HEALTH TIPS

ಸಿಜೆಪಿ ಹೋರಾಟ: ಪ್ರತಿಭಟನಕಾರರು ದೆಹಲಿಗೆ ಬರದಂತೆ ಪೊಲೀಸರಿಂದ ಬಿಗಿ ಕ್ರಮ

ನವದೆಹಲಿ: ದೆಹಲಿಯಲ್ಲಿ ನಡೆದಿದ್ದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಹಿಂದಿನ ಪ್ರತಿಭಟನೆಯ ವಿವರಗಳನ್ನು ದೆಹಲಿ ಪೊಲೀಸರು ಮತ್ತೆ ಪರಿಶೀಲಿಸುತ್ತಿದ್ದಾರೆ. 


ಹಿಂದಿನ ಪ್ರತಿಭಟನೆಗೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವಲ್ಲಿ ನೆರವಾಗಿದ್ದರೆ ಎನ್ನಲಾದ, ಅಪರಾಧ ಹಿನ್ನೆಲೆ ಹೊಂದಿರುವ ಆರೋಪಿಗಳು, ಪ್ರತಿಭಟನೆಗೆ ವ್ಯವಸ್ಥೆಗಳನ್ನು ಕಲ್ಪಿಸಿದ್ದವರ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ.

ಅಕ್ಟೋಬರ್ 10ರಂದು ಸಿಜೆಪಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದು, ಹಿಂದಿನ ರೀತಿಯ ದೊಡ್ಡ ಸಂಖ್ಯೆಯ ಜನ ಸೇರದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ನಗರದಾದ್ಯಂತದ ಠಾಣಾಧಿಕಾರಿಗಳಿಗೆ (ಎಸ್‌ಎಸ್‌ಒ) ಮುಖ ಗುರುತಿಸುವಿಕೆ ವ್ಯವಸ್ಥೆ (ಎಫ್‌ಆರ್‌ಎಸ್‌) ಮೂಲಕ ಗುರುತಿಸಲಾಗಿರುವ, ಅಪರಾಧ ಹಿನ್ನೆಲೆ ಹೊಂದಿರುವ ಆರೋಪಿಗಳೆಂದು ಹೇಳಲಾಗಿರುವ ಸುಮಾರು 2,800 ಜನರ ಮೇಲೆ ನಿಗಾ ಇರಿಸುವಂತೆ ಸೂಚಿಸಲಾಗಿದೆ. ಅಕ್ಟೋಬರ್ 10ರ ಪ್ರತಿಭಟನೆಗೆ ಇವರಲ್ಲಿ ಯಾರಾದರೂ ನವದೆಹಲಿ ಜಿಲ್ಲೆ ಕಡೆಗೆ ತೆರಳುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಹಿಂದಿನ ಸಿಜೆಪಿ ಪ್ರತಿಭಟನೆಗೆ ಬಸ್‌ಗಳು ಹಾಗೂ ಇತರ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿದ್ದವರನ್ನು ಗುರುತಿಸಿ, ಅವರ ಮೇಲೆ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಕ್ಟೋಬರ್ 10ರ ಪ್ರತಿಭಟನೆಗಾಗಿ ಇವರನ್ನು ಮತ್ತೆ ಸಂಪರ್ಕಿಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಬಸ್‌ ನಿರ್ವಾಹಕರ ಮೇಲೂ ನಿಗಾ ಇರಿಸಿ, ಬಸ್‌ಗಳ ಬುಕಿಂಗ್‌ಗಳನ್ನು ಪರಿಶೀಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಬಸ್‌ಗಳನ್ನು ಯಾರು ಬಾಡಿಗೆಗೆ ಪಡೆಯುತ್ತಿದ್ದಾರೆ, ಎಷ್ಟು ಜನರನ್ನು ಸಾಗಿಸಲಾಗುತ್ತಿದೆ ಮತ್ತು ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನೆಗೂ ಮುನ್ನ ಜನರು ಗುಂಪು ಗುಂಪಾಗಿ ದೆಹಲಿ ಹಾಗೂ ನವದೆಹಲಿ ಜಿಲ್ಲೆಯತ್ತ ಬರುತ್ತಿದ್ದಾರೆಯೇ ಎಂಬುದರ ಮೇಲೆ ಪೊಲೀಸರು ವಿಶೇಷ ಗಮನಹರಿಸಿದ್ದಾರೆ.

ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಮುಖ್ಯಸ್ಥರನ್ನು ಸಂಪರ್ಕಿಸಿ, ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ನೋಡಿಕೊಳ್ಳುವಂತೆ ಮನವಿ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿರುವ ಪಿ.ಜಿ ಮಾಲೀಕರನ್ನೂ ಸಂಪರ್ಕಿಸಿ, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ದೆಹಲಿ ಪ್ರವೇಶಿಸುವ ಸಾಧ್ಯತೆಯಿರುವ ಮಾರ್ಗಗಳ ಮೇಲೂ ಹೆಚ್ಚಿನ ನಿಗಾ ಇರಿಸಲಾಗಿದೆ. ವಿಶೇಷವಾಗಿ ಉತ್ತರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಪೂರ್ವ ದೆಹಲಿ ಹಾಗೂ ಶಹದಾರಾ ಗಡಿಗಳು ಮತ್ತು ರಾಜಸ್ಥಾನದಿಂದ ಬರುವ ಮಾರ್ಗಗಳು ಸೇರಿದಂತೆ ನಗರದ ನೈಋತ್ಯ ಭಾಗದ ರಸ್ತೆಗಳಲ್ಲಿ ನಿಗಾ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಪ್ರವೇಶದ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿಭಟನಾಕಾರರು ಜಂತರ್ ಮಂತರ್ ತಲುಪದಂತೆ ತಡೆದರೆ, ಅವರು ನವದೆಹಲಿ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಕುಳಿತು ಪ್ರತಿಭಟನೆ ನಡೆಸದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

‌ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬಂದರೆ ಅವರ ಬಂಧನಕ್ಕೆ ನಗರದ ವಿವಿಧ ಕ್ರೀಡಾಂಗಣಗಳಲ್ಲಿ ತಾತ್ಕಾಲಿಕ ಬಂಧನ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆಯೂ ಪೊಲೀಸರು ಚರ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಂತರ್ ಮಂತರ್ ಹಾಗೂ ಮಧ್ಯ ದೆಹಲಿಯ ಇತರ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries