ತೈಪೆ: 'ಚಂಪಿ' ಚಂಡಮಾರುತವು ತೈವಾನ್ ದ್ವೀಪದ ಬಳಿ ಹಾದುಹೋಗಿದ್ದು ವ್ಯಕ್ತಿಯೊಬ್ಬರು ಮೃತಪಟ್ಟು ಸುಮಾರು 500ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವೆಡೆ ಮರಗಳು ಉರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಈ ವರ್ಷ ಪೆಸಿಫಿಕ್ ಮಹಾಸಾಗರದಲ್ಲಿ ಅಪ್ಪಳಿಸಿದ ಅತಿ ಪ್ರಬಲ ಚಂಡಮಾರುತಗಳಲ್ಲಿ ಒಂದಾಗಿರುವ 'ಚಂಪಿ'ಯ ವೇಗ ಕಡಿಮೆಯಾಗುತ್ತಿದೆ.
ಸದ್ಯ ಪ್ರತಿ ಗಂಟೆಗೆ 126 ಕಿ.ಮೀ. ವೇಗದಲ್ಲಿ ಸಾಗುತ್ತಿದೆ ಎಂದು ತೈವಾನ್ ಹವಾಮಾನ ಇಲಾಖೆ ತಿಳಿಸಿದೆ.
ತೈವಾನ್ನ ಈಶಾನ್ಯ ಕರಾವಳಿ ಭಾಗದಲ್ಲಿ ಶನಿವಾರ ಮುಂಜಾನೆ ಹಾದುಹೋಗಿರುವ ಚಂಪಿ, ಚೀನಾ ಕರಾವಳಿಯತ್ತ ಸಾಗಲಿದೆ. ಬಳಿಕ ಜಪಾನ್ಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಲಿಯುಕಿಯು ದ್ವೀಪದ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 527 ಮಂದಿ ಗಾಯಗೊಂಡಿದ್ದಾರೆ ಎಂದು ತೈವಾನ್ ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತದ ಪರಿಣಾಮವಾಗಿ 1.67 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದೀಗ, ಸಮಸ್ಯೆ ಸರಿಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 242 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಶುಕ್ರವಾರ ಒಂದು ಸಾವಿರ ವಿಮಾನಗಳ ಪ್ರಯಾಣ ರದ್ದು ಮಾಡಲಾಗಿತ್ತು. ಸದ್ಯ ಪರಿಸ್ಥಿತಿ ಸುಧಾರಿಸಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿ ತೈಪೆ ಸೇರಿದಂತೆ ಹಲವೆಡೆ ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಚಂಡಮಾರುತ ಪರಿಸ್ಥಿತಿಗಳನ್ನು ಎದುರಿಸಲು ಸದಾ ಸನ್ನದ್ಧವಾಗಿರುವುದರಿಂದ ತೈವಾನ್ನಲ್ಲಿ ಸಾವು-ನೋವಿನ ಪ್ರಮಾಣ ಕಡಿಮೆ.



