ಚೆನ್ನೈ: ತಮಿಳುನಾಡಿನ ಗ್ರಾನೈಟ್ ಉದ್ಯಮಿ, ಜೆಮ್ ಗ್ರಾನೈಟ್ಸ್ ಮಾಲೀಕ ವೀರಮಣಿ ವಿರುದ್ಧದ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ಆಗುತ್ತಿದೆ.
ಈ ಕುರಿತಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಜೆಮ್ ಗ್ರಾನೈಟ್ಸ್ ಮ್ಯಾನೇಜರ್ ಶಕ್ತಿವೇಲ್ ಅವರನ್ನು ಭಾನುವಾರ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಈ ನಡುವೆ ಮತ್ತೊಬ್ಬ ಸಂತ್ರಸ್ತ ಬಾಲಕಿಯ ಹೇಳಿಕೆ ಆಧರಿಸಿ, ವೀರಮಣಿ ವಿರುದ್ಧ 7ನೇ ಪೋಕ್ಸೊ ಪ್ರಕರಣ ದಾಖಲಾಗಿದೆ.
7ನೇ ಪ್ರಕರಣದ ಘಟನೆಯು ವೀರಮಣಿಯ ಸಹವರ್ತಿ ಶಾಂತಿ ಎಂಬ ಮಹಿಳೆಯ ಮನೆಯಲ್ಲಿ ನಡೆದಿದೆ. ಇದರೊಂದಿಗೆ, ವೀರಮಣಿ ವಿರುದ್ಧದ 11 ಬಾಲಕಿಯರ ದೂರುಗಳ ಪೈಕಿ 7ರಲ್ಲಿ ಎಫ್‌ಐಆರ್ ಆಗಿದೆ.
ಗ್ರೇಟರ್ ಚೆನ್ನೈ ಪೊಲೀಸರ 'ಅನೈತಿಕ ಚಟುವಟಿಕೆ ತಡೆ ದಳ'ಕ್ಕೆ ಪೆನ್ ಡ್ರೈವ್ ಮೂಲಕ ವಿಡಿಯೊಂದನ್ನು ಕಳುಹಿಸಲಾಗಿತ್ತು. ಬಳಿಕ, ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ, ಆಗಸ್ಟ್ 29 ರಂದು ವೀರಮಣಿ ಹಾಗೂ ಆತನ ಸಹಚರರಾದ ಶಾಂತಿ ಮತ್ತು ಮಹೇಂದ್ರ ಸಿಂಹನ್ ಅವರನ್ನು ಬಂಧಿಸಲಾಗಿತ್ತು. ನಂತರ, ಗಣೇಶನ್ ಎಂಬ ಮತ್ತೊಬ್ಬ ಸಹಚರನನ್ನೂ ಬಂಧಿಸಲಾಗಿತ್ತು.
ಅಲ್ಲದೇ, ಬಾಲಕಿಯರನ್ನು ಕರೆತಂದು ವೀರಮಣಿಗೆ ಅತ್ಯಾಚಾರ ಎಸಗಲು ನೆರವಾಗಿದ್ದ ಚಾಲಕ ಲೇಸರ್, ಪಾರ್ಥಿವನ್, ಬಾಬು ಎಂಬುವವರನ್ನೂ ಬಂಧಿಸಲಾಗಿದೆ.



