ಗುವಾಹಟಿ: ಭಾರತ-ಬಾಂಗ್ಲಾದೇಶ ಗಡಿಯಾಚೆಗೆ 'ಅಕ್ರಮವಾಗಿ ಕಳುಹಿಸಲ್ಪಟ್ಟ' ನಾಗಾಂವ್ ಜಿಲ್ಲೆಯ ಇಬ್ಬರು ಮಹಿಳೆಯರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲು ಮಧ್ಯಪ್ರವೇಶಿಸುವಂತೆ ಕೋರಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜೋರ್ಹತ್ ಸಂಸದ ಗೌರವ್ ಗೊಗೊಯ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಅಕ್ಟೋಬರ್ 6ರಂದು ನಡೆಯಲಿರುವ ನಾಗಾಂವ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮುನ್ನ, ಶುಕ್ರವಾರ ಬರೆದಿರುವ ಪತ್ರ ಶನಿವಾರ ಮಾಧ್ಯಮಗಳಿಗೆ ಲಭ್ಯವಾಗಿದೆ.
ಬಗರಿಗುರಿಯ ಜಹನಾರಾ ಬೇಗಂ ಮತ್ತು ಧೀಂಗ್ ಗಾಂವ್ ನ ಮಮ್ತಾಝ್ ಬೇಗಂ ಅವರನ್ನು ಜೂನ್ 13-14ರ ಮಧ್ಯರಾತ್ರಿ ಭಾರತ-ಬಾಂಗ್ಲಾದೇಶ ಗಡಿಯಾಚೆಗೆ ಕಳುಹಿಸಲಾಗಿತ್ತು. ಅಂದಿನಿಂದ ಇಬ್ಬರ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ಉಪನಾಯಕರೂ ಆಗಿರುವ ಗೊಗೊಯ್ ತಿಳಿಸಿದ್ದಾರೆ.
ಇಬ್ಬರು ಮಹಿಳೆಯರನ್ನು ಗಡಿಯಾಚೆಗೆ ಕಳುಹಿಸಿರುವ ಕ್ರಮವು ಕಾನೂನುಬದ್ಧ ಪ್ರಕ್ರಿಯೆಯನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದಾರೆ. ಮಹಿಳೆಯರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ.
ಮಹಿಳೆಯರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲು ಬಾಂಗ್ಲಾದೇಶದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜೈಶಂಕರ್ ಅವರನ್ನು ಅವರು ಕೋರಿದ್ದಾರೆ.
ಈ ಪ್ರಕರಣದಲ್ಲಿ ಗುವಾಹಟಿ ಹೈಕೋರ್ಟ್ ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಮಾಡಿದೆ. ಹೀಗಾಗಿ, ಪ್ರಕರಣದಲ್ಲಿ ಜೈಶಂಕರ್ ಅವರ ವೈಯಕ್ತಿಕ ಹಾಗೂ ತುರ್ತು ಮಧ್ಯಪ್ರವೇಶ ಅಗತ್ಯವಿದೆ ಎಂದು ಗೊಗೊಯ್ ಹೇಳಿದ್ದಾರೆ.
ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಅರ್ಜಿ
ನಾಗಾಂವ್ ನ ವಿದೇಶಿಯರ ನ್ಯಾಯಮಂಡಳಿಯು 2019ರಲ್ಲಿ ಜಹನಾರಾ ಬೇಗಂ ಮತ್ತು ಮಮ್ತಾಝ್ ಬೇಗಂ ಅವರನ್ನು ವಿದೇಶಿಯರು ಎಂದು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಗುವಾಹಟಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಮುಖ ಸಾಕ್ಷ್ಯಗಳನ್ನು ಸರಿಯಾಗಿ ಪರಿಶೀಲಿಸದ ಕಾರಣ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ಎಪ್ರಿಲ್ 2026ರಲ್ಲಿ ರದ್ದುಗೊಳಿಸಿತು. ಎರಡೂ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ನ್ಯಾಯಮಂಡಳಿಗೆ ಹಿಂತಿರುಗಿಸಿತು.
ಹೈಕೋರ್ಟ್ ನ ನಿರ್ದೇಶನದಂತೆ ಜಹನಾರಾ ಬೇಗಂ ಮೇ 29ರಂದು ಮತ್ತು ಮಮ್ತಾಝ್ ಬೇಗಂ ಮೇ 30ರಂದು ನ್ಯಾಯಮಂಡಳಿಯ ಮುಂದೆ ಹಾಜರಾದರು. ಆದರೆ, ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು. ಇದರಿಂದ ನ್ಯಾಯಮಂಡಳಿಯ ಹೊಸ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವ ಅವಕಾಶದಿಂದ ಅವರನ್ನು ವಂಚಿಸಲಾಯಿತು ಎಂದು ಗೊಗೊಯ್ ಹೇಳಿದ್ದಾರೆ.
ಮಮ್ತಾಝ್ ಬೇಗಂ ಅವರು ಹೈಕೋರ್ಟ್ ಅನ್ನು ಸಂಪರ್ಕಿಸುವ ತಮ್ಮ ಕಾನೂನುಬದ್ಧ ಹಕ್ಕನ್ನು ಚಲಾಯಿಸದಂತೆ ರಾಜ್ಯವು ಪರಿಣಾಮಕಾರಿಯಾಗಿ ತಡೆದಿದೆ ಎಂದು ಹೈಕೋರ್ಟ್ ಸೆಪ್ಟೆಂಬರ್ 3ರಂದು ಗಮನಿಸಿತ್ತು. ಜಹನಾರಾ ಬೇಗಂ ಅವರ ಪ್ರಕರಣದಲ್ಲೂ ಇದೇ ರೀತಿಯ ಅಂಶಗಳು ದಾಖಲಾಗಿವೆ.
24 ಗಂಟೆಯಲ್ಲಿ ದೇಶ ತೊರೆಯುವಂತೆ ಸೂಚನೆ
ಜೂನ್ 2ರಂದು ನಾಗಾಂವ್ ಜಿಲ್ಲಾ ಆಯುಕ್ತರು ಹೊರಡಿಸಿದ್ದ ಗಡೀಪಾರು ಆದೇಶಗಳನ್ನೂ ಹೈಕೋರ್ಟ್ ಪರಿಶೀಲಿಸಿತ್ತು. ರಾಜ್ಯದ ವಶದಲ್ಲಿದ್ದಾಗಲೇ 24 ಗಂಟೆಗಳ ಒಳಗೆ ಭಾರತ ತೊರೆಯುವಂತೆ ಇಬ್ಬರು ಮಹಿಳೆಯರಿಗೆ ಆ ಆದೇಶಗಳಲ್ಲಿ ಸೂಚಿಸಲಾಗಿತ್ತು.
ನಂತರ ಇಬ್ಬರನ್ನೂ ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಲಾಯಿತು. ಗಡಿ ಕಂಬ ಸಂಖ್ಯೆ 1339/MP ಬಳಿಯ ಗೇಟ್ ಸಂಖ್ಯೆ 2ರ ಮೂಲಕ ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಯಿತು ಎಂದು ಗೊಗೊಯ್ ತಿಳಿಸಿದ್ದಾರೆ.
ಇಬ್ಬರು ಮಹಿಳೆಯರನ್ನು ಪತ್ತೆಹಚ್ಚಲು ಬಾಂಗ್ಲಾದೇಶ ಸರ್ಕಾರದೊಂದಿಗೆ ತಕ್ಷಣ ವಿಷಯ ಪ್ರಸ್ತಾಪಿಸುವಂತೆ ಗೊಗೊಯ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಮಹಿಳೆಯರ ಸುರಕ್ಷಿತ ವಾಪಸಾತಿಗೆ ಅಗತ್ಯ ಕ್ರಮ ಕೈಗೊಳ್ಳಲು ಢಾಕಾದಲ್ಲಿರುವ ಭಾರತದ ಹೈಕಮಿಷನ್ ಹಾಗೂ ಸಿಲ್ಹೆಟ್ ನಲ್ಲಿರುವ ಭಾರತದ ಸಹಾಯಕ ಹೈಕಮಿಷನ್‌ಗೆ ನಿರ್ದೇಶನ ನೀಡುವಂತೆಯೂ ಅವರು ಕೋರಿದ್ದಾರೆ.
ನಾಗಾಂವ್ ನಲ್ಲಿರುವ ಇಬ್ಬರು ಮಹಿಳೆಯರ ಕುಟುಂಬಗಳು ತಿಂಗಳುಗಳಿಂದ ಅವರನ್ನು ಹತಾಶೆಯಿಂದ ಹುಡುಕುತ್ತಿವೆ ಎಂದು ಗೊಗೊಯ್ ಹೇಳಿದ್ದಾರೆ.
'ರಾಜ್ಯದ ವಶಕ್ಕೆ ತೆಗೆದುಕೊಂಡು ಅಂತರರಾಷ್ಟ್ರೀಯ ಗಡಿಯಾಚೆಗೆ ಕಳುಹಿಸಿದ ಬಳಿಕ ವ್ಯಕ್ತಿಗಳು ಸುಮ್ಮನೆ ಕಣ್ಮರೆಯಾಗಲು ಸಾಧ್ಯವಿಲ್ಲ' ಎಂದು ಅವರು ಪ್ರತಿಪಾದಿಸಿದ್ದಾರೆ.

