ಒರೆಗಾನ್: 16 ವರ್ಷದ ಬಾಲಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಒರೆಗಾನ್ ನ ಬೆಂಡ್ ನಲ್ಲಿನ ಪ್ರಾಥಮಿಕ ಶಾಲೆಯೊಂದರಲ್ಲಿ ಗುರುವಾರ ನಡೆದಿದೆ. ಬಳಿಕ ದಾಳಿಕೋರ ಬಾಲಕನನ್ನು ಸಶಸ್ತ್ರಧಾರಿ ನಾಗರಿಕರೊಬ್ಬರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರನ ವಯಸ್ಸಿನ ಬಗ್ಗೆ ಮಾತ್ರ ಮಾಹಿತಿ ನೀಡಿರುವ ಪೊಲೀಸರು, ಬೀಗ ಹಾಕಿದ್ದ ಬಾಗಿಲು ಹೊಡೆದು ಆತ ಶಾಲೆಯೊಳಗೆ ಪ್ರವೇಶಿಸಿದ್ದಾನೆ ಎಂದು ತಿಳಿಸಿದ್ದಾರೆ.
ಮೃತ ಮಕ್ಕಳು ಕ್ರಮವಾಗಿ 5, 8 ಹಾಗೂ 11 ವರ್ಷ ವಯಸ್ಸಿನವರಾಗಿದ್ದಾರೆ. ಅವರೊಂದಿಗೆ ಶಿಕ್ಷಕರೊಬ್ಬರೂ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ವಿದ್ಯಾರ್ಥಿ ಹಾಗೂ ಶಿಕ್ಷಕರೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬೆಂಡ್ ಪೊಲೀಸ್ ಮುಖ್ಯಸ್ಥ ಮೈಕ್ ಕ್ರಾಂಟ್ಝ್ ತಿಳಿಸಿದ್ದಾರೆ.
ದಾಳಿಕೋರ ಬಾಲಕನನ್ನು ಹೊಡೆದುರುಳಿಸಿದ ನಾಗರಿಕನನ್ನು ಪ್ರಶಂಶಿಸಿರುವ ಒರೆಗಾನ್ ಗವರ್ನರ್ ಟೀನಾ ಕೊಟೆಕ್, ಅವರು ಮಧ್ಯಪ್ರವೇಶಿಸಿದ್ದರಿಂದ, ಮತ್ತಷ್ಟು ಸಾವುನೋವು ತಪ್ಪಿದೆ ಎಂದು ಶ್ಲಾಘಿಸಿದ್ದಾರೆ.
"ಯಾವ ಪೋಷಕರಿಗೂ ಇಂತಹ ದಿನ ಬರಬಾರದು. ಈ ದಾಳಿಯಲ್ಲಿ ಜೀವ ಕಳೆದುಕೊಂಡಿರುವ ಮಕ್ಕಳು ಹಾಗೂ ವಯಸ್ಕರಿಗೆ ನಮ್ಮ ಸಂತಾಪಗಳು" ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.



