ನವದೆಹಲಿ: 2025-26ನೇ ಸಾಲಿನಲ್ಲಿ ಭಾರತದಲ್ಲಿ ಮಕ್ಕಳಲ್ಲಿ ಕುಷ್ಠರೋಗದ 3,832 ಹೊಸ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ 37 ಮಂದಿ ರೋಗಪತ್ತೆಯ ಸಮಯದಲ್ಲೇ ಗ್ರೇಡ್-2 ಅಂಗವೈಕಲ್ಯದ ಹಂತವನ್ನು ತಲುಪಿದ್ದರು. ರೋಗ ಪತ್ತೆ ವಿಳಂಬವಾಗಿರುವುದನ್ನು ಇದು ಸೂಚಿಸುತ್ತದೆ ಎಂದು ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಕಾರ್ಯಕ್ರಮದ (ಎನ್‌ಎಲ್‌ಇಪಿ) ವಾರ್ಷಿಕ ವರದಿ ತಿಳಿಸಿದೆ.
ಈ ಅವಧಿಯಲ್ಲಿ ಕುಷ್ಠ ರೋಗದ ಹೊಸ ಪ್ರಕರಣಗಳನ್ನು 2 ಸಾವಿರದೊಳಗೆ ಸೀಮಿತಗೊಳಿಸುವ ಎನ್‌ಎಲ್‌ಪಿಯ ಯೋಜಿತ ಗುರಿಗಿಂತ ಮಕ್ಕಳಲ್ಲಿ ವರದಿಯಾದ ಹೊಸ ಪ್ರಕರಣಗಳ ಸಂಖ್ಯೆಯು ಶೇ.91.6ರಷ್ಟು ಅಧಿಕವಾಗಿದೆ ಎಂದು ಅದು ಹೇಳಿದೆ.
ಎನ್‌ಎಲ್‌ಪಿಇಯ ಪ್ರಮುಖ ಉದ್ದೇಶವು ಮಕ್ಕಳಲ್ಲಿ ಕುಷ್ಛರೋಗದ ಪತ್ತೆ ಪ್ರಕರಣಗಳಲ್ಲಿ ಶೂನ್ಯ ಅಂಗವೈಕಲ್ಯ (ಗ್ರೇಡ್ 2)ವನ್ನು ಸಾಧಿಸುವುದಾಗಿದೆ. ಆದಾಗ್ಯೂ 2019-20ರಿಂದ 2023-24ರವರೆಗೆ ಭಾರತದಲ್ಲಿ ನಿರಂತರವಾಗಿ ಕುಷ್ಠರೋಗ ಗ್ರೇಡ್-2 ಅಂಗವೈಕಲ್ಯ ಹೊಂದಿರುವ ಮಕ್ಕಳ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. 2027ರ ವೇಳೆಗೆ ಕುಷ್ಠರೋಗ ಪ್ರಸರಣವನ್ನು ತಡೆಯಲು ಭಾರತ ಶ್ರಮಿಸುತ್ತಿದ್ದರೂ, ಮಕ್ಕಳಲ್ಲಿ ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿರುವುದು ಹಾಗೂ ಅಂಗವೈಕಲ್ಯ ಕಾಣಿಸಿಕೊಂಡ ನಂತರವಷ್ಟೇ ರೋಗ ಪತ್ತೆಯಾಗುತ್ತಿರುವ ಬಗ್ಗೆ ಎನ್‌ಎಲ್‌ಇಪಿ ಆತಂಕ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, 2025-26ರಲ್ಲಿ ಭಾರತವು 91,783 ಪ್ರಕರಣಗಳೊಂದಿಗೆ, ಜಗತ್ತಿನಲ್ಲೇ ಅತಿ ಹೆಚ್ಚು ಕುಷ್ಠರೋಗದ ಪ್ರಕರಣಗಳನ್ನು ವರದಿ ಮಾಡಿದ ದೇಶವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ 2025ನೇ ಸಾಲಿನ ವರದಿಯ ಪ್ರಕಾರ, 3,832 ಪ್ರಕರಣಗಳೊಂದಿಗೆ ಜಗತ್ತಿನಲ್ಲೇ ಮಕ್ಕಳಲ್ಲಿ ಕುಷ್ಠರೋಗದ ಹೊಸ ಪ್ರಕರಣಗಳು ಕೂಡಾ ಅತ್ಯಧಿಕ ಸಂಖ್ಯೆಯಲ್ಲಿ ಭಾರತದಲ್ಲೇ ವರದಿಯಾಗಿವೆ.
ಚತ್ತೀಸ್‌ಗಡ (23 ಜಿಲ್ಲೆಗಳು), ಜಾರ್ಖಂಡ್ (21), ಮಹಾರಾಷ್ಟ್ರ (18), ಒಡಿಶಾ (18) ಹಾಗೂ ಮಧ್ಯಪ್ರದೇಶದ (10) ಜಿಲ್ಲೆಗಳನ್ನು ಅತಿ ಹೆಚ್ಚು ಕುಷ್ಠ ರೋಗ ಹರಡುವಿಕೆಯನ್ನು ಹೊಂದಿರುವ ಪ್ರದೇಶಗಳೆಂದು ಎನ್‌ಎಲ್‌ಇಪಿ ಗುರುತಿಸಿದೆ. ಭಾರತದಲ್ಲಿ ನಿರಂತರವಾಗಿ ವರದಿಯಾಗುತ್ತಿರುವ ಕುಷ್ಠರೋಗದ ಹೊಸ ಪ್ರಕರಣಗಳಿಗೆ ಕಳಪೆ ರೋಗಪತ್ತೆ ವಿಧಾನವೇ ಕಾರಣವೆಂದು ದಿಲ್ಲಿಯ ಎಬಿವಿಐಎಂಎಸ್-ಡಾ.ಆರ್‌ಎಂಎಲ್ ಆಸ್ಪತ್ರೆಯ ವೈದ್ಯ ಡಾ. ಕಬೀರ್ ಸರ್ದಾನಾ ಅವರು ಅಭಿಪ್ರಾಯಿಸಿದ್ದಾರೆ.
ಕಳೆದ ದಶಕಕ್ಕೆ ಹೋಲಿಸಿದರೆ ಈಗ ಮಕ್ಕಳಲ್ಲಿ ಕುಷ್ಠರೋಗದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. 2014-17ರ ಅವಧಿಯಲ್ಲಿ ವರ್ಷಕ್ಕೆ 11 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದವು. ಕೋವಿಡ್-19 ಸಮಯದಲ್ಲಿ ಈ ಸಂಖ್ಯೆ ತೀವ್ರವಾಗಿ ಕುಸಿದಿತ್ತಾದರೂ, 2025-26ರಲ್ಲಿ 3,832 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ವರದಿ ಹೇಳಿದೆ.

