ಅಮೆರಿಕದ ಟೆಕ್ ದೊರೆ ನೆವಿಲ್ಲೆ ರಾಯ್ ಸಿಂಗಮ್ (Neville Roy Singham) ಭಾರತದಲ್ಲಿ 'ಸರ್ಕಾರ ಬದಲಾವಣೆ' ಯತ್ನದ ಆರೋಪಗಳ ಕೇಂದ್ರಬಿಂದುವಾಗಿದ್ದಾರೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಪತ್ರಿಕಾಗೋಷ್ಠಿಯಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿಂಗಮ್, ಕ್ರಿಪ್ಟೋಕರೆನ್ಸಿ, ಬಿಟ್ಕಾಯಿನ್ ಮತ್ತು ಆನ್ಲೈನ್ ಜೂಜಾಟವನ್ನು ಒಳಗೊಂಡಿರುವ ಜಾಲವು ದೊಡ್ಡ ರಾಜಕೀಯ ಜಾಲವಾಗಿದೆ ಎಂದು ಆರೋಪಿಸಿದ್ದಾರೆ.
ಭಾರತದಲ್ಲಿ 'ಸರ್ಕಾರ ಬದಲಾವಣೆ' ಮಾಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಂಗಮ್ ಹೆಸರು ಮುನ್ನೆಲೆಗೆ ಬಂದಿದೆ.
ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರು ಹೆಚ್ಚುತ್ತಿರುವ ಪ್ರತಿಭಟನೆಗಳು ಹಾಗೂ ಅಂತರರಾಷ್ಟ್ರೀಯ ಕಾರ್ಯಕರ್ತರ ಜಾಲಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬಳಿಕ ರಾಜಕೀಯ ಕೋಲಾಹಲ ಉಂಟಾಗಿದೆ.
ಫ್ರಾನ್ಸ್ ನಲ್ಲಿ ನಡೆದ ಗಲಭೆಗಳು ಮತ್ತು ದಿಲ್ಲಿಯಲ್ಲಿ ಚುನಾವಣಾ ಆಯುಕ್ತರ (CEC) ವಿರುದ್ಧ ನಡೆದ ಪ್ರತಿಭಟನೆಗಳ ನಡುವೆ 'ಸಂಬಂಧ'ವಿದೆ ಎಂದು ಪ್ರತಿಪಾದಿಸಿರುವ ಫಾಕ್ಸ್ ನ್ಯೂಸ್ ವರದಿಯನ್ನೂ ಬಿಜೆಪಿ ಉಲ್ಲೇಖಿಸಿದೆ. ಈ ಜಾಲವು 13 ದೇಶಗಳ 101 ಸಂಸ್ಥೆಗಳನ್ನು ಗುರುತಿಸಿದ್ದು, ಅವು ಪ್ರತಿಭಟನೆಗಳನ್ನು ಸಂಘಟಿಸುತ್ತಿವೆ ಅಥವಾ ಪ್ರಚೋದಿಸುತ್ತಿವೆ ಎಂದು ಫಾಕ್ಸ್ ನ್ಯೂಸ್ ತನಿಖೆ ಆರೋಪಿಸಿದೆ.
ನೆವಿಲ್ಲೆ ರಾಯ್ ಸಿಂಗಮ್ ಯಾರು?
ಸಿಂಗಮ್ ನ್ಯೂಯಾರ್ಕ್ ಮೂಲದ 'ಪೀಪಲ್ಸ್ ಫೋರಮ್' ಎಂಬ ಎಡಪಂಥೀಯ ಲಾಭರಹಿತ ಸಂಸ್ಥೆಯ ಪ್ರಮುಖ ಆರ್ಥಿಕ ಬೆಂಬಲಿಗರಾಗಿದ್ದಾರೆ. ಸಂಕಷ್ಟಕ್ಕೊಳಗಾದ ಕಾರ್ಮಿಕ ವರ್ಗ ಮತ್ತು ಇತರ ಶೋಷಿತ ಸಮುದಾಯಗಳ ಪರವಾಗಿ ಈ ಸಂಸ್ಥೆ ಧ್ವನಿ ಎತ್ತುತ್ತದೆ ಎಂದು 'ಸಿಬಿಎಸ್ ನ್ಯೂಸ್' ವರದಿ ಮಾಡಿದೆ.
ಸಿಂಗಮ್ ಅವರು 'ಥಾಟ್ವರ್ಕ್ಸ್' (Thoughtworks) ಎಂಬ ಐಟಿ ಸಲಹಾ ಸಂಸ್ಥೆಯ ಸಂಸ್ಥಾಪಕರೂ ಹೌದು. ಯುದ್ಧವಿರೋಧಿ ಸಂಘಟನೆ 'ಕೋಡ್ ಪಿಂಕ್'ನ ಸಹ-ಸಂಸ್ಥಾಪಕಿ ಜೋಡಿ ಇವಾನ್ಸ್ ಅವರನ್ನು ಅವರು ವಿವಾಹವಾಗಿದ್ದಾರೆ. ಸಿಂಗಮ್ ಶ್ರೀಲಂಕಾದಿಂದ ವಲಸೆ ಬಂದವರ ಮಗ.
2017ರಲ್ಲಿ ಸಿಂಗಮ್ ಅವರು ಥಾಟ್ವರ್ಕ್ಸ್ ಸಂಸ್ಥೆಯನ್ನು ಸುಮಾರು 785 ಮಿಲಿಯನ್ ಡಾಲರ್ಗೆ ಖಾಸಗಿ ಈಕ್ವಿಟಿ ಕಂಪನಿಯೊಂದಕ್ಕೆ ಮಾರಾಟ ಮಾಡಿದರು. ಈ ಒಪ್ಪಂದದಿಂದ ಅವರು ಜಾಗತಿಕ ತಂತ್ರಜ್ಞಾನ ವಲಯದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದರು ಎಂದು ವರದಿಗಳು ತಿಳಿಸಿವೆ.
ಬಳಿಕ ಅವರು ತಮ್ಮ ವ್ಯವಹಾರಗಳನ್ನು ಚೀನಾದ ಶಾಂಘೈಗೆ ಸ್ಥಳಾಂತರಿಸಿದರು ಮತ್ತು ನೂರಾರು ಮಿಲಿಯನ್ ಡಾಲರ್ಗಳ ಆರ್ಥಿಕ ಬೆಂಬಲದೊಂದಿಗೆ ಜಾಗತಿಕ ಲಾಭರಹಿತ ಸಂಸ್ಥೆಗಳು ಹಾಗೂ ಥಿಂಕ್ಟ್ಯಾಂಕ್ಗಳ ಬೃಹತ್ ಜಾಲಕ್ಕೆ ಹಣಕಾಸು ನೆರವು ನೀಡಲು ಆರಂಭಿಸಿದರು ಎಂದು ವರದಿಗಳು ಹೇಳಿವೆ.
ಅವರ ಮೇಲಿರುವ 'ಸರ್ಕಾರ ಬದಲಾವಣೆ' ಯತ್ನದ ಆರೋಪವೇನು?
ಅಂತರರಾಷ್ಟ್ರೀಯ ಕಾರ್ಯಕರ್ತರ ಜಾಲಗಳು ಭಾರತದ ಚುನಾಯಿತ ಮೋದಿ ಸರ್ಕಾರದ ವಿರುದ್ಧ ರಾಜಕೀಯ ಪ್ರತಿಭಟನೆಗಳನ್ನು ಪ್ರಚೋದಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ನಾಯಕರು ಮಾಡಿರುವ ಆರೋಪಗಳು ಇತ್ತೀಚಿನ ವಿವಾದದ ಪ್ರಮುಖ ಅಂಶವಾಗಿವೆ.
'Global Chaos Inc Grows to 101 Groups' ಎಂಬ ವರದಿಯನ್ನು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಉಲ್ಲೇಖಿಸಿದ್ದಾರೆ. ಹಲವು ದೇಶಗಳ ಸಂಸ್ಥೆಗಳು ಪ್ರತಿಭಟನೆಗಳಿಗೆ ಸಂಬಂಧಿಸಿದ ಸಂದೇಶಗಳನ್ನು ದೇಶಾದ್ಯಂತ ಪಸರಿಸಲು ಒಟ್ಟಾಗಿ ಕೆಲಸ ಮಾಡಿವೆ ಎಂದು ಅವರು ಆರೋಪಿಸಿದ್ದಾರೆ.
ಭಾರತ, ಫ್ರಾನ್ಸ್, ಸ್ಪೇನ್ ಮತ್ತು ಆಲ್ಬೇನಿಯಾಗಳಲ್ಲಿ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸಿರುವ ಭಂಡಾರಿ, ಕಾರ್ಯಕರ್ತರ ಸಂಘಟನೆಗಳು ಮತ್ತು ಸಿಂಗಮ್ಗೆ ಸಂಬಂಧಿಸಿದ ಗುಂಪುಗಳ ನಡುವಿನ ನಂಟನ್ನು ಎತ್ತಿ ತೋರಿಸಿದ್ದಾರೆ.
ವಿದೇಶಿ ರಾಜಕೀಯ ಸಂಘಟನೆಯಾದ 'ಪ್ರೋಗ್ರೆಸಿವ್ ಇಂಟರ್ನ್ಯಾಷನಲ್'ನ ನಾಯಕರೊಂದಿಗೆ ಕಾಂಗ್ರೆಸ್ ನಾಯಕತ್ವ ಹೊಂದಿರುವ ಸಂಪರ್ಕವನ್ನೂ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿ ವಿವಾದ ಹಾಗೂ ಚುನಾವಣಾ ಆಯೋಗದಿಂದ ಹೆಚ್ಚಿನ ಪಾರದರ್ಶಕತೆ ಕೋರಿ ನಡೆಯುತ್ತಿರುವ ಪ್ರತಿಭಟನೆಗಳನ್ನೂ ಬಿಜೆಪಿ ನಾಯಕರು ಈ ವಿವಾದಕ್ಕೆ ಜೋಡಿಸಿದ್ದಾರೆ. ಆಡಳಿತಾರೂಢ ಸರ್ಕಾರವನ್ನು ಅಸ್ಥಿರಗೊಳಿಸುವ ದೊಡ್ಡ ಯತ್ನದ ಭಾಗವಾಗಿ ಈ ಪ್ರತಿಭಟನೆಗಳು ನಡೆಯುತ್ತಿರಬಹುದು ಎಂದು ಅವರು ಆರೋಪಿಸಿದ್ದಾರೆ.
"ಕಾಂಗ್ರೆಸ್ ಗೆ ನನ್ನ ಪ್ರಶ್ನೆ ಏನೆಂದರೆ, ನೆವಿಲ್ಲೆ ರಾಯ್ ಸಿಂಗಮ್, ಆನ್ಲೈನ್ ಜೂಜಾಟ, ಕೃತಕ ಬುದ್ಧಿಮತ್ತೆ (AI) ಮತ್ತು ಕ್ರಿಪ್ಟೋಕರೆನ್ಸಿಯಲ್ಲಿ ತೊಡಗಿರುವ ಕಾರ್ಟೆಲ್ಗಳಿಗೆ ಸಂಬಂಧಿಸಿದಂತೆ ಈ ವಲಯಗಳ ಯಾವ ವ್ಯಕ್ತಿಗಳನ್ನು ರಾಹುಲ್ ಗಾಂಧಿ ಕಳೆದ ಐದು ವರ್ಷಗಳಲ್ಲಿ ಭೇಟಿಯಾಗಿದ್ದಾರೆ?" ಎಂದು ಬಿಜೆಪಿ ಸಂಸದ ದುಬೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
"ಈ ವ್ಯಕ್ತಿಗಳಲ್ಲಿ ಯಾರು ಅವರ 'ಭಾರತ್ ಜೋಡೋ ಯಾತ್ರೆ' ಅಥವಾ ಇತರ ಯಾತ್ರೆಗಳಲ್ಲಿ ಭಾಗವಹಿಸಿದ್ದಾರೆ? ಅಷ್ಟೇ ಅಲ್ಲದೆ, ಅವರು ವಿದೇಶಕ್ಕೆ ಪ್ರಯಾಣಿಸಿದಾಗಲೆಲ್ಲ ಇಂತಹ ಯಾವ ವ್ಯಕ್ತಿಗಳನ್ನು ಭೇಟಿಯಾಗುತ್ತಾರೆ ಮತ್ತು ದೇಶವನ್ನು ಅಸ್ಥಿರಗೊಳಿಸಲು ಅವರು ಯಾವ ರೀತಿಯ ಯೋಜನೆಗಳನ್ನು ರೂಪಿಸುತ್ತಾರೆ?" ಎಂದು ದುಬೆ ಕೇಳಿದ್ದಾರೆ.
ಭಾರತದಲ್ಲಿ ಸಿಂಗಮ್ ಹೆಸರು ಮೊದಲು ಮುನ್ನೆಲೆಗೆ ಬಂದಿದ್ದು ಹೇಗೆ?
ಎಡಪಂಥೀಯ ರಾಜಕೀಯ ಪರ ವಕಾಲತ್ತು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಸಿಂಗಮ್ ಹೊಂದಿರುವ ಹಣಕಾಸಿನ ಸಂಬಂಧಗಳ ಕುರಿತು ಅಮೆರಿಕದ 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆ ತನಿಖಾ ವರದಿ ಪ್ರಕಟಿಸಿದ ಬಳಿಕ, 2023ರಲ್ಲಿ ಭಾರತದಲ್ಲಿ ಸಿಂಗಮ್ ಹೆಸರು ಮೊದಲ ಬಾರಿಗೆ ತೀವ್ರ ಚರ್ಚೆಗೆ ಒಳಗಾಯಿತು.
ಬೀಜಿಂಗ್ ನ ಸರ್ಕಾರಿ ಮಾಧ್ಯಮ ವ್ಯವಸ್ಥೆಯೊಂದಿಗೆ ಸಿಂಗಮ್ ನಿಕಟವಾಗಿ ಕೆಲಸ ಮಾಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿತ್ತು. ಆದರೆ, ಚೀನಾ ಸರ್ಕಾರದ ಸೂಚನೆಯ ಮೇರೆಗೆ ಕೆಲಸ ಮಾಡಿರುವುದನ್ನಾಗಲೀ, ಯಾವುದೇ ರಾಜಕೀಯ ಪಕ್ಷಗಳಿಂದ ನಿರ್ದೇಶನಗಳನ್ನು ಪಡೆದಿರುವುದನ್ನಾಗಲೀ ಸಿಂಗಮ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಭಾರತದಲ್ಲಿ ಸಿಂಗಮ್ ಕುರಿತ ಪ್ರಮುಖ ವಿವಾದವು ಪ್ರಬೀರ್ ಪುರಕಾಯಸ್ಥ ಸ್ಥಾಪಿಸಿರುವ 'ನ್ಯೂಸ್ಕ್ಲಿಕ್' (NewsClick) ಡಿಜಿಟಲ್ ಸುದ್ದಿ ಮಾಧ್ಯಮದ ಸುತ್ತ ಕೇಂದ್ರೀಕೃತವಾಗಿದೆ.
'A Global Web of Chinese Propaganda Leads to a US Tech Mogul' (ಚೀನಾದ ಪ್ರಚಾರದ ಜಾಗತಿಕ ಜಾಲವು ಅಮೆರಿಕದ ಟೆಕ್ ದೊರೆಯ ಬಳಿಗೆ ಕೊಂಡೊಯ್ಯುತ್ತದೆ) ಎಂಬ ಶೀರ್ಷಿಕೆಯ ವರದಿಯಲ್ಲಿ, ನ್ಯೂಸ್ಕ್ಲಿಕ್ ಸುದ್ದಿ ಪೋರ್ಟಲ್ ಸಿಂಗಮ್ನಿಂದ ಹಣಕಾಸಿನ ನೆರವು ಪಡೆದ ಜಾಗತಿಕ ಜಾಲದ ಒಂದು ಭಾಗವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಆರೋಪಿಸಿತ್ತು.
ಸಿಂಗಮ್ ಮತ್ತು ಸುದ್ದಿ ಸಂಸ್ಥೆಯ ನಡುವಿನ ಆರೋಪಿತ ಹಣಕಾಸಿನ ಸಂಬಂಧಗಳ ಕುರಿತು ವರದಿ ಪ್ರಕಟವಾದ ಬಳಿಕ, ಭಾರತೀಯ ಅಧಿಕಾರಿಗಳು ನ್ಯೂಸ್ಕ್ಲಿಕ್ಗೆ ಬಂದ ನಿಧಿಯ ಮೂಲಗಳು ಮತ್ತು ಹಣದ ಚಲನವಲನದ ಬಗ್ಗೆ ತನಿಖೆ ನಡೆಸಿದರು.
ಅಕ್ರಮ ಜಾಗತಿಕ ನಿಧಿ ಸಂಗ್ರಹಣೆ ಮತ್ತು ಚೀನಾ ಪರ ನಿಲುವುಗಳನ್ನು ಬಿಂಬಿಸಿದ ಆರೋಪಗಳಿಗೆ ಸಂಬಂಧಿಸಿದಂತೆ, ದಿಲ್ಲಿ ಪೊಲೀಸರು 2023ರ ಅಕ್ಟೋಬರ್ನಲ್ಲಿ ಪುರಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಿದರು.
ಸಿಂಗಮ್ ಯಾವುದೇ ತಪ್ಪು ಮಾಡಿರುವುದನ್ನು ನಿರಾಕರಿಸಿದ್ದಾರೆ. ಆದರೆ, ಅವರ ರಾಜಕೀಯ ನಂಬಿಕೆಗಳು ಮತ್ತು ಅವರು ಬೆಂಬಲಿಸುವ ಸಂಸ್ಥೆಗಳ ನಡುವಿನ ಹಣಕಾಸಿನ ಸಂಬಂಧಗಳು ಸಾಂಪ್ರದಾಯಿಕ ದತ್ತಿ ಚಟುವಟಿಕೆಗಳ ವ್ಯಾಪ್ತಿಯನ್ನು ಮೀರಿವೆಯೇ ಎಂಬ ಬಗ್ಗೆ ತನಿಖೆ ಮತ್ತು ಅನುಮಾನಗಳು ಮುಂದುವರಿದಿವೆ.



