ಭುವನೇಶ್ವರ: ಶಾಲಾ ಪಠ್ಯಪುಸ್ತಕದಲ್ಲಿ ತಪ್ಪುಗಳಾಗಿವೆ ಎಂದು ಆರೋಪಿಸಿ, ಒಡಿಶಾ ಶಿಕ್ಷಣ ಸಚಿವ ನಿತ್ಯಾನಂದ ಗೊಂಡ್ ಅವರ ರಾಜೀನಾಮೆಗೆ ಆಗ್ರಹಿಸಿ ಸತ್ಯಾಗ್ರಹ ಮಾಡುತ್ತಿರುವ ನವನಿರ್ಮಾಣ ಯುವ ಛತ್ರ ಸಂಘಟನೆಗೆ(ಎನ್‌ವೈಸಿಎಸ್) ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಬೆಂಬಲ ಘೋಷಿಸಿದೆ.
ಪಠ್ಯಪುಸ್ತಕದಲ್ಲಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ನವನಿರ್ಮಾಣ ಕ್ರುಶಕ್ ಸಂಘಟನೆ (ಎನ್‌ಕೆಎಸ್) ಸಂಚಾಲಕ ಅಕ್ಷಯ್ ಕುಮಾರ್ ಮತ್ತು ಎನ್‌ವೈಸಿಎಸ್ ನಾಯಕ ಮುನ್ವರ್ ಅಲಿ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಸಿಜೆಪಿ ವಕ್ತಾರ ಸೌರವ್ ದಾಸ್, 'ಪಠ್ಯಪುಸ್ತಕದಲ್ಲಿನ ತಪ್ಪುಗಳ ಹೊಣೆಗಾರಿಕೆ ಮತ್ತು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು ಎಂದು ಆಗ್ರಹಿಸುತ್ತಿರುವ ಪ್ರತಿಭಟನಾಕಾರರಿಗೆ ನಾವು ಬೆಂಬಲ ಸೂಚಿಸುತ್ತೇವೆ' ಎಂದು ಹೇಳಿದ್ದಾರೆ.
'ಸರ್ಕಾರವು ಪಠ್ಯಪುಸ್ತಕಗಳನ್ನು ಮುದ್ರಣ ಮಾಡಲು ₹380 ಕೋಟಿಯನ್ನು ಖರ್ಚು ಮಾಡಿದೆ. ಆದರೆ, ಅದರಲ್ಲಿರುವ ತಪ್ಪುಗಳನ್ನು ಪತ್ತೆ ಮಾಡದೇ ಅದನ್ನು ಮಕ್ಕಳಿಗೆ ನೀಡಿದ್ದಾರೆ. ಈ ರೀತಿಯ ತಪ್ಪುಗಳ ಹೊಣೆಗಾರಿಕೆಗೆ ನಾವು ಆಗ್ರಹಿಸುತ್ತೇವೆ. ಪಠ್ಯಪುಸ್ತಕದಲ್ಲಿರುವ ತಪ್ಪುಗಳು ಸರಿಯಾಗಬೇಕು ಮತ್ತು ಸಚಿವರು ರಾಜೀನಾಮೆ ನೀಡಬೇಕು' ಎಂದು ಆಗ್ರಹಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಕಾರಣ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದಂತೆ, ಪಠ್ಯಪುಸ್ತಕದಲ್ಲಿನ ತಪ್ಪುಗಳ ಹೊಣೆಹೊತ್ತು ನಿತ್ಯಾನಂದ ಗೊಂಡ್ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
'ಪ್ರತಿಭಟನಾಕಾರರೊಂದಿಗೆ ಸೇರಿಕೊಂಡು ನಾವು ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಯ ಕುರಿತು ನೀಲನಕ್ಷೆಯನ್ನು ಸಿದ್ಧಪಡಿಸುತ್ತೇವೆ ಮತ್ತು ಪಠ್ಯಪುಸ್ತಕದಲ್ಲಿನ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ' ಎಂದು ಹೇಳಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಆಗ್ರಹಿಸಿ ಸೆ.22ರಂದು ಎನ್‌ವೈಸಿಎಸ್, ಒಡಿಶಾದ ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದೆ.

