HEALTH TIPS

ಮಾಂಸದ ಮುದ್ದೆಗಳಷ್ಟೇ ಇವೆ.. 300 ಸೈನಿಕರ ಹತ್ಯೆಗೆ ನೆರವಾದ ರಷ್ಯನ್ ಸೇನಾಧಿಕಾರಿ

ಉಕ್ರೇನ್ ಮೇಲಿನ ಆಕ್ರಮಣವನ್ನು ವಿರೋಧಿಸಿ 26 ವರ್ಷದ ರಷ್ಯನ್ ಮಿಲಿಟರಿ ಅಧಿಕಾರಿಯೊಬ್ಬರು ರಹಸ್ಯವಾಗಿ ತಮ್ಮ ದೇಶದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಉಕ್ರೇನ್ ಪಡೆಗಳಿಗೆ ರಷ್ಯಾದ ಯುದ್ಧ ಯೋಜನೆಗಳು ಮತ್ತು ಗೂಢಚಾರ ಮಾಹಿತಿಯನ್ನು ಒದಗಿಸುವ ಮೂಲಕ 300ಕ್ಕೂ ಹೆಚ್ಚು ರಷ್ಯನ್ ಸೈನಿಕರ ಹತ್ಯೆಗೆ ಕಾರಣರಾದರು.


ಬಳಿಕ ಅವರು ಯುದ್ಧಭೂಮಿಯ ಗಡಿ ದಾಟಿ ಉಕ್ರೇನ್‌ಗೆ ಪಲಾಯನ ಮಾಡಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು 'ವಾಲ್ ಸ್ಟ್ರೀಟ್ ಜರ್ನಲ್' ವರದಿ ಉಲ್ಲೇಖಿಸಿ 'ಎನ್‌ಡಿಟಿವಿ' ವರದಿ ಮಾಡಿದೆ.

ಲೆಫ್ಟಿನೆಂಟ್ 'ಲೆವ್ ಸ್ಟುಪ್ನಿಕೋವ್' ಎಂಬ ಅಧಿಕಾರಿ ರಷ್ಯಾ ಸೇನೆಯಲ್ಲಿದ್ದ ತಮ್ಮ ಅಧಿಕಾರವನ್ನು ಬಳಸಿಕೊಂಡು ಉಕ್ರೇನ್ ಗೂಢಚಾರ ಸಂಸ್ಥೆಗೆ ಅತ್ಯಂತ ರಹಸ್ಯ ಮಿಲಿಟರಿ ವಿವರಗಳನ್ನು ರವಾನಿಸುತ್ತಿದ್ದರು. ರಷ್ಯಾ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಕಾರಣ ಅವರಿಗೆ ಸೈನಿಕರ ಚಲನವಲನ, ಯುದ್ಧದ ಯೋಜನೆಗಳು ಹಾಗೂ ಕಣ್ಗಾವಲು ಡ್ರೋನ್ ಮತ್ತು ಕ್ಯಾಮೆರಾಗಳ ಲೈವ್ ದೃಶ್ಯಾವಳಿಗಳನ್ನು ವೀಕ್ಷಿಸುವ ಸಂಪೂರ್ಣ ಅವಕಾಶವಿತ್ತು.

ಆದರೆ ಈ ಕೆಲಸಕ್ಕಾಗಿ ಅವರು ವೈಯಕ್ತಿಕವಾಗಿ ದೊಡ್ಡ ಬೆಲೆ ತೆರಬೇಕಾಯಿತು. ಉಕ್ರೇನ್ ತಲುಪಿ ಮಾಸ್ಕೋ ವಿರುದ್ಧದ ಹೋರಾಟಕ್ಕಿಳಿದ ನಂತರ, ಅವರು ತಮ್ಮ ಪತ್ನಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡರು. ಅವರ ಪತ್ನಿ, 'ನೀವು ರಷ್ಯಾಕ್ಕೆ ಮಾತ್ರವಲ್ಲ, ನಮ್ಮ ದಾಂಪತ್ಯಕ್ಕೂ ದ್ರೋಹ ಬಗೆದಿದ್ದೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆರವಾದದ್ದು ಹೇಗೆ?

ಸಿಗ್ನಲ್ ಕೋರ್ಸ್‌ನ ಮಿಲಿಟರಿ ಅಕಾಡೆಮಿ ಪದವೀಧರರಾಗಿದ್ದ ಸ್ಟುಪ್ನಿಕೋವ್, ಉಕ್ರೇನ್‌ನ ಡೊನ್‌ಬಾಸ್ ಪ್ರದೇಶದ ಭದ್ರ ಕೋಟೆ ವುಹ್ಲೆಡಾರ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಹೊರಟಿದ್ದ ಬೆಟಾಲಿಯನ್ ಒಂದರ ಮುಖ್ಯ ಸಿಗ್ನಲ್ ಅಧಿಕಾರಿಯಾಗಿದ್ದರು.

ಉನ್ನತ ಕಮಾಂಡರ್‌ಗಳನ್ನು ಅವರ ಸೈನ್ಯ ಪಡೆಗಳೊಂದಿಗೆ ಸಂಪರ್ಕದಲ್ಲಿಡುವುದು ಮತ್ತು ಕಣ್ಗಾವಲು ವ್ಯವಸ್ಥೆಯಿಂದ ಬರುವ ಮಾಹಿತಿಯನ್ನು ಅವರಿಗೆ ತಲುಪಿಸುವುದು ಅವರ ಕೆಲಸವಾಗಿತ್ತು. ಆದರೆ ಅದಕ್ಕೆ ಬದಲಾಗಿ, ಅವರು ರಷ್ಯಾದ ನೆಲೆಗಳು ಮತ್ತು ಸೈನ್ಯದ ಚಲನವಲನದ ನಿಖರ ವಿವರಗಳನ್ನು ಉಕ್ರೇನಿಯನ್ ಮಿಲಿಟರಿ ಗೂಢಚಾರರಿಗೆ ರಹಸ್ಯವಾಗಿ ತಲುಪಿಸುತ್ತಿದ್ದರು.

ಪೂರ್ವ ಉಕ್ರೇನ್‌ನ ತೀವ್ರ ಚಳಿಯ ಮುಂಜಾನೆಯೊಂದರಲ್ಲಿ, ಸ್ಟುಪ್ನಿಕೋವ್ ತಮಗೆ ಹೊಟ್ಟೆನೋವು ಬಂದಂತೆ ನಟಿಸಿ ಜೊತೆಯಲ್ಲಿದ್ದ ಸೈನಿಕರಿಂದ ದೂರ ಸರಿದಿದ್ದರು. ತಕ್ಷಣವೇ ಅವರು ಹಂಚಿಕೊಂಡಿದ್ದ ಸ್ಥಳದ (Coordinates) ಮೇಲೆ ಉಕ್ರೇನ್ ಕ್ಷಿಪಣಿ ದಾಳಿ ನಡೆಸಿತು.

ಈ ದಾಳಿಯಲ್ಲಿ 68 ರಷ್ಯನ್ ಸೈನಿಕರು ಸ್ಥಳದಲ್ಲೇ ಮೃತಪಟ್ಟರು. ಮೃತರ ಪಟ್ಟಿಯಲ್ಲಿ ಉಕ್ರೇನ್‌ನ ಪ್ರಮುಖ ಗುರಿಯಾಗಿದ್ದ ಕರ್ನಲ್ ಗುಸೇನ್ ಮುಸಾಯೇವ್ ಕೂಡ ಸೇರಿದ್ದರು. ಜೊತೆಗೆ ಈ ದಾಳಿಯಲ್ಲಿ 60 ಸೈನಿಕರು ತೀವ್ರವಾಗಿ ಗಾಯಗೊಂಡಿದ್ದರು.

ದಾಳಿಯ ನಂತರ ಉಕ್ರೇನಿಯನ್ ಅಧಿಕಾರಿಯೊಬ್ಬರು, ಅಲ್ಲಿ ಸ್ಫೋಟಗಳಾದವೇ? ಫೋಟೊ ಕಳುಹಿಸು ಎಂದು ಮೆಸೇಜ್ ಕಳುಹಿಸಿದಾಗ , ಸ್ಟುಪ್ನಿಕೋವ್ ಅದಕ್ಕೆ 'ಅಲ್ಲಿ ಈಗ ಕೇವಲ ಮಾಂಸದ ಮುದ್ದೆಗಳಷ್ಟೇ ಇವೆ' ಎಂದು ಉತ್ತರಿಸಿದ್ದರು.

ರಷ್ಯನ್ ಸೈನಿಕರಿಂದಲೇ ಮಾಹಿತಿ ಪಡೆಯುವ ಉಕ್ರೇನ್‌ನ ಬೃಹತ್ ಗೂಢಚಾರ ಜಾಲದ ಭಾಗವಾಗಿ ಅವರು ಕೆಲಸ ಮಾಡುತ್ತಿದ್ದರು. ವರದಿಯ ಪ್ರಕಾರ, ಸೈನಿಕರು ಮತ್ತು ಗೃಹಿಣಿಯರು ಸೇರಿದಂತೆ ಸಾವಿರಾರು ರಷ್ಯನ್ನರು ಸುರಕ್ಷಿತ ಆಯಪ್‌ಗಳ ಮೂಲಕ ಉಕ್ರೇನ್ ಏಜೆಂಟರೊಂದಿಗೆ ಸಂಪರ್ಕದಲ್ಲಿದ್ದಾರೆ.

ಉಕ್ರೇನ್ ಮೇಲಿನ ಆಕ್ರಮ ಮನಸ್ಸು ಬದಲಿಸಿತು

ತಮ್ಮದೇ ದೇಶದ ವಿರುದ್ಧವೇ ತಿರುಗಿಬೀಳುವ ಸ್ಟುಪ್ನಿಕೋವ್ ಅವರ ನಿರ್ಧಾರಕ್ಕೆ ಉಕ್ರೇನ್ ಮೇಲಿನ ಆಕ್ರಮಣವೇ ಮುಖ್ಯ ಕಾರಣವಂತೆ. 2022ರ ಫೆಬ್ರುವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣಪ್ರಮಾಣದ ದಾಳಿ ನಡೆಸಿದಾಗ, ನಗರಗಳ ಮೇಲೆ ಹಾರಾಡುತ್ತಿದ್ದ ಹೆಲಿಕಾಪ್ಟರ್‌ಗಳು ಮತ್ತು ಸ್ಫೋಟಗೊಳ್ಳುತ್ತಿದ್ದ ಬಾಂಬ್‌ಗಳ ವಿಡಿಯೊ ನೋಡಿ ಅವರು ಬೆಚ್ಚಿಬಿದ್ದಿದ್ದರು. ಅವರು ಮುಗ್ಧ ನಾಗರಿಕರ ಮೇಲೆ ಬಾಂಬ್ ಹಾಕುತ್ತಿದ್ದರು, ಅದು ಅಧರ್ಮ ಎಂದು ಅವರು ಹೇಳಿದ್ದಾರೆ.

ಯುದ್ಧ ನಡೆಯುತ್ತಿದ್ದರೂ ತಮ್ಮ ಸಹೋದ್ಯೋಗಿ ಸೈನಿಕರು ಮಾಮೂಲಿಯಂತೆ ಇರುತ್ತಿರುವುದು ಕಂಡು ಆಶ್ಚರ್ಯವಾಗುತ್ತಿತ್ತು. ಅವರು ತಮ್ಮ ಮನೆಯಲ್ಲಿ ಪತ್ನಿ ಲಿಜಾ ಜೊತೆ ಕುಳಿತು ರಷ್ಯಾದ ವಿರೋಧ ಪಕ್ಷದ ನಾಯಕರ ವಿಡಿಯೊಳನ್ನು ಹಾಗೂ ಉಕ್ರೇನ್ ವಶದಲ್ಲಿದ್ದ ರಷ್ಯನ್ ಯುದ್ಧ ಕೈದಿಗಳ ಸಂದರ್ಶನಗಳನ್ನು ವೀಕ್ಷಿಸುತ್ತಿದ್ದರು.

ನಮ್ಮ ಮಿಲಿಟರಿ ಅಕಾಡೆಮಿಯಲ್ಲೂ ಕೆಲವು ಕೆಡೆಟ್‌ಗಳು ಇಂತಹುದೇ ಅಭಿಪ್ರಾಯ ಹೊಂದಿದ್ದರು. ಕಣ್ಣ ಸನ್ನೆಯಲ್ಲೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದರು. ಕೆಲವರು ಅಕಾಡೆಮಿಯಿಂದ ಹೊರಬರಲು ಯತ್ನಿಸಿದರೂ ಅವರ ಮನವಿಗಳಿಗೆ ಅನುಮತಿ ಸಿಗಲಿಲ್ಲ.

'ನನ್ನ ಭಾವನೆಗಳನ್ನು ಹೊರಹಾಕಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಒಳಗೊಳಗೇ ನೊಂದಿದ್ದೆ' ಎಂದು ಅವರು ನೆನಪಿಸಿಕೊಂಡಿದ್ದಾರೆ.

ತಾಯಿಯ ಸಹಾಯದಿಂದ ಗೂಢಚಾರ ಸಂಸ್ಥೆಯ ಸಂಪರ್ಕ:

ಸ್ಟುಪ್ನಿಕೋವ್ ಅವರ ತಾಯಿ 49 ವರ್ಷದ ಟಟಯಾನಾ ಯಾಂಟ್ಸೆನ್ ಕೂಡ ಪುಟಿನ್ ಆಡಳಿತವನ್ನು ವಿರೋಧಿಸುತ್ತಿದ್ದರು.ಅವರು ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲೂ ಭಾಗವಹಿಸಿದ್ದರು.

2024ರ ಫೆಬ್ರುವರಿಯಲ್ಲಿ, ತಮ್ಮ ಮಗ ಯುದ್ಧಭೂಮಿಗೆ ಕಾಲಿಟ್ಟ ಮೂರು ತಿಂಗಳ ನಂತರ, ಅವರು ಉಕ್ರೇನಿಯನ್ ಮಿಲಿಟರಿ ಗೂಢಚಾರ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಪ್ರೋಗ್ರಾಮರ್ ಡಿಮಿಟ್ರೋ ಕಾರ್ಪೆಂಕೊ ಅವರನ್ನು ಸಂಪರ್ಕಿಸಿದರು.

ಕಾರ್ಪೆಂಕೊ ಅವರು ಸುರಕ್ಷಿತ ಆಯಪ್‌ಗಳ ರಷ್ಯಾದ ಸೈನಿಕರಿಗೆ ಮಾಹಿತಿ ನೀಡಲು ಹಣದ ಆಮಿಷ ಒಡ್ಡಿ ಗೂಢಚಾರ ಜಾಲ ನಡೆಸುತ್ತಿದ್ದರು. ಅಲ್ಲದೆ ಯುಟ್ಯೂಬ್‌ನಲ್ಲಿ ರಷ್ಯನ್ ಯುದ್ಧ ಕೈದಿಗಳ ಸಂದರ್ಶನಗಳನ್ನು ಹಾಕಿ ಗಮನಸೆಳೆದಿದ್ದರು.

ಉಕ್ರೇನ್‌ಗೆ ಸಹಾಯ ಮಾಡಲು, ಮಿಲಿಟರಿ ಮಾಹಿತಿ ನೀಡುವ ರಷ್ಯನ್ ಸೈನಿಕರಿಗೆ 2,50,000 ರೂಬಲ್ಸ್ (ಸುಮಾರು $2,700) ನೀಡುವುದಾಗಿ ಕಾರ್ಪೆಂಕೊ 2023ರ ಅಕ್ಟೋಬರ್‌ನಲ್ಲಿ, ಪ್ರಕಟಿಸಿದ್ದರು.

ಈ ಜಾಲದ ಮೂಲಕವೇ ಸ್ಟುಪ್ನಿಕೋವ್ ಪಲಾಯನಕ್ಕೆ ಯೋಜನೆ ರೂಪಿಸಲಾಯಿತು. ಸ್ಟುಪ್ನಿಕೋವ್, ಕಾರ್ಪೆಂಕೊ ಮತ್ತು ಉಕ್ರೇನಿಯನ್ ಪಡೆಗಳು ಆಯಪ್‌ಗಳ ಮೂಲಕ ಅಪಾಯಕಾರಿ ಯುದ್ಧಭೂಮಿಯ ನಡುವೆ ಸುರಕ್ಷಿತ ಹಾದಿಯನ್ನು ಕಂಡುಕೊಂಡರು.

ಪ್ರಿಗೋಷಿನ್‌ ಅಂತ್ಯಕ್ರಿಯೆಯಲ್ಲಿ ಪುಟಿನ್‌ ಭಾಗಿಯಾಗಲ್ಲ: ರಷ್ಯಾಪ್ರಿಗೋಷಿನ್‌ ಸಾವು ದೃಢಪಡಿಸಿದ ತನಿಖಾ ಸಂಸ್ಥೆ

ಗಡಿ ದಾಟಿದ ಪಲಾಯನ

2024ರ ಜುಲೈನಲ್ಲಿ, ಸ್ಟುಪ್ನಿಕೋವ್ ರಾತ್ರೋರಾತ್ರಿ ತಮ್ಮ ರಷ್ಯನ್ ಪಡೆಯಿಂದ ತಪ್ಪಿಸಿಕೊಂಡು ಉಕ್ರೇನ್ ನೆಲೆಗಳತ್ತ ಸಾಗಿದರು. ಭೂಗತ ಬಂಕರ್‌ನಲ್ಲಿದ್ದ ಉಕ್ರೇನಿಯನ್ ಅಧಿಕಾರಿಗಳು ಲೈವ್ ವಿಡಿಯೊ ಮೂಲಕ ಅವರ ಚಲನವಲನಗಳನ್ನು ಗಮನಿಸುತ್ತಿದ್ದರು. ಸುಮಾರು 40 ನಿಮಿಷಗಳ ನಂತರ, ಅವರು ಉಕ್ರೇನ್‌ನ 72ನೇ ಬ್ರಿಗೇಡ್ ಸೈನಿಕರಿದ್ದ ಪ್ರದೇಶವನ್ನು ತಲುಪಿದರು.

ರಷ್ಯನ್ ಸೇನಾ ಸಮವಸ್ತ್ರದಲ್ಲಿದ್ದ ಅವರನ್ನು ಕಂಡ ಉಕ್ರೇನ್ ಸೈನಿಕರು ಬಂದೂಕು ಗುರಿಹಿಡಿದು, 'ಪಾಸ್‌ವರ್ಡ್ ಏನು?' ಎಂದು ಗದರಿದರು. ಸ್ಟುಪ್ನಿಕೋವ್ 'ಪೀನಟ್ ಶಾಪ್' (peanut shop) ಎಂಬ ಉತ್ತರ ನೀಡಿದರು. ತಕ್ಷಣವೇ ಅವರನ್ನು ಉಕ್ರೇನ್ ಪಡೆಗಳು ತಮ್ಮ ವಶಕ್ಕೆ ತೆಗೆದುಕೊಂಡವು.

ನಂತರ ಅವರು ಪುಟಿನ್ ಸರ್ಕಾರದ ವಿರುದ್ಧ ಹೋರಾಡುತ್ತಿರುವ ರಷ್ಯನ್ ಸ್ವಯಂಸೇವಕ ಪಡೆಗೆ (RVC) ಸೇರ್ಪಡೆಗೊಂಡರು. ಪ್ರಸ್ತುತ ಅವರು ಸಂವಹನ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

2025ರ ಫೆಬ್ರುವರಿಯಲ್ಲಿ ಅವರ ತಾಯಿ ಮತ್ತು ತಂಗಿ ಮಾಲ್ಡೋವಾಗೆ ಪ್ರಯಾಣಿಸಲು ಸಿದ್ಧರಾದರು. ಅಲ್ಲಿಂದ ಕಾಲ್ನಡಿಗೆಯಲ್ಲೇ ಉಕ್ರೇನ್ ತಲುಪಿ ಕಾರ್ಪೆಂಕೊ ಅವರನ್ನು ಭೇಟಿಯಾಗುವುದು ಅವರ ಯೋಜನೆಯಾಗಿತ್ತು.

ಈ ನಡುವೆ, ಸ್ಟುಪ್ನಿಕೋವ್ ಬದುಕಿದ್ದರೆ ಅವರನ್ನು ಶರಣಾಗುವಂತೆ ಒಪ್ಪಿಸಲು ಕರೆ ಮಾಡುತ್ತಿದ್ದ ರಷ್ಯನ್ ಮಿಲಿಟರಿ ಅಧಿಕಾರಿಗಳನ್ನು ಅವರ ತಾಯಿ ಮರುಳು ಮಾಡುತ್ತಿದ್ದರು. ಮಗ ಕಾಣೆಯಾಗಿದ್ದಕ್ಕೆ ತೀವ್ರ ದುಃಖದಲ್ಲಿರುವಂತೆ ನಟಿಸುತ್ತಾ, ಮಗನನ್ನು ಹುಡುಕುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳುತ್ತಿದ್ದರು.

ಒಂದು ವರ್ಷದ ನಂತರ, ಸ್ಟುಪ್ನಿಕೋವ್ ಅವರು ಕಾರ್ಪೆಂಕೊ ಅವರಿಗೆ ನೀಡಿದ ಎರಡು ಗಂಟೆಗಳ ವಿಡಿಯೋ ಸಂದರ್ಶನದಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಶನವು ಅವರ ಪಲಾಯನ ಮತ್ತು ಅವರು ನೀಡಿದ ಗೂಢಚಾರಿ ಮಾಹಿತಿಯ ಕುರಿತು ಮತ್ತೆ ಸುದ್ದಿಯಾಗುವಂತೆ ಮಾಡಿದೆ.

ಆದಾಗ್ಯೂ, ತಮ್ಮ ನಡೆಯು ಒಂದು ದಶಕದ ಹಿಂದೆ ಮಿಲಿಟರಿ ಅಕಾಡೆಮಿಯಲ್ಲಿ ತೆಗೆದುಕೊಂಡ ಪ್ರಮಾಣವಚನಕ್ಕೆ ಬದ್ಧವಾಗಿದೆ ಎಂದು ಸ್ಟುಪ್ನಿಕೋವ್ ಪ್ರತಿಪಾದಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 'ನಾನು ಪ್ರಮಾಣಕ್ಕೆ ದ್ರೋಹ ಬಗೆದೆನೇ? ನಾನು ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದಾಗಿ ಪ್ರಮಾಣ ಮಾಡಿದ್ದೆ. ಆದರೆ ಪುಟಿನ್ ಆ ಮೂರನ್ನೂ ನಾಶಪಡಿಸಿದ್ದಾರೆ' ಎಂದಿದ್ದಾರೆ.


A Wall Street Journal investigation reveals the story of Lev Stopnikov, a 26-year-old Russian communications officer who reportedly helped Ukraine kill more than 300 Russian soldiers, including senior officers. Serving with Russia's 36th Brigade near Vuhledar, he opposed the Show more










 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries