ನವದೆಹಲಿ: ಎಲ್ಲಾ ಅಭ್ಯರ್ಥಿಗಳಿಗೂ NEET-PG 2026 ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿತು. ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರ ಪರ ವಕೀಲರು ಸಾಮಾಜಿಕ ಮಾಧ್ಯಮದ ಮೂಲಕ ಅಭ್ಯರ್ಥಿಗಳಿಂದ ದೂರುಗಳನ್ನು ಆಹ್ವಾನಿಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೀಠವು ಅರ್ಜಿದಾರರು ಹಾಗೂ ಅವರ ವಕೀಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಅರ್ಜಿದಾರರಿಗೆ 25 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತು.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಪರೀಕ್ಷಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಪ್ರಯತ್ನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
'ನೀವು ಪೂರ್ಣಕಾಲಿಕ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರೇ? ಈ ವ್ಯಕ್ತಿ ಪೂರ್ಣಕಾಲಿಕ PIL ಅರ್ಜಿದಾರರಾಗಿದ್ದಾರೆ. ಪರೀಕ್ಷೆಗಳು ಎಲ್ಲೆಲ್ಲಿ ನಡೆದರೂ ನೀವು ಅರ್ಜಿಗಳನ್ನು ಸಲ್ಲಿಸುತ್ತೀರಿ. ಗಂಭೀರ ಕ್ರಮ ಕೈಗೊಳ್ಳುವಂತೆ ನಾವು ಬಾರ್ ಕೌನ್ಸಿಲ್‌ಗೆ ಕೇಳುತ್ತೇವೆ' ಎಂದು ನ್ಯಾಯಮೂರ್ತಿ ನರಸಿಂಹ ಮೌಖಿಕವಾಗಿ ಹೇಳಿದರು.
ವಿದ್ಯುತ್ ವ್ಯತ್ಯಯ
ಆಗಸ್ಟ್ 30ರಂದು ನಡೆದ NEET-PG ಪರೀಕ್ಷೆಯ ವೇಳೆ ಜೈಪುರದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದರಿಂದ ಸುಮಾರು 2,500 ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಅಭ್ಯರ್ಥಿಗಳಿಗಾಗಿ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಸೆಪ್ಟೆಂಬರ್ 5ರಂದು ಪ್ರತ್ಯೇಕ ಪರೀಕ್ಷೆ ನಡೆಸಲು ನಿಗದಿಪಡಿಸಿತ್ತು.
ಪರೀಕ್ಷೆ ಬರೆಯಲು ತೊಂದರೆಗೊಳಗಾದ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸುವುದು NEET-PGಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕು ಎಂಬ ಸುಪ್ರೀಂ ಕೋರ್ಟ್‌ನ ಮೇ 2025ರ ನಿರ್ದೇಶನಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಹೀಗಾಗಿ ಎಲ್ಲ ಅಭ್ಯರ್ಥಿಗಳಿಗೂ ಹೊಸದಾಗಿ ಪರೀಕ್ಷೆ ನಡೆಸಬೇಕು ಎಂದು ಕೋರಿದ್ದರು.
ಆದರೆ ಜೈಪುರದ ಎರಡು ಕೇಂದ್ರಗಳಲ್ಲಿ ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳಲ್ಲಿ ಅರ್ಜಿದಾರರು ಯಾರೂ ಇಲ್ಲ ಎಂದು NBEMS ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅರ್ಜಿದಾರರಲ್ಲಿ ಇಬ್ಬರು ನೋಯ್ಡಾದವರು ಹಾಗೂ ಒಬ್ಬರು ಪಂಜಾಬ್ ನವರು ಎಂದು ಪೀಠಕ್ಕೆ ತಿಳಿಸಲಾಯಿತು.
34 ಕೇಂದ್ರಗಳಲ್ಲೂ ಸಮಸ್ಯೆ
ಜೈಪುರದ ಎರಡು ಕೇಂದ್ರಗಳಿಗೆ ಮಾತ್ರ ವಿದ್ಯುತ್ ವ್ಯತ್ಯಯ ಸೀಮಿತವಾಗಿರಲಿಲ್ಲ. ದೇಶದ ಇತರ 34 ಕೇಂದ್ರಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಸಂಭವಿಸಿದ್ದವು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಈ ಹೇಳಿಕೆಗೆ ಆಧಾರವೇನು ಎಂದು ನ್ಯಾಯಮೂರ್ತಿ ನರಸಿಂಹ ಅವರು ವಕೀಲರನ್ನು ಪ್ರಶ್ನಿಸಿದರು.
ಈ ವೇಳೆ, ಅರ್ಜಿದಾರರ ಪರ ವಕೀಲರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮನ್ನು ಸಂಪರ್ಕಿಸುವಂತೆ ಪರಿಣಾಮಕ್ಕೊಳಗಾದ ಅಭ್ಯರ್ಥಿಗಳನ್ನು ಆಹ್ವಾನಿಸಿದ್ದರು ಎಂದು NBEMS ಪರ ವಕೀಲರು ಆರೋಪಿಸಿದರು.
'ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ನಮ್ಮ ಬಳಿ ಇವೆ. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇದ್ದರೆ, ಅರ್ಜಿದಾರರ ಪರವಾಗಿ ಅವರು ಒಂದು ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ ಮತ್ತು ಅವರನ್ನು ಸಂಪರ್ಕಿಸಬಹುದು ಎಂದು ಹೇಳಿರುವ ವೀಡಿಯೊಗಳೂ ಇವೆ. ದೇಶದಾದ್ಯಂತ ನಮಗೆ ಮನವಿಗಳು ಬರುತ್ತಿವೆ' ಎಂದು NBEMS ಪರ ವಕೀಲರು ತಿಳಿಸಿದರು.
ಈ ಹೇಳಿಕೆಯ ಬಳಿಕ ವಕೀಲರ ನಡವಳಿಕೆಯ ಬಗ್ಗೆಯೂ ಪೀಠವು ಪ್ರಶ್ನೆ ಎತ್ತಿತು. ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾರ್ ಕೌನ್ಸಿಲ್‌ಗೆ ಸೂಚಿಸುವುದಾಗಿ ನ್ಯಾಯಮೂರ್ತಿ ನರಸಿಂಹ ಹೇಳಿದರು.
ಅಂತಿಮವಾಗಿ, ಎಲ್ಲಾ ಅಭ್ಯರ್ಥಿಗಳಿಗೂ NEET-PG ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂಬ ಮನವಿಯನ್ನು ಪೀಠವು ತಿರಸ್ಕರಿಸಿತು.

