ಬಹುಶಃ ಇಂದು ವಿಧಿ ಬರಹವೇ ಬೇರೆಯಾಗಿರುತ್ತಿತ್ತೇನೋ!
ಅಂದು ನಡೆದ ಕಾರ್ಯಾಗಾರ ಸ್ಮಿತ್ ಮಚ್ಚರ್ ಜೀವನದ ದಿಕ್ಕನ್ನೇ ಬದಲಿಸಿತು. ಬಾಲ್ಯದಲ್ಲಿ ಆಕಾಶಕ್ಕೆ ಕೈಚಾಚಿ 'ನಾನು ಪೈಲಟ್ ಆಗ್ತೀನಿ' ಎಂದು ಹೇಳದಿದ್ದ ಹುಡುಗ, ಹಠಾತ್ತನೆ ಆಕಾಶದ ಗಾಢ ನೀಲಿ ಬಣ್ಣಕ್ಕೆ ಮನಸೋತ. ಮುಂಬೈನಿಂದ ನ್ಯೂಜಿಲೆಂಡ್‌ನ ಪೈಲಟ್ ತರಬೇತಿ ಅಂಗಳಕ್ಕೆ ಜಿಗಿದು ಅಲ್ಲಿಂದ ನೇರವಾಗಿ 'ಸ್ಪೈಸ್‌ಜೆಟ್'ನ ಕಾಕ್‌ಪಿಟ್‌ನಲ್ಲಿ ಕುಳಿತರು.
...ಹೀಗೆ ಬೆಳೆದ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಅಪೂರ್ವ ನಿಷ್ಠೆಯಿತ್ತು. 9,750 ಗಂಟೆಗಳಿಗೂ ಹೆಚ್ಚು ಕಾಲ ಬೋಯಿಂಗ್ ವಿಮಾನ ಹಾರಿಸುತ್ತಾ, 'ಟ್ರೈನಿಂಗ್ ಕ್ಯಾಪ್ಟನ್' ಆಗಿ ನೂರಾರು ಪೈಲಟ್‌ಗಳಿಗೆ ದಾರಿ ದೀಪವಾಗಿದ್ದ ಅವರು 'ಫ್ಲೈದುಬೈ' ಸಂಸ್ಥೆಯ ಕ್ಯಾಪ್ಟನ್ ಆಗಿ ಬೆಳೆದ ಕುತೂಹಲಕಾರಿ ಕಥೆಯಿದು.
ಸೆಪ್ಟೆಂಬರ್ 30, 2026ರಂದು 'ಫ್ಲೈದುಬೈ' ಬೋಯಿಂಗ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ಸಹ ಪೈಲಟ್ ಜತೆ ನಡೆದ ಜಗಳದಲ್ಲಿ ಸ್ಮಿತ್ ಮಚ್ಚರ್ ಇರಿತಕ್ಕೊಳಗಾದರು. ಸದ್ಯ ಅವರು ಸೌದಿ ಅರೇಬಿಯಾದ ತಬೂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಲೇಜು ದಿನಗಳಲ್ಲಿ ತಮ್ಮ ಕುಟುಂಬದ ಜವಳಿ ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಲು ಯೋಜಿಸಿದ್ದರು. ಆದರೆ ಮ್ಯಾನೇಜ್‌ಮೆಂಟ್ ವ್ಯಾಸಂಗಕ್ಕೆ ಕಾಲಿಟ್ಟ ಬಳಿಕ ಅವರ ಜೀವನದ ಹಾದಿಯೇ ಬದಲಾಯಿತು.
ಈ ಅನಿರೀಕ್ಷಿತ ಶೈಕ್ಷಣಿಕ ತಿರುವು ಅವರನ್ನು ಮುಂಬೈನಿಂದ ಪೈಲಟ್ ತರಬೇತಿಗಾಗಿ ನ್ಯೂಜಿಲೆಂಡ್‌ಗೆ, ಬಳಿಕ 'ಸ್ಪೈಸ್‌ಜೆಟ್' ಮತ್ತು 'ಫ್ಲೈದುಬೈ' ಸಂಸ್ಥೆಗೆ ಕರೆದೊಯ್ಯಿತು.
ಟೆಕ್ಸ್‌ಟೈಲ್ ಎಂಜಿನಿಯರಿಂಗ್‌ನಿಂದ ಮ್ಯಾನೇಜ್‌ಮೆಂಟ್‌ವರೆಗೆ
ಶಾಲಾ ಶಿಕ್ಷಣದ ನಂತರ ಕುಟುಂಬದ ಜವಳಿ ಉದ್ಯಮವನ್ನು ಮುಂದುವರಿಸುವ ಉದ್ದೇಶದಿಂದ ಮಚ್ಛಾರ್ ಟೆಕ್ಸ್‌ಟೈಲ್ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿಕೊಂಡರು ಎಂದು ಯೂಟ್ಯೂಬರ್ ಝಲಕ್ ಮೆಹ್ತಾ ಅವರಿಗೆ 2025ರಲ್ಲಿ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಅದನ್ನು ಮೊಟಕುಗೊಳಿಸಿ ಮುಂಬೈನ ವೆಲಿಂಗ್‌ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಒಂದು ವರ್ಷದ ಕೋರ್ಸ್ ಪೂರೈಸಿದರು. ಇಲ್ಲಿಯೇ ಅವರ ವೃತ್ತಿಜೀವನ ಅನಿರೀಕ್ಷಿತ ತಿರುವು ಪಡೆಯಿತು.
ಈ ಕೋರ್ಸ್ ಮಾಡುವಾಗ ಮಚ್ಚರ್ ವೈಮಾನಿಕ ಕ್ಷೇತ್ರದ ಸೆಮಿನಾರ್ ಒಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರಿಗೆ ಪೈಲೆಟ್ ಆಗಬೇಕು ಎನ್ನುವ ಆಸೆ ಚಿಗುರೊಡೆಯಿತು. 'ವೈಮಾನಿಕ ಕ್ಷೇತ್ರಕ್ಕೆ ಬರುವುದು ನನ್ನ ಬಾಲ್ಯದ ಕನಸಾಗಿರಲಿಲ್ಲ, ಮ್ಯಾನೇಜ್‌ಮೆಂಟ್ ವ್ಯಾಸಂಗದ ಸಮಯದಲ್ಲಿ ನಡೆದ ಸೆಮಿನಾರ್ ಒಂದರಲ್ಲಿ ವಿಮಾನ ಹಾರಾಟದ ಬಗ್ಗೆ ತಮಗೆ ಆಸಕ್ತಿ ಮೂಡಿತು' ಎಂದು ಮಚ್ಚರ್ ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದರು.
ಪೈಲಟ್ ತರಬೇತಿಗಾಗಿ ನ್ಯೂಜಿಲೆಂಡ್‌ಗೆ ಪಯಣ
ವೈಮಾನಿಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದರು. ಈ ನಿರ್ಧಾರವು ಅವರ ಮೂಲ ಶೈಕ್ಷಣಿಕ ಹಾದಿಯನ್ನೇ ಸಂಪೂರ್ಣವಾಗಿ ಬದಲಾಯಿಸಿತು. ಕುಟುಂಬದ ಜವಳಿ ಉದ್ಯಮವನ್ನು ಮುಂದುವರಿಸುವ ಬದಲು, ಮಚ್ಚರ್ ವೈಮಾನಿಕ ರಂಗಕ್ಕೆ ಕಾಲಿಟ್ಟರು. ನಂತರ ವಿಮಾನ ಹಾರಾಟ ತರಬೇತಿಗಾಗಿ ನ್ಯೂಜಿಲೆಂಡ್‌ಗೆ ತೆರಳಿದರು.
ಭಾರತಕ್ಕೆ ಮರಳಿದ ಬಳಿಕ ಸ್ಪೈಸ್‌ಜೆಟ್ ಸಂಸ್ಥೆ ಸೇರಿದರು. ಇಲ್ಲಿ ಬೋಯಿಂಗ್-737 ವಿಮಾನ ಹಾರಾಟ ನಡೆಸಿದರು. ಇದು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು. ಬೆಂಗಳೂರು, ದೆಹಲಿ, ಮುಂಬೈ ಹಾಗೂ ನೂರಾರು ದೇಶಗಳಿಗೆ ಬೋಯಿಂಗ್ ವಿಮಾನ ಹಾರಾಟ ನಡೆಸಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ತಮ್ಮ ಮೊದಲ ವಿಮಾನ ಹಾರಾಟ ನಡೆಸಿದ್ದಾಗಿ ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ಟ್ರೈನಿಂಗ್ ಕ್ಯಾಪ್ಟನ್‌ವರೆಗೆ...
ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಮಚ್ಚರ್ ಜೂನ್ 2011 ರಲ್ಲಿ ಸ್ಪೈಸ್‌ಜೆಟ್ ಸೇರಿದರು. ಸುಮಾರು 11 ವರ್ಷ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದರು. ಇಲ್ಲಿ ಹಿರಿಯ ಕಮಾಂಡರ್ ಹಾಗೂ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಬಡ್ತಿ ಪಡೆದರು. ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಪೈಲಟ್‌ಗಳಿಗೆ ತರಬೇತಿ ನೀಡುತ್ತಿದ್ದರು.
ಬೋಯಿಂಗ್-737-800, ಬೋಯಿಂಗ್-737 MAX ಸೇರಿದಂತೆ ಹಲವು ಬೋಯಿಂಗ್ ವಿಮಾನಗಳಲ್ಲಿ ಸುಮಾರು 9,750 ಗಂಟೆಗಳ ಹಾರಾಟದ ಅನುಭವವಿದೆ. ಸ್ಪೈಸ್‌ಜೆಟ್‌ನಲ್ಲಿದ್ದಾಗ ಪೈಲಟ್-ಇನ್-ಕಮಾಂಡರ್ ಆಗಿ 6,400ಕ್ಕೂ ಹೆಚ್ಚು ಗಂಟೆಗಳ ಹಾರಾಟ ನಡೆಸಿದ ದಾಖಲೆಯಿದೆ. ಸ್ಪೈಸ್‌ಜೆಟ್ ಸಂಸ್ಥೆಯಿಂದ ಹೊರಬಂದ ಬಳಿಕ ಜೂನ್ 2022ರಲ್ಲಿ ಅವರು ''ಫ್ಲೈದುಬೈ' ಸಂಸ್ಥೆಗೆ ಕ್ಯಾಪ್ಟನ್ ಆಗಿ ಸೇರಿದರು.
174 ಜನರ ಪ್ರಾಣ ಉಳಿಸಿದ ಮಚ್ಚರ್
2026ರ ಸೆಪ್ಟೆಂಬರ್ 30ರಂದು ಅವರ ಸುದೀರ್ಘ ತರಬೇತಿ ಮತ್ತು ಅನುಭವಕ್ಕೆ ದೊಡ್ಡ ಪರೀಕ್ಷೆ ಎದುರಾಯಿತು. 27 ಮಕ್ಕಳು ಸೇರಿದಂತೆ 174 ಪ್ರಯಾಣಿಕರಿದ್ದ ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ 'ಫ್ಲೈದುಬೈ' ಸಂಸ್ಥೆಯ ಬೋಯಿಂಗ್-737 MAX ವಿಮಾನವನ್ನು ಹಾರಿಸುತ್ತಿರುವಾಗ ಒಮಾನ್ ಮೂಲದ ಸಹಪೈಲಟ್ ವಿಮಾನವನ್ನು ಪತನಗೊಳಿಸಲು ಯತ್ನಿಸಿ ಮಚ್ಚರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ.
ವಿಮಾನದ ಡೇಟಾ ಪ್ರಕಾರ, ಕೇವಲ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ವಿಮಾನವು 14,000 ಅಡಿಗಳಷ್ಟು ಕೆಳಗೆ ಕುಸಿದಿತ್ತು. ನಿಯಂತ್ರಣ ಕೊಠಡಿಗೆ ತುರ್ತು ಸಂಕೇತಗಳಾದ 7700 ಮತ್ತು 7500 ರವಾನೆಯಾಗಿದ್ದವು. ಮಚ್ಚರ್ ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು ಇದರಿಂದ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳನುಗ್ಗಿ ಸಹಪೈಲಟ್‌ನನ್ನು ವಶಕ್ಕೆ ಪಡೆದರು.
ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿಸಿದರು. ಮುಂಬೈ ಮೂಲದ ಮಚ್ಚರ್ ಅವರಿಗೆ ಶಸ್ತ್ರಚಿಕಿತ್ಸೆಯಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ.

