ನವದೆಹಲಿ: 2024ರ ನವೆಂಬರ್‌ನಲ್ಲಿ ನಿಧನರಾದ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತ ಬಿಬೇಕ್ ದೇಬ್ರಾಯ್ ಅವರ ಹೆಸರು ದಿಲ್ಲಿಯ ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ದಿಲ್ಲಿಯಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ "ಮ್ಯಾಪಿಂಗ್ ಆಗಿಲ್ಲ" ಎಂದು ನೋಟಿಸ್ ನೀಡಲಾದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ತಾರ್ಕಿಕ ವ್ಯತ್ಯಾಸಗಳಿರುವ ಪ್ರಕರಣಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲು ಹಾಗೂ ಮ್ಯಾಪಿಂಗ್ ಆಗಿಲ್ಲ ಎಂಬ ಪ್ರಕರಣಗಳಲ್ಲಿ ಮತದಾರರ ಅರ್ಹತೆಯನ್ನು ದೃಢಪಡಿಸಲು ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಈ ಪಟ್ಟಿಯನ್ನು ಸೆಪ್ಟೆಂಬರ್ 18ರಂದು ಶುಕ್ರವಾರ ಪ್ರಕಟಿಸಲಾಗಿದೆ.
ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದ ದೇಬ್ರಾಯ್ ಅವರು 2024ರ ನವೆಂಬರ್ ನಲ್ಲಿ ನಿಧನರಾಗಿದ್ದರು. ದಿಲ್ಲಿಯಲ್ಲಿ ಪ್ರ ಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 33 ಲಕ್ಷ ಮತದಾರರಿಗೆ ನೋಟಿಸ್ ನೀಡಿಲಾಗಿದೆ. ಈ ಪಟ್ಟಿಯಲ್ಲಿ ಅವರ ಹೆಸರೂ ಇದೆ ಎಂದು ಹೇಳಲಾಗಿದೆ.
"ದೇಬ್ರಾಯ್ ಅವರು ಮೃತಪಟ್ಟಿರುವ ಬಗ್ಗೆ ನಮಗೆ ತಿಳಿದಿದೆ. ಅಂತಿಮ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗುತ್ತದೆ" ಎಂದು ಹಿರಿಯ ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

