ರಾಂಚಿ: ರಾಂಚಿಯಲ್ಲಿರುವ ಆರೆಸ್ಸೆಸ್ ಕಚೇರಿ ಮೇಲೆ ಜೂನ್‌ನಲ್ಲಿ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ನಾಲ್ಕು ರಾಜ್ಯಗಳ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಿಲ್ಲಿ, ಬಿಹಾರ, ಜಾರ್ಖಂಡ್ ಮತ್ತು ಕರ್ನಾಟಕದ ಹಲವು ಸ್ಥಳಗಳಲ್ಲಿ ಇ.ಡಿ. ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾದ ಪಾಕಿಸ್ತಾನ ಮೂಲದ 'ಶಹಝಾದ್ ಭಟ್ಟಿ ನೆಟ್‌ವರ್ಕ್' (ಎಸ್‌ಬಿಎನ್) ಪಾತ್ರದ ಕುರಿತೂ ತನಿಖೆ ಪರಿಶೀಲನೆ ನಡೆಸುತ್ತಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಬಳಿಕ ಈ ನೆಟ್‌ವರ್ಕ್ ಬಗ್ಗೆ ತನಿಖೆ ನಡೆಸುತ್ತಿರುವ ಎರಡನೇ ಕೇಂದ್ರೀಯ ಸಂಸ್ಥೆ ಜಾರಿ ನಿರ್ದೇಶನಾಲಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಂಚಿಯ ನಿವಾರಣಪುರ ಪ್ರದೇಶದಲ್ಲಿರುವ ತಮ್ಮ ಕಚೇರಿಯ ಮೇಲೆ ಜೂನ್ 17ರಂದು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಆರೆಸ್ಸೆಸ್ ಆರೋಪಿಸಿತ್ತು. ಈ ದಾಳಿಗೆ ಸಂಬಂಧಿಸಿ ಜಾರ್ಖಂಡ್ ಪೊಲೀಸರ ವಿಶೇಷ ತನಿಖಾ ತಂಡ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡು ಎಫ್‌ಐಆರ್ ದಾಖಲಿಸಿದೆ.

