ಕೊಚ್ಚಿ: ಮಂಗಳೂರು ಎಕ್ಸ್‌ಪ್ರೆಸ್ ಬರೋಬ್ಬರಿ 21 ಗಂಟೆ ತಡವಾಗಿ ಸಂಚರಿಸಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ದೆಹಲಿಯ ಹಜರತ್ ನಿಜಾಮುದ್ದೀನ್‌ನಿಂದ ಹೊರಟ ಮಂಗಳೂರು–ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲ್ವೆ ಹಳಿಗಳ ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಮಾರ್ಗ ಬದಲಾಯಿಸಿದ್ದರಿಂದ ಈ ವಿಳಂಬ ಉಂಟಾಗಿದೆ.
ಅಕ್ಟೋಬರ್ 15ರಂದು ಪ್ರಯಾಣ ಆರಂಭಿಸಿದ್ದ ರೈಲನ್ನು ಹಲವು ನಿಲ್ದಾಣಗಳಲ್ಲಿ ದೀರ್ಘಕಾಲ ತಡೆಹಿಡಿಯಲಾಗಿತ್ತು. ಇದರಿಂದ ಬೇಸತ್ತ ಪ್ರಯಾಣಿಕರು ನಡೆಸಿದ ವಿಭಿನ್ನ ರೀತಿಯ ಪ್ರತಿಭಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಗಂಟೆಗಟ್ಟಲೆ ಅನಿಶ್ಚಿತತೆ ಮತ್ತು ಪ್ರಯಾಣದ ವಿಳಂಬದಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರೂ, ಕೋಪ ವ್ಯಕ್ತಪಡಿಸುವ ಬದಲು ತಮ್ಮ ಪ್ರತಿಭಟನೆಯನ್ನೇ ಸಂಭ್ರಮವನ್ನಾಗಿ ಪರಿವರ್ತಿಸಿಕೊಂಡರು.
ರೈಲನ್ನು ವಿವಿಧ ನಿಲ್ದಾಣಗಳಲ್ಲಿ ಪದೇಪದೇ ತಡೆಹಿಡಿಯಲಾಗಿತ್ತು. ಪೂಜಾ ರಜೆಯ ಸಂದರ್ಭದಲ್ಲಿ ಊರಿಗೆ ಬಂದಿದ್ದ ಹಲವರ ಒಂದು ದಿನದ ರಜೆಯೇ ರೈಲು ಪ್ರಯಾಣದಲ್ಲಿ ಕಳೆದುಹೋಯಿತು.
ಆದರೂ ಯುವ ಪ್ರಯಾಣಿಕರು ಹಾಡು, ನೃತ್ಯ ಮತ್ತು ಆಟಗಳ ಮೂಲಕ ಸಮಯ ಕಳೆಯುತ್ತಾ ಪರಿಸ್ಥಿತಿಯನ್ನು ಆನಂದದ ಕ್ಷಣಗಳನ್ನಾಗಿ ಮಾಡಿಕೊಂಡರು. ಈ ವಿಶಿಷ್ಟ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೊನೆಗೂ ರೈಲು ಎರ್ನಾಕುಳಂ ತಲುಪಿದಾಗ, ಯುವ ಪ್ರಯಾಣಿಕರು ರೈಲಿಗೆ ಮುತ್ತು ಕೊಟ್ಟು ಬೀಳ್ಕೊಟ್ಟರು. ರೈಲಿನ ವಿಳಂಬದ ವಿರುದ್ಧದ ಅಸಮಾಧಾನವನ್ನು ಹಾಸ್ಯ ಮತ್ತು ಸಂಭ್ರಮದ ಮೂಲಕ ವ್ಯಕ್ತಪಡಿಸಿದ ಅವರ ನಡೆ ಇದೀಗ ಚರ್ಚೆಯ ವಿಷಯವಾಗಿದೆ.



