ನೈರೋಬಿ: (AFP): ಪೂರ್ವ ಆಫ್ರಿಕಾದ ಜಿಬೂಟಿಯಿಂದ ಯೆಮೆನ್‌ಗೆ ತೆರಳುತ್ತಿದ್ದ ದೋಣಿ ಮುಳುಗಿ 15 ಮಕ್ಕಳು ಸೇರಿದಂತೆ ಕನಿಷ್ಠ 139 ವಲಸಿಗರು ಮೃತಪಟ್ಟಿದ್ದಾರೆ. 84 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಭಾನುವಾರ ದೃಢಪಡಿಸಿದೆ.
ಅಕ್ಟೋಬರ್ 8-9 ರಂದು ರಾತ್ರಿ ಜಿಬೂಟಿಯ ಒಬಾಕ್ ಪಟ್ಟಣದ ಉತ್ತರ ಭಾಗದಲ್ಲಿ ಈ ದುರಂತ ಸಂಭವಿಸಿದೆ. ದುರಂತಕೀಡಾದ ಹಡಗಿನಲ್ಲಿ 305 ಜನರಿದ್ದರು. ಅವರಲ್ಲಿ ಹೆಚ್ಚಿನವರು ಇಥಿಯೋಪಿಯನ್ನರು ಎಂದು ಐಒಎಂ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಜನ ದೋಣಿಯನ್ನು ಹತ್ತಿದ ತಕ್ಷಣವೇ ಅದು ಹಿಂಭಾಗದಿಂದ ಮುಳುಗಲು ಪ್ರಾರಂಭಿಸಿತ್ತು ಎಂದು ಬದುಕುಳಿದವರು ತಿಳಿಸಿದ್ದಾಗಿ ಜಿಬೂಟಿಯಲ್ಲಿರುವ ಐಒಎಂ ಮಿಶನ್ ಮುಖ್ಯಸ್ಥ ಅಲೆಕ್ಸಾಂಡರ್ ಕೊಯ್ಸಾಕ್ ಎಎಫ್‌ಪಿಗೆ ತಿಳಿಸಿದ್ಧಾರೆ. ಇದು ಅತ್ಯಂತ ದಾರುಣ ಘಟನೆ ಎಂದೂ ಅವರು ಕಂಬನಿ ಮಿಡಿದಿದ್ದಾರೆ.
ಆರಂಭದಲ್ಲಿ 109 ಮಂದಿ ಸಾವಿಗೀಡಾಗಿದ್ದಾರೆ ಮತ್ತು 116 ಮಂದಿ ಕಾಣೆಯಾಗಿದ್ದಾರೆ ಎಂದು ಐಒಎಂ ಮಾಹಿತಿ ನೀಡಿತ್ತು. ಬಳಿಕ ಸಾವಿನ ಸಂಖ್ಯೆ ಏರಿಕೆಯಾಗಿದ್ದು, 139 ಮಂದಿ ಮೃತಪಟ್ಟು, 84 ಮಂದಿ ಕಾಣೆಯಾಗಿದ್ದಾರೆ ಎಂದು ಖಚಿತಪಡಿಸಿದೆ.
ತುರ್ತು ನೆರವು ನೀಡಲು ಜಿಬೂಟಿ ಅಧಿಕಾರಿಗಳೊಂದಿಗೆ ಐಒಎಂ ತಂಡಗಳು ಸ್ಥಳದಲ್ಲಿವೆ ಎಂದು ಕೊಯ್ಸಾಕ್ ಹೇಳಿದ್ದಾರೆ.
ಪತ್ತೆಯಾದ 139 ಶವಗಳಲ್ಲಿ 52ಪುರುಷರು, 42 ಮಹಿಳೆಯರು ಹಾಗೂ 15 ಮಕ್ಕಳು (9 ಹೆಣ್ಣುಮಕ್ಕಳು, 6 ಗಂಡುಮಕ್ಕಳು) ಸೇರಿದ್ದಾರೆ. ಸದ್ಯ 82 ಜನರನ್ನು ರಕ್ಷಿಸಲಾಗಿದ್ದು, ಎಲ್ಲರೂ ಇಥಿಯೋಪಿಯಾ ನಾಗರಿಕರಾಗಿದ್ದಾರೆ.
64 ಮಂದಿ ಸಂತ್ರಸ್ತರಿಗೆ ಒಬೊಕ್ ನಗರದ ವಲಸಿಗರ ಕೇಂದ್ರದಲ್ಲಿ ತುರ್ತು ವೈದ್ಯಕೀಯ ನೆರವು ನೀಡಲಾಗುತ್ತಿದೆ.
ಬಡತನ, ಹಿಂಸಾಚಾರ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹಾರ್ನ್ ಆಫ್ ಆಫ್ರಿಕಾ ಪ್ರದೇಶದಿಂದ ಜನರು ಉದ್ಯೋಗ ಅರಸಿ ಬಾಬ್ ಅಲ್-ಮಂಡೆಬ್ ಜಲಸಂಧಿ ದಾಟಿ ಯೆಮೆನ್ ಮಾರ್ಗವಾಗಿ ಗಲ್ಫ್ ರಾಷ್ಟ್ರಗಳಿಗೆ ತಲುಪಲು ಪ್ರಯತ್ನಿಸುತ್ತಾರೆ. ಈ ಮಾರ್ಗದಲ್ಲಿ ಎದುರಿಸುತ್ತಿರುವ ಭೀಕರ ಅಪಾಯಗಳಿಗೆ ಈ ದುರಂತವೇ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಇಥಿಯೋಪಿಯಾದ ಟಿಗ್ರೇ ಪ್ರದೇಶದಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷ ಮತ್ತು ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸಾವಿರಾರು ಜನರು ಈ ಅಪಾಯಕಾರಿ ಸಮುದ್ರ ಮಾರ್ಗವನ್ನು ಆಯ್ದುಕೊಳ್ಳುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಈ ವರ್ಷದ ಜನವರಿಯಿಂದ ಅಕ್ಟೋಬರ್ ವರೆಗೆ 1, 78,000 ಜನರು ಇಥಿಯೋಪಿಯಾದಿಂದ ಜಿಬೂಟಿಗೆ ಬಂದಿದ್ದಾರೆ ಎಂದು ಐಒಎಂ ವಕ್ತಾರ ಕೆನಡಿ ಒಮೊಂಡಿ ಒಕೊತ್ ಎಎಫ್‌ಪಿಗೆ ತಿಳಿಸಿದ್ದಾರೆ.
ಅಲ್ಲದೇ ಸೆಪ್ಟೆಂಬರ್ 10ರಿಂದ, ಯೆಮೆನ್‌ನಲ್ಲಿ ಸಂಘರ್ಷ ತೀವ್ರಗೊಂಡಿದ್ದರೂ, ಇಥಿಯೋಪಿಯಾದಿಂದ ಜಿಬೂಟಿಗೆ 20,000 ಕ್ಕೂ ಹೆಚ್ಚು ಜನರು ಸಮುದ್ರ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದಾರೆ ಎಂದೂ ಐಒಎಂ ಹೇಳಿದೆ.



