ನವದೆಹಲಿ: ದೇಶೀಯ ಸಕ್ಕರೆ ಪೂರೈಕೆಯನ್ನು ರಕ್ಷಿಸುವ ಉದ್ದೇಶದಿಂದ 2026-27ನೇ ಸಾಲಿನ ಎಥೆನಾಲ್ ಪೂರೈಕೆ ಟೆಂಡರ್‌ನಲ್ಲಿ ಕಬ್ಬು ಆಧಾರಿತ ಕೆಲವು ಕಚ್ಚಾ ವಸ್ತುಗಳಿಂದ ತಯಾರಿಸಿದ ಎಥೆನಾಲ್ ಗೆ ಅವಕಾಶ ನೀಡದಿರಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದರಿಂದ ಪೆಟ್ರೋಲ್ ಮಿಶ್ರಣಕ್ಕೆ ಧಾನ್ಯ ಆಧಾರಿತ ಎಥೆನಾಲ್ ಬಳಕೆಗೆ ಹೆಚ್ಚಿನ ಆದ್ಯತೆ ದೊರೆಯಲಿದೆ.
ತೈಲ ಮಾರಾಟ ಕಂಪೆನಿಗಳ ಪರವಾಗಿ ಬಿಪಿಸಿಎಲ್ ಅ.16ರಂದು ಸುಮಾರು 11 ಶತಕೋಟಿ ಲೀಟರ್ ಎಥೆನಾಲ್ ಪೂರೈಕೆಗಾಗಿ ಟೆಂಡರ್ ಆಹ್ವಾನಿಸಿದೆ. ಈ ಪೂರೈಕೆ ಅವಧಿ ನವೆಂಬರ್ 2026ರಿಂದ ಆರಂಭವಾಗಲಿದೆ.
2026-27ನೇ ಸಾಲಿನಲ್ಲಿ ಎಥೆನಾಲ್ ಉತ್ಪಾದನೆಗೆ ಕಬ್ಬಿನ ಬಳಕೆಯನ್ನು ಶೂನ್ಯಕ್ಕೆ ಇಳಿಸುವಂತೆ ಸರಕಾರ ನಿರ್ದೇಶನ ನೀಡಿದೆ. ಇದರಂತೆ ಕಬ್ಬಿನ ರಸ, ಸಕ್ಕರೆ ಸಿರಪ್ ಹಾಗೂ ಬಿ-ಹೆವಿ ಮೊಲಾಸಸ್‌ಗಳಿಂದ ಉತ್ಪಾದಿಸಿದ ಎಥೆನಾಲ್‌ಗೆ ಹೊಸ ಟೆಂಡರ್‌ನಲ್ಲಿ ಅವಕಾಶ ನೀಡಿಲ್ಲ.
ಇದರ ಬದಲಿಗೆ ಮೆಕ್ಕೆಜೋಳ, ಒಡೆದ ಅಕ್ಕಿ ಮತ್ತು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಸಂಗ್ರಹಿಸಿರುವ ಹೆಚ್ಚುವರಿ ಅಕ್ಕಿಯಿಂದ ಉತ್ಪಾದಿಸಿದ ಎಥೆನಾಲ್ ಗೆ ಟೆಂಡರ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮೆಕ್ಕೆಜೋಳ ಆಧಾರಿತ ಎಥೆನಾಲ್ ನ ಖರೀದಿ ಬೆಲೆಯನ್ನು ಲೀಟರ್‌ಗೆ 71.86 ರೂ.ನಿಂದ 68.86 ರೂ.ಗೆ ಇಳಿಸಲಾಗಿದೆ. ಇದೇ ಎಥೆನಾಲ್‌ಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ದರವನ್ನೂ ಲೀಟರ್‌ಗೆ 5.79 ರೂ.ನಿಂದ 2.79 ರೂ.ಗೆ ತಗ್ಗಿಸಲಾಗಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಸಕ್ಕರೆ ಉತ್ಪಾದನೆ ಕುಸಿಯುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆಯನ್ನು ಹೆಚ್ಚಿಸುವುದು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ.
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿದೆ. ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆ ತಗ್ಗಿಸಲು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಕಾರ್ಯಕ್ರಮವನ್ನು ದೇಶ ಅನುಸರಿಸುತ್ತಿದೆ. ಆದರೆ, ಸಕ್ಕರೆ ಉತ್ಪಾದನೆಗೆ ಬಳಸುವ ಕಬ್ಬನ್ನು ಎಥೆನಾಲ್ ತಯಾರಿಕೆಗೂ ಬಳಸುವುದರಿಂದ ಆಹಾರ ಬಳಕೆ ಮತ್ತು ಇಂಧನ ಉತ್ಪಾದನೆಯ ನಡುವೆ ಸ್ಪರ್ಧೆ ಉಂಟಾಗುತ್ತದೆ.
ಹೊಸ ಟೆಂಡರ್ ನಲ್ಲಿ ಕಬ್ಬು ಆಧಾರಿತ ಎಥೆನಾಲ್‌ಗೆ ಅವಕಾಶ ನೀಡದಿದ್ದರೂ ಪೆಟ್ರೋಲ್ ಮಿಶ್ರಣ ಕಾರ್ಯಕ್ರಮ ಸ್ಥಗಿತಗೊಳ್ಳುವುದಿಲ್ಲ. ಬದಲಿಗೆ ಧಾನ್ಯಗಳಿಂದ ತಯಾರಿಸಿದ ಎಥೆನಾಲ್ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.



