ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಈಚೆಗೆ ಸಿಜೆಪಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮೆಟ್ರೊ ನಿಲ್ದಾಣಗಳ ಮುಚ್ಚುವಿಕೆ ಮತ್ತು ರೈಲು ಸೇವೆಗಳ ವ್ಯತ್ಯಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್, ಅ.15ಕ್ಕೆ (ಗುರುವಾರ) ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು ಈ ಸಾಲು ಸಾಲು ಅರ್ಜಿಗಳ ವಿಚಾರಣೆಯನ್ನು ನಡೆಸಬೇಕಾಗಿತ್ತು. ಆದರೆ, ಮೋಹನಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಅರ್ಜಿಗಳ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಮೋಹನಾ ಅವರು ಮಂಗಳವಾರ ಕಲಾಪದಲ್ಲಿ ಭಾಗವಹಿಸಿದ್ದರು. ಆದರೆ, ಸಭೆಯ ಆರಂಭದಲ್ಲೇ ಮೋಹನಾ ಅವರಿಗೆ ಆರೋಗ್ಯ ಸರಿಯಿಲ್ಲದಿದ್ದರೂ ಕೋರ್ಟ್‌ಗೆ ಆಗಮಿಸಿದ್ದಾರೆ ಎಂದು ಸಿಜೆಐ ವಕೀಲರಿಗೆ ತಿಳಿಸಿದರು.
ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿಚಾರಣೆಯನ್ನು ಮುಂದೂಡುವಂತೆ ಪೀಠವನ್ನು ಕೋರಿದರು. ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಸೇರಿದಂತೆ ಇತರ ಹಿರಿಯ ವಕೀಲರೂ ವಿಚಾರಣೆ ಮುಂದೂಡಿಕೆಗೆ ಸಮ್ಮತಿಸಿದರು.
ಅ.10ರಂದು ಸಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆಟ್ರೊ ಮತ್ತು ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಲು ಮಂಗಳವಾರದವರೆಗೆ ಕಾಲಾವಕಾಶ ನೀಡಲಾಗಿತ್ತು ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.
ಅಫಿಡವಿಟ್ ಸಿದ್ಧವಾಗಿದೆ. ಅದನ್ನು ಇನ್ನಷ್ಟು ಸಮಗ್ರವಾಗಿಸಲು ನಾನು ಕೆಲವು ವಿಷಯಗಳನ್ನು ಸೇರಿಸಲು ಬಯಸುತ್ತೇನೆ ಎಂದೂ ಮೆಹ್ತಾ ಹೇಳಿದರು.
ಅಫಿಡವಿಟ್ ಸಲ್ಲಿಸಲು ನ್ಯಾಯಪೀಠವು ಸಮಯಾವಕಾಶವನ್ನು ವಿಸ್ತರಿಸಿತು ಮತ್ತು ಅದನ್ನು ಅರ್ಜಿದಾರರ ಪರ ವಕೀಲರಿಗೆ ಒದಗಿಸುವಂತೆಯೂ ಸೂಚಿಸಿತು.



