HEALTH TIPS

ಕಾಸರಗೋಡು ಗಿಡ್ಡ ತಳಿಗೆ ಕೇರಳದ 3ನೇ ಅಧಿಕೃತ ದೇಸಿ ಜಾನುವಾರು ಮಾನ್ಯತೆಯ ನಿರೀಕ್ಷೆ

ಬದಿಯಡ್ಕ: ವೆಚ್ಚೂರ್ ಮತ್ತು ಪೆರಿಯಾರ್ ಹಸುಗಳ ನಂತರ, ಕೇರಳದ ಮತ್ತೊಂದು ಗಿಡ್ಡ ತಳಿಯಾದ 'ಕಾಸರಗೋಡು ಗಿಡ್ಡ'(ಕುಳ್ಳನ್) ರಾಜ್ಯದ ಮೂರನೇ ಅಧಿಕೃತ ದೇಸಿ ತಳಿಯಾಗಿ ಮಾನ್ಯತೆ ಪಡೆಯುವ ಹಾದಿಯಲ್ಲಿದೆ. ನೋಂದಣಿ ಪ್ರಕ್ರಿಯೆಗಾಗಿ ಕಾಸರಗೋಡು ಪಶುಸಂಗೋಪನಾ ಇಲಾಖೆಯು(ಎ.ಎಚ್.ಡಿ.) ಅಗತ್ಯ ದಾಖಲೆಗಳನ್ನು ಐಸಿಎಆರ್-ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲಗಳ ಬ್ಯೂರೋಗೆ (ಐಸಿಎಆರ್-ಎನ್.ಬಿ.ಎ.ಜಿ.ಆರ್) ಸಲ್ಲಿಸಿದೆ.


ಕಾಸರಗೋಡಿನ ಪ್ರತಿಕೂಲ ಹವಾಮಾನ, ಮುಂಗಾರಿನ ಅತಿಯಾದ ಮಳೆ ಹಾಗೂ ಬೇಸಿಗೆಯ ಬರಗಾಲದ ಪರಿಸ್ಥಿತಿಯನ್ನು ಎದುರಿಸಿ ಬೆಳೆದಿರುವ ಈ ತಳಿಯು, ಲಭ್ಯವಿರುವ ಸೀಮಿತ ಸಂಪನ್ಮೂಲಗಳಲ್ಲೇ ಬದುಕಲು ಹೊಂದಿಕೊಂಡಿದೆ. ಇವು ಬಯಲಿನಲ್ಲಿ ಮೇಯುವಾಗ ಜಂಬಿಟ್ಟಿಗೆ ಬೆಟ್ಟಗಳಲ್ಲಿ (ಲೇಟರೈಯ್ಟ್ ಹಿಲ್ಸ್) ಬೆಳೆಯುವ ಹುಲ್ಲು ಹಾಗೂ ಮನೆಯ ಅಡುಗೆ ತ್ಯಾಜ್ಯವನ್ನು ತಿಂದು ಬದುಕಬಲ್ಲವು. ಅಲ್ಲದೆ, ಸಾಮಾನ್ಯವಾಗಿ ಜಾನುವಾರುಗಳಿಗೆ ತಗಲುವ ಬಹುತೇಕ ರೋಗಗಳನ್ನು ತಡೆದುಕೊಳ್ಳುವ ರೋಗನಿರೋಧಕ ಶಕ್ತಿಯನ್ನು ಹೊಂದಿವೆ.

ಹೆಚ್ಚು ಹಾಲು ನೀಡುವ ಜೆರ್ಸಿ ಮತ್ತು ಹೋಲ್‍ಸ್ಟೀನ್‍ನಂತಹ ಮಿಶ್ರತಳಿಗಳ ಕಡೆಗೆ ರೈತರು ಆಕರ್ಷಿತರಾದ ಪರಿಣಾಮ, ಕಾಸರಗೋಡು ಗಿಡ್ಡ(ಕುಳ್ಳನ್) ತಳಿಯ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ. "ಇವು ಕಡಿಮೆ ಹಾಲು ನೀಡಿದರೂ, ಹಾಲಿನ ಗುಣಮಟ್ಟ ಹಾಗೂ ಪೌಷ್ಟಿಕತೆ ಹೆಚ್ಚು. ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆಯಾಗಿರುವುದರಿಂದ ಮತ್ತು ಸಾವಯವ ಗೊಬ್ಬರಕ್ಕಾಗಿ ಇಂದಿಗೂ ಕಾಸರಗೋಡಿನ ಹಲವು ಮನೆಗಳಲ್ಲಿ ಇವುಗಳನ್ನು ಸಾಕಲಾಗುತ್ತಿದೆ" ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂದೆ ಹುಲ್ಲುಗಾವಲುಗಳಲ್ಲಿ ಮುಕ್ತವಾಗಿ ಮೇಯುವ ಸಂದರ್ಭದಲ್ಲಿ ಅನ್ಯ ತಳಿಗಳೊಂದಿಗೆ ಸಂಕರಗೊಂಡು ಈ ತಳಿಯ ಶುದ್ಧತೆ ನಶಿಸುವ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ, ತಳಿಯ ಸಂರಕ್ಷಣೆಗಾಗಿ ರಾಜ್ಯ ಸರ್ಕಾರವು ಕಾಸರಗೋಡಿನ ಬದಿಯಡ್ಕ ನೀರ್ಚಾಲು ಬಳಿಯ ಬೇಳದಲ್ಲಿ ಜಾನುವಾರು ಫಾರಂ ಅನ್ನು ಕಾಸರಗೋಡು ಗಿಡ್ಡ ಸಂಶೋಧನಾ ಕೇಂದ್ರವನ್ನಾಗಿ ಪರಿವರ್ತಿಸಿದೆ. ಇಲ್ಲಿನ ಮೂರು ಕೊಟ್ಟಿಗೆಗಳಲ್ಲಿ ಸುಮಾರು 150 ಜಾನುವಾರುಗಳನ್ನು ಸಂರಕ್ಷಿಸಲಾಗುತ್ತಿದ್ದು, ಫಾರಂನಲ್ಲಿ ಮುಕ್ತವಾಗಿ ಮೇಯಲು ಬಿಡಲಾಗುತ್ತದೆ. ಆಸಕ್ತ ರೈತರಿಗೆ ಮುಂಗಡ ಕಾಯ್ದಿರಿಸುವಿಕೆಯ ಆಧಾರದ ಮೇಲೆ ಕರುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಫಾರಂ ಮುಖ್ಯಸ್ಥೆ ಡಾ. ಸೀನಾ ತಿಳಿಸಿದ್ದಾರೆ.


ಈ ತಳಿಯ ಕುರಿತು ಅಧ್ಯಯನ ನಡೆಸಿರುವ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಇ. ಚಂದ್ರಬಾಬು ಮಾತನಾಡಿ, "ಕರ್ನಾಟಕದ 'ಮಲೆನಾಡು ಗಿಡ್ಡ' ತಳಿಗೂ 'ಕಾಸರಗೋಡು ಕುಳ್ಳನ್' ತಳಿಗೂ ಇರುವ ವ್ಯತ್ಯಾಸಗಳ ವಿವರವನ್ನು ಎನ್.ಬಿ.ಎ.ಜಿ.ಆರ್ ಕೋರಿದೆ. ಮಲೆನಾಡು ಗಿಡ್ಡ ಪಶ್ಚಿಮ ಘಟ್ಟಗಳ ಎತ್ತರದ ಶ್ರೇಣಿಗಳಲ್ಲಿ ಕಂಡುಬಂದರೆ, ಕಾಸರಗೋಡು ಕುಳ್ಳನ್ ತಗ್ಗು ಪ್ರದೇಶಗಳಲ್ಲಿ ಜೀವಿಸುತ್ತವೆ. ಈ ಕುರಿತ ವಿವರಗಳನ್ನು ಸದ್ಯದಲ್ಲೇ ಸಲ್ಲಿಸಲಾಗುವುದು. ಶೀಘ್ರದಲ್ಲೇ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಲಿದ್ದು, ಅಧಿಕೃತ ನೋಂದಣಿ ದೊರೆಯುವುದು ಖಚಿತ," ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಳಿಯ ಪ್ರಮುಖ ವೈಶಿಷ್ಟ್ಯಗಳು:

-ಎತ್ತರ ಹಾಗೂ ದೃಢತೆ: ಹಸುಗಳು ಒಂದು ಮೀಟರ್‍ಗಿಂತ ಕಡಿಮೆ ಎತ್ತರವಿದ್ದು, ಗಂಡು ಜಾನುವಾರುಗಳು ಗರಿಷ್ಠ 107 ಸೆಂ.ಮೀ ವರೆಗೆ ಬೆಳೆಯುತ್ತವೆ; ಅತ್ಯಂತ ಗಟ್ಟಿಮುಟ್ಟಾದ ದೇಹದಾಢ್ರ್ಯ ಹೊಂದಿವೆ.

-ಸ್ವಾವಲಂಬನೆ: ಹೆಚ್ಚಾಗಿ ಮುಕ್ತವಾಗಿ ಮೇಯಲು ಬಿಡಲಾಗುತ್ತಿದ್ದು, ಸಂಜೆಯಾಗುತ್ತಿದ್ದಂತೆ ತಾವಾಗಿಯೇ ಕೊಟ್ಟಿಗೆಗೆ ಮರಳುತ್ತವೆ.

-ಆಹಾರ ಹಾಗೂ ಹಾಲು: ದಿನಕ್ಕೆ ಸರಾಸರಿ 1 ಲೀಟರ್‍ಗಿಂತ ಕಡಿಮೆ ಹಾಲು ನೀಡಿದರೂ, ವಿಶೇಷ ಪೌಷ್ಟಿಕ ಆಹಾರದ ಅಗತ್ಯವಿಲ್ಲದಿರುವುದರಿಂದ ಹಾಲಿನ ಉತ್ಪಾದನಾ ಅನುಪಾತ ಲಾಭದಾಯಕವಾಗಿದೆ.

-ರೋಗನಿರೋಧಕ ಶಕ್ತಿ: ಕನಿಷ್ಠ ನಿರ್ವಹಣೆಯಲ್ಲಿ, ಮನೆಯ ತ್ಯಾಜ್ಯ ಮತ್ತು ಸ್ಥಳೀಯ ಹುಲ್ಲನ್ನು ತಿಂದು ರೋಗಗಳಿಲ್ಲದೆ ಬದುಕುವ ಸಾಮಥ್ರ್ಯ ಹೊಂದಿದೆ.

ಎನ್.ಬಿ.ಎಜಿ.ಆರ್ ನೋಂದಣಿಯ ಮಹತ್ವ:

-ನಿರ್ದಿಷ್ಟ ಪ್ರದೇಶದ ದೇಸಿ ತಳಿ ಎಂಬ ಕಾನೂನಾತ್ಮಕ ಮಾನ್ಯತೆ ಮತ್ತು ರಕ್ಷಣೆ ದೊರೆಯುತ್ತದೆ.

-ಜೈವಿಕ ವೈವಿಧ್ಯತೆಯ ವಿಶ್ವಸಂಸ್ಥೆಯ ನಿಯಮಾವಳಿಗಳ ಅನ್ವಯ ತಳಿಯು ರಾಷ್ಟ್ರೀಯ ಜಾನುವಾರು ಪಟ್ಟಿಗೆ ಸೇರ್ಪಡೆಗೊಳ್ಳುತ್ತದೆ.

-ತಳಿಯ ಜೆನೆಟಿಕ್ ಕೋಡ್ (ಆನುವಂಶಿಕ ಹಕ್ಕು) ಮೇಲೆ ರಾಜ್ಯಕ್ಕೆ ಸಾರ್ವಭೌಮ ಅಧಿಕಾರ ದೊರೆಯುತ್ತದೆ.

-ಸ್ಥಳೀಯ ಮಾನದಂಡ ನಿಗದಿಯಾಗಿ, ಅನಿಯಂತ್ರಿತ ಸಂಕರ ತಪ್ಪಿಸಲು ಮತ್ತು ತಳಿಯ ಸಂಖ್ಯೆ ಇಳಿಮುಖವಾದರೆ ಪುನಶ್ಚೇತನ ಯೋಜನೆಗಳನ್ನು ಕೈಗೊಳ್ಳಲು ನೆರವಾಗುತ್ತದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries