ಅಲಿಗಡ: ಅಲಿಗಡದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ನೀರಿನ ಬಾಟ್ಲಿಗೆ ಎರಡು ರೂ.ಹೆಚ್ಚುವರಿಯಾಗಿ ವಸೂಲು ಮಾಡಿದ್ದಕ್ಕಾಗಿ ಹಥರಸ್‌ನ ರೆಸ್ಟೋರಂಟ್‌ವೊಂದಕ್ಕೆ ಒಂದು ಲಕ್ಷ ರೂ.ದಂಡ ವಿಧಿಸಿದೆ.
ದೂರುದಾರರಿಗೆ ಮಾನಸಿಕ ಕಿರುಕುಳಕ್ಕಾಗಿ 1,000 ರೂಪಾಯಿ ಪರಿಹಾರ ಹಾಗೂ ಮೊಕದ್ದಮೆ ವೆಚ್ಚವಾಗಿ 5,000 ರೂಪಾಯಿಗಳನ್ನು ಪಾವತಿಸುವಂತೆಯೂ ಆಯೋಗವು ಆದೇಶಿಸಿದೆ.
ಆದೇಶವನ್ನು 45 ದಿನಗಳ ಒಳಗೆ ಕಡ್ಡಾಯವಾಗಿ ಪಾಲಿಸಬೇಕು. ನಿಗದಿತ ಅವಧಿಯೊಳಗೆ ಆದೇಶವನ್ನು ಪಾಲಿಸದಿದ್ದರೆ ಕಾನೂನುರೀತ್ಯ ಕ್ರಿಮಿನಲ್ ಕ್ರಮ ಜರುಗಿಸಲಾಗುವುದು ಎಂದು ಆಯೋಗವು ರೆಸ್ಟೋರಂಟ್ ಮಾಲಿಕರಿಗೆ ಕಠಿಣ ಎಚ್ಚರಿಕೆ ನೀಡಿದೆ.
ಅಲಿಗಡ ನಿವಾಸಿಯೋರ್ವರು ಮಾರ್ಚ್ 11,2026ರಂದು ಈ ರೆಸ್ಟೋರಂಟ್‌ಗೆ ಭೇಟಿ ನೀಡಿದ್ದರು. ಊಟದ ಸಮಯದಲ್ಲಿ ಕುಡಿಯಲು ನೀರು ಕೇಳಿದಾಗ ಅವರಿಗೆ 18 ರೂ.ಮುದ್ರಿತ ಬೆಲೆ ಇದ್ದ ನೀರಿನ ಬಾಟ್ಲಿಯನ್ನು ನೀಡಲಾಗಿತ್ತು. ಆದರೆ ಬಿಲ್‌ನಲ್ಲಿ 20 ರೂ.ವಿಧಿಸಲಾಗಿತ್ತು. ಅಂದರೆ ಮುದ್ರಿತ ಬೆಲೆಗಿಂತ ಎರಡು ರೂ.ಗಳನ್ನು ಹೆಚ್ಚಾಗಿ ಪಡೆಯಲಾಗಿತ್ತು.
ಈ ಅನ್ಯಾಯದಿಂದ ನೊಂದ ಗ್ರಾಹಕರು, ತನಗಾದ ಮಾನಸಿಕ ವೇದನೆ ಮತ್ತು ಹಣಕಾಸಿನ ನಷ್ಟಕ್ಕೆ 10 ಲಕ್ಷ ರೂ.ಪರಿಹಾರ ಹಾಗೂ 15,000 ರೂ.ಕಾನೂನು ವೆಚ್ಚವನ್ನು ಕೋರಿ ಗ್ರಾಹಕ ಆಯೋಗದಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ರೆಸ್ಟೋರಂಟ್‌ನ ಈ ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಆಯೋಗದ ಅಧ್ಯಕ್ಷ ಹಸ್ನೈನ್ ಖುರೇಷಿ ಮತ್ತು ಸದಸ್ಯೆ ಪೂರ್ಣಿಮಾ ಸಿಂಗ್ ರಜಪೂತ್ ಅವರ ಪೀಠವು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ರೆಸ್ಟೋರಂಟ್‌ಗೆ ನೋಟಿಸ್ ಜಾರಿಗೊಳಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಆಯೋಗವು ಮೇ 21ರಂದು ಏಕಪಕ್ಷೀಯ ವಿಚಾರಣೆಯನ್ನು ಮುಂದುವರಿಸಿತು.
ದೂರುದಾರರು ಸಲ್ಲಿಸಿದ್ದ ಮಾರ್ಚ್ 11, 2026ರ ಬಿಲ್ ಮತ್ತು 18 ರೂ.ಎಂಆರ್‌ಪಿ ಇರುವ ನೀರಿನ ಬಾಟ್ಲಿಯ ಛಾಯಾಚಿತ್ರವನ್ನು ಆಯೋಗವು ಪರಿಶೀಲಿಸಿದಾಗ ರೆಸ್ಟೋರಂಟ್ 18 ರೂ.ಬೆಲೆಯ ಬಾಟ್ಲಿಗೆ 20 ರೂ. ಪಡೆದಿದ್ದು ಸಾಬೀತಾಗಿತ್ತು ಮತ್ತು ಇದು ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ ಎಂದು ಆಯೋಗ ತೀರ್ಮಾನಿಸಿತು.



