್ದೇಶನ ನೀಡಬೇಕೆಂದು ಕೋರಿದ್ದವು. ಜತೆಗೆ ನೆರೆಯ ಮ್ಯಾನ್ಮಾರ್‌ನಿಂದ ನಡೆಯುತ್ತಿರುವ ಅಕ್ರಮ ನುಸುಳುವಿಕೆಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಲಾಗಿತ್ತು.

ಏನಿದು ವಿವಾದ?

ಮೈತೇಯಿ ಮತ್ತು ನಾಗಾ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಗಳು ಜನಗಣತಿಗೂ ಮುನ್ನ ಎನ್‌ಆರ್‌ಸಿ ಪರಿಷ್ಕರಣೆಗೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಪ್ರಸ್ತುತ ಸಂಘರ್ಷಕ್ಕೆ ಎನ್‌ಆರ್‌ಸಿ ನವೀಕರಣವೊಂದೇ ಪರಿಹಾರ ಎಂದು ಈ ಸಂಘಟನೆಗಳು ಪ್ರತಿಪಾದಿಸಿವೆ. ಕಳೆದ ಕೆಲವು ವಾರಗಳಲ್ಲಿ ಎನ್‌ಆರ್‌ಸಿಗಾಗಿ ನಡೆದ ಪ್ರತಿಭಟನೆಗಳ ವೇಳೆ ಕಣಿವೆ ಪ್ರದೇಶದಲ್ಲಿ ಬಂದ್, ಮೆರವಣಿಗೆ ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆ ವರದಿಯಾಗಿತ್ತು.

ಕುಕಿ ಸಮುದಾಯವನ್ನು ಹೊರತುಪಡಿಸಿ ಕನಿಷ್ಠ 10 ಸಮುದಾಯಗಳ ನಾಯಕರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿ, ಗೃಹ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ ಜನಗಣತಿಗೂ ಮುನ್ನ ಎನ್‌ಆರ್‌ಸಿ ಜಾರಿಗೆ ಒತ್ತಾಯಿಸಿದ್ದರು. ಆಡಳಿತಾರೂಢ ಬಿಜೆಪಿಯ ಹಲವು ಶಾಸಕರೂ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಕುಕಿ ಸಂಘಟನೆಗಳು ಎನ್‌ಆರ್‌ಸಿ ಜಾರಿಯನ್ನು ತೀವ್ರವಾಗಿ ವಿರೋಧಿಸುತ್ತಿವೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries