ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ‘ಸ್ನೇಕ್ ಸ್ಕ್ಯಾಂಡಲ್’ ಕೊಲೆ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಪತಿಯನ್ನು ಕೊಲೆ ಮಾಡಿ, ಅದನ್ನು ಹಾವಿನ ಕಡಿತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಯತ್ನಿಸಿದ ರವಿತಾ ಕಶ್ಯಪ್ ಮತ್ತು ಅಮರ್‌ದೀಪ್‌ಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಯವೀರ್ ಸಿಂಗ್ ನಗರ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಏನಿದು ಪ್ರಕರಣ?
2025ರ ಏಪ್ರಿಲ್‌ನಲ್ಲಿ ಮೀರತ್‌ನ ಅಕ್ಬರ್‌ಪುರ ಸಾದತ್ ಗ್ರಾಮದಲ್ಲಿ ಅಮಿತ್ ಕಶ್ಯಪ್ ಎಂಬುವವರು ತಮ್ಮ ಮನೆಯ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಬಳಿ ಜೀವಂತ ಹಾವೊಂದು ಪತ್ತೆಯಾಗಿದ್ದು, ದೇಹದ ಮೇಲೆ ಹಾವಿನ ಕಡಿತದ ಗುರುತುಗಳೂ ಕಂಡುಬಂದಿದ್ದವು. ಇದರಿಂದ ಆರಂಭದಲ್ಲಿ ಅವರು ಹಾವಿನ ಕಡಿತದಿಂದ ಮೃತಪಟ್ಟಿರಬಹುದು ಎಂದು ಕುಟುಂಬದವರು ಭಾವಿಸಿದ್ದರು.
ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಅಮಿತ್ ಹಾವಿನ ಕಡಿತದಿಂದ ಮೃತಪಟ್ಟಿಲ್ಲ; ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು. ಬಳಿಕ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪತ್ನಿ ರವಿತಾ ಮತ್ತು ಆಕೆಯ ಪ್ರಿಯಕರ ಅಮರ್‌ದೀಪ್ ವಿರುದ್ಧ ಕ್ರಮ ಕೈಗೊಂಡಿದ್ದರು.
ಕೊಲೆಯನ್ನು ಮುಚ್ಚಿಹಾಕಲು ಹಾವಿನ ಬಳಕೆ!
ತನಿಖೆಯ ಪ್ರಕಾರ, ಅಮಿತ್ ಅವರೊಂದಿಗೆ ಸಂಬಂಧ ಹೊಂದಿದ್ದ ಅಮರ್‌ದೀಪ್‌ನೊಂದಿಗೆ ಸೇರಿ ರವಿತಾ ಕೊಲೆಗೆ ಸಂಚು ರೂಪಿಸಿದ್ದಳು. ಹಾವಾಡಿಗನಿಂದ ₹1,000 ನೀಡಿ ಹಾವನ್ನು ಖರೀದಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
2025ರ ಏಪ್ರಿಲ್ 12ರ ರಾತ್ರಿ ಅಮಿತ್ ಅವರನ್ನು ಕೊಲೆ ಮಾಡಿದ ಬಳಿಕ, ಅವರ ಸಾವನ್ನು ಹಾವಿನ ಕಡಿತದಿಂದ ಸಂಭವಿಸಿದಂತೆ ತೋರಿಸಲು ಶವದ ಬಳಿ ಹಾವನ್ನು ಇರಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಮರಣೋತ್ತರ ಪರೀಕ್ಷೆ ಮತ್ತು ಇತರ ಸಾಕ್ಷ್ಯಗಳು ಪ್ರಕರಣದ ತನಿಖೆಯಲ್ಲಿ ನಿರ್ಣಾಯಕವಾಗಿದ್ದವು.
‘ಅಪರೂಪದಲ್ಲೇ ಅಪರೂಪದ ಪ್ರಕರಣ’ ಎಂದು ಪರಿಗಣನೆ
ಅಕ್ಟೋಬರ್ 7ರಂದು ನ್ಯಾಯಾಲಯವು ಇಬ್ಬರನ್ನೂ ಕೊಲೆ ಮತ್ತು ಕ್ರಿಮಿನಲ್ ಸಂಚಿನ ಆರೋಪಗಳಲ್ಲಿ ದೋಷಿಗಳೆಂದು ಘೋಷಿಸಿತ್ತು. ಅಕ್ಟೋಬರ್ 16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿ ಮರಣದಂಡನೆ ವಿಧಿಸಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ರಕ್ಷಣಾ ವಕೀಲರು ತಿಳಿಸಿದ್ದಾರೆ.



