ನವದೆಹಲಿ: ಕೈಯಲ್ಲಿ ಮೈಕ್ ಹಿಡಿದು, ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವವರೆಲ್ಲ ಪತ್ರಕರ್ತರಾಗಲು ಸಾಧ್ಯವೇ ಎಂಬ ಪ್ರಶ್ನೆ ಇದೀಗ ದೇಶದ ಗಮನ ಸೆಳೆದಿದೆ. ಸ್ವತಂತ್ರ ಪತ್ರಕರ್ತರು, ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ರೀಲ್ಸ್ ಮಾಡುವವರನ್ನು ಗುರುತಿಸುವಲ್ಲಿನ ಸವಾಲುಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಚರ್ಚೆ ನಡೆದಿದೆ.
ಅಕ್ಟೋಬರ್ 15ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಸ್ವತಂತ್ರ ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್‌ಗಳ ನಡುವಿನ ವ್ಯತ್ಯಾಸ ಗುರುತಿಸುವುದು ಕಷ್ಟಕರವಾಗಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಮೊಬೈಲ್ ಅಥವಾ ಮೈಕ್ರೊಫೋನ್ ಹಿಡಿದು ವಿಡಿಯೊ ಚಿತ್ರೀಕರಿಸಿ ಅಪ್‌ಲೋಡ್ ಮಾಡುವವರನ್ನು ವೃತ್ತಿಪರ ಪತ್ರಕರ್ತರಿಂದ ಪ್ರತ್ಯೇಕಿಸುವುದು ಸವಾಲಾಗಿದೆ ಎಂಬ ವಿಚಾರವೂ ಪ್ರಸ್ತಾಪವಾಯಿತು.
ಪತ್ರಿಕೋದ್ಯಮ ಎಂದರೆ ಕೇವಲ ಮೈಕ್ ಹಿಡಿದು ವಿಡಿಯೊ ಮಾಡುವುದಲ್ಲ; ಸುದ್ದಿಯ ಪರಿಶೀಲನೆ, ವಾಸ್ತವಾಂಶಗಳ ದೃಢೀಕರಣ, ನೈತಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಿತಾಸಕ್ತಿಯೂ ಮುಖ್ಯ. ಅದೇ ಸಮಯದಲ್ಲಿ, ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ಮಾಡುವ ಸ್ವತಂತ್ರ ಪತ್ರಕರ್ತರ ಹಕ್ಕುಗಳ ರಕ್ಷಣೆಯೂ ಅಷ್ಟೇ ಅಗತ್ಯವಾಗಿದೆ.



