ವಾಷಿಂಗ್ಟನ್: ಇರಾನ್‌ಗೆ ಸಹಾಯ ಮಾಡುವ ಮೂಲಕ ರಷ್ಯಾ ಮತ್ತು ಚೀನಾ 'ಹೆಚ್ಚಿನದನ್ನು ಕಳೆದುಕೊಳ್ಳಲಿವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾನ್‌ಗೆ ರಷ್ಯಾ ಮತ್ತು ಚೀನಾ ನೆರವಾಗುತ್ತಿವೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ಒಂದು ವೇಳೆ ಹಾಗೇನಾದರೂ ನಡೆಯುತ್ತಿದ್ದರೆ, ಅದು ಅತ್ಯಂತ ಕೆಳಮಟ್ಟದಲ್ಲಿರಬೇಕು. ಆದರೆ. ವಾಸ್ತವದಲ್ಲಿ ರಷ್ಯಾ ಮತ್ತು ಚೀನಾ ಹಾಗೆ ಮಾಡುತ್ತಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದ್ದಲ್ಲಿ ಅವರಿಗೆ (ರಷ್ಯಾ ಮತ್ತು ಚೀನಾ) ಕಳೆದುಕೊಳ್ಳಲು ಬಹಳಷ್ಟಿದೆ. ಅಲ್ಲದೆ ನಮಗೆ ಆ ವಿಷಯ ಖಂಡಿತವಾಗಿಯೂ, ಬಹಳ ತ್ವರಿತವಾಗಿ ಗೊತ್ತಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಅವರು 'ಟ್ರೂಥ್ ಸೋಷಿಯಲ್'ನಲ್ಲಿ ಬರೆದುಕೊಂಡಿದ್ದಾರೆ.
ಇರಾನ್‌ಗೆ ಚೀನಾ ಮತ್ತು ರಷ್ಯಾ ನೆರವಾಗುತ್ತಿವೆ ಎಂದು ಆರೋಪಿಸುತ್ತಿರುವ ತಮ್ಮ ವಿಮರ್ಶಕರು ಮತ್ತು ವಿರೋಧಿಗಳ ಹೇಳಿಕೆಗಳನ್ನು ಗಮನಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಜುಲೈನಲ್ಲಿ ಮಾತನಾಡಿದ್ದ ಟ್ರಂಪ್, ಯುದ್ಧದಲ್ಲಿ ಇರಾನ್‌ಗೆ ರಷ್ಯಾ ಮತ್ತು ಚೀನಾ ಸಹಾಯ ಮಾಡುವುದಿಲ್ಲ ಎಂದು ನಂಬಿದ್ದೇನೆ. ಆದರೆ, ಒಂದು ವೇಳೆ ಅವರು ಇರಾನ್‌ಗೆ ನೆರವು ನೀಡಿದ್ದೇ ಆದಲ್ಲಿ ಅದು ಅವರಿಗೆ ಅತ್ಯಂತ ಕೆಟ್ಟ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದರು.
ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದಾಗಿನಿಂದ ಸಂಘರ್ಷ ಭುಗಿಲೆದ್ದಿತ್ತು. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು.
ಅಂದಿನಿಂದ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿ ಮತ್ತು ಲೆಬೆನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಮಿಲಿಯನ್‌ಗಟ್ಟಲೆ ಜನರು ನಿರಾಶ್ರಿತರಾಗಿದ್ದಾರೆ.
ಟ್ರಂಪ್ ಈ ಹಿಂದೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಸಂಘರ್ಷದಲ್ಲಿ ತಟಸ್ಥರಾಗಿದ್ದಾರೆ ಎಂದು ಬಣ್ಣಿಸಿದ್ದರು.
ರಷ್ಯಾ ಮತ್ತು ಚೀನಾವು ಇರಾನ್‌ನೊಂದಿಗೆ ನಿಕಟ ಬಾಂಧವ್ಯ ಕಾಯ್ದುಕೊಂಡಿವೆ. ಈ ಯುದ್ಧವು ಮಧ್ಯಪ್ರಾಚ್ಯದಲ್ಲಿ ಪರಮಾಣು ಅಸ್ತ್ರಗಳ ಪೈಪೋಟಿಗೆ ಕಾರಣವಾಗಬಹುದು ಎಂದು ರಷ್ಯಾ ಎಚ್ಚರಿಸಿದ್ದರೆ, ಇರಾನ್ ಮೇಲಿನ ಅಮೆರಿಕದ ದಾಳಿಗಳನ್ನು ಚೀನಾ ಆ ದೇಶದ ಸಾರ್ವಭೌಮತ್ವದ ಉಲ್ಲಂಘನೆ ಎಂದು ಖಂಡಿಸಿದೆ.



