HEALTH TIPS

ಎಲ್ಲ ರೈಲು ಟಿಕೆಟ್‌ಗಳಿಗೂ ವಿಮೆ ಕಡ್ಡಾಯ, ಅ.27ರಿಂದಲೇ ಅನ್ವಯ: SC ನಿರ್ದೇಶನ


ನವದೆಹಲಿ: ರೈಲು ನಿಲ್ದಾಣಗಳ ಕೌಂಟರ್‌ಗಳಲ್ಲಿ ಖರೀದಿ ಮಾಡಿದ ಎಲ್ಲ ಟಿಕೆಟ್‌ಗಳಿಗೂ ಅಕ್ಟೋಬರ್ 27ರಿಂದಲೇ ಕಡ್ಡಾಯವಾಗಿ ವಿಮೆ ಸೌಲಭ್ಯ ಒದಗಿಸಬೇಕು ಎಂದು ಭಾರತೀಯ ರೈಲ್ವೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಅಹಸಾನುದ್ದಿನ್ ಅಮಾನುಲ್ಲಾಹ್ ಮತ್ತು ಆರ್.ಮಾಧವನ್ ಅವರ ಪೀಠವು 2023ರ ಜೂನ್‌ನಲ್ಲಿ ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದ ಬಳಿಕ ಸುರಕ್ಷತಾ ಕ್ರಮಗಳ ಕುರಿತು ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದೆ.

ಸಾಕಷ್ಟು ಅನುದಾನವಿದ್ದರೂ, ಅತ್ಯಗತ್ಯ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುವ ರೈಲ್ವೆ ಸಚಿವಾಲಯದ ವಿರುದ್ಧ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ರೈಲು ಹಳಿಗಳಿಗೆ ಬೇಲಿ ಹಾಕುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಆಫ್‌ಲೈನ್ ಟಿಕೆಟ್ ಗ್ರಾಹಕರಿಗೆ ವಿಮೆ ಸೌಲಭ್ಯ ವಿಸ್ತರಿಸಿಲ್ಲ ಎಂದೂ ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.

ವಿಮೆ ನಿರ್ದೇಶನವನ್ನು ಕಡ್ಡಾಯವಾಗಿ ಜಾರಿಗೆ ತರದಿದ್ದರೆ ರೈಲ್ವೆ ಮಂಡಳಿಯನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಪೀಠ ಎಚ್ಚರಿಸಿದೆ.

ವಿಮೆ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ಈ ಭರವಸೆಗಳು ಕೇವಲ ಕಾಗದದ ಮೇಲಷ್ಟೇ ಉಳಿದಿವೆ ಮತ್ತು ತಳಮಟ್ಟದಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ. ಜನರ ಸುರಕ್ಷತೆ ಮತ್ತು ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಕಾಯ್ದಿರಿಸಿದ ಅನುದಾನವನ್ನೂ ಸಂಪೂರ್ಣವಾಗಿ ಬಳಸಿಲ್ಲ' ಎಂದೂ ನ್ಯಾಯಪೀಠ ತಿಳಿಸಿದೆ.

ಸದ್ಯಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸುವವರಿಗೆ ಮಾತ್ರ ವಿಮೆ ಸೌಲಭ್ಯ ಸಿಗುತ್ತಿದೆ. ಆದರೆ, ಸಮಾಜದ ಕೆಳಹಂತದ ಜನರು ಹೆಚ್ಚಾಗಿ ಬಳಸುವ ಕೌಂಟರ್ ಟಿಕೆಟ್‌ಗಳಿಗೂ ಈ ಸೌಲಭ್ಯ ವಿಸ್ತರಿಸಲು ಸೂಕ್ತ ವ್ಯವಸ್ಥೆ ರೂಪಿಸಲು ಸಾಕಷ್ಟು ಸಮಯ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅಕ್ಟೋಬರ್ 27ರಿಂದಲೇ ಜಾರಿಗೆ ಬರುವಂತೆ ಕೌಂಟರ್‌ನಲ್ಲಿ ಮಾರಾಟವಾಗುವ ಎಲ್ಲಾ ಟಿಕೆಟ್‌ಗಳಿಗೂ ವಿಮೆ ಸೌಲಭ್ಯವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಸುರಕ್ಷತೆ ವಿಚಾರದಲ್ಲಿ ಮೂಲಭೂತ ಅಗತ್ಯತೆಗಳ ಪಾಲನೆ ಆಗಿಲ್ಲ ಮತ್ತು ನಿಯಮಗಳು ಅನುಷ್ಠಾನಗೊಳ್ಳದೆ ಉಳಿದಿವೆ. ರೈಲು ಹಳಿಗಳಿಗೆ ಬೇಲಿ ಹಾಕುವ ಗುರಿಯಲ್ಲಿ ಪ್ರತಿ ವರ್ಷ ಸುಮಾರು ಮೂರನೇ ಒಂದು ಭಾಗದಷ್ಟು ಹಿನ್ನಡೆಯಾಗುತ್ತಿದೆ. ಈ ಕುರಿತು ಮುಂದಿನ ವಿಚಾರಣೆ ದಿನದಂದು (ನವೆಂಬರ್ 16) ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಖುದ್ದಾಗಿ ಹಾಜರಿರಬೇಕು ಮತ್ತು ವಿವರಣೆ ನೀಡಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.

ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ವಿನಾಯಿತಿ ನೀಡುವುದಿಲ್ಲ ಮತ್ತು ತಳಮಟ್ಟದಲ್ಲಿ ಮಹತ್ವದ ಪ್ರಗತಿ ಕಂಡುಬರದಿದ್ದರೆ ಪ್ರಸ್ತುತ ಮಂಡಳಿಯು ಮುಂದುವರಿಯಲು ಅರ್ಹವಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries