HEALTH TIPS

'ಪುರಾತತ್ವ ಇಲಾಖೆ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ': ಸುಪ್ರೀಂ ಕೋರ್ಟ್

ನವದೆಹಲಿ:  ದಿಲ್ಲಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹಾಗೂ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ತೋರಿರುವ ನಿರ್ಲಕ್ಷ್ಯಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.


ಲೋಧಿ ಕಾಲದ ಸ್ಮಾರಕವೊಂದನ್ನು ದನದ ಕೊಟ್ಟಿಗೆಯಾಗಿ ಬಳಸಲಾಗುತ್ತಿದೆ ಮತ್ತು 13ನೇ ಶತಮಾನದ ಐತಿಹಾಸಿಕ ರಚನೆಯೊಂದು ಖಾಸಗಿ ಒತ್ತುವರಿಗೆ ಒಳಗಾಗಿದೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.

ಹಿಂದಿನ ಆದೇಶದಂತೆ ನ್ಯಾಯಾಲಯದಲ್ಲಿ ಹಾಜರಾಗಿದ್ದ ASI ಮಹಾನಿರ್ದೇಶಕರಿಗೆ, ಇಲಾಖೆಯ ಸ್ಪಷ್ಟ ನಿರ್ಲಕ್ಷ್ಯದಿಂದಾಗಿ ದಿಲ್ಲಿಯಲ್ಲಿನ ಯಾವುದೇ ಪರಂಪರೆಯ ತಾಣವೂ ಈಗ ಭೇಟಿ ನೀಡಲು ಯೋಗ್ಯವಾಗಿಲ್ಲ ಎಂದು ನ್ಯಾಯಪೀಠ ಹೇಳಿತು. MCDಗೂ ದಿಲ್ಲಿಯ ಯಾವುದೇ ಪರಂಪರೆಯ ತಾಣವನ್ನು ನಿರ್ವಹಿಸುವ ಸಾಮರ್ಥ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ದಿಲ್ಲಿಯ ಪರಂಪರೆಯ ತಾಣಗಳ ಸಂರಕ್ಷಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಆರಂಭದಲ್ಲಿ ಲೋಧಿ ಕಾಲದ ಶೇಖ್ ಅಲಿ 'ಗುಮ್ತಿ' ಸಂರಕ್ಷಣೆಗೆ ಸಂಬಂಧಿಸಿದಂತೆ ವಿಚಾರಣೆ ಆರಂಭವಾಗಿತ್ತು. ಬಳಿಕ ಹಿರಿಯ ವಕೀಲ ಹಾಗೂ ಪ್ರಕರಣದಲ್ಲಿ ನ್ಯಾಯಾಲಯದ ಆಯುಕ್ತರಾಗಿರುವ ಗೋಪಾಲ್ ಶಂಕರನಾರಾಯಣನ್ ಅವರ ನೆರವಿನೊಂದಿಗೆ ಇಂತಹ ಎಲ್ಲ ಸ್ಮಾರಕಗಳನ್ನೂ ವಿಚಾರಣೆಯ ವ್ಯಾಪ್ತಿಗೆ ತರಲಾಯಿತು.

►'ಲಾಲ್ ಮಹಲ್' ದುಸ್ಥಿತಿ

ನಿಝಾಮುದ್ದೀನ್ ನಲ್ಲಿರುವ 13ನೇ ಶತಮಾನದ ಐತಿಹಾಸಿಕ ಅರಮನೆ 'ಲಾಲ್ ಮಹಲ್'ನ ಸ್ಥಿತಿಯನ್ನು ಶಂಕರನಾರಾಯಣನ್ ನ್ಯಾಯಾಲಯದ ಗಮನಕ್ಕೆ ತಂದರು. ಸ್ಮಾರಕದ ಕುರಿತು ಇಬ್ನ್ ಬತೂತಾ ಅವರ ಬರಹಗಳಲ್ಲೂ ಉಲ್ಲೇಖವಿದೆ. ಕಟ್ಟಡವು ಭಾಗಶಃ ಧ್ವಂಸಗೊಂಡಿದ್ದು, ಖಾಸಗಿ ಬಿಲ್ಡರ್ ಗಳಿಂದ ಒತ್ತುವರಿಗೂ ಒಳಗಾಗಿದೆ. ಇದು ASI ಮತ್ತು MCD ಎರಡರ ಕಡೆಯಿಂದಲೂ ನಡೆದಿರುವ 'ಅತ್ಯಂತ ದೊಡ್ಡ' ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಸ್ಮಾರಕವನ್ನು ASI ಏಕೆ 'ಸಂರಕ್ಷಿತ' ಎಂದು ಅಧಿಸೂಚಿಸಿಲ್ಲ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು.ತಮ್ಮ ತಂಡದೊಂದಿಗೆ ಸ್ಮಾರಕ ಪರಿಶೀಲನೆಗೆ ತೆರಳಿದ್ದರೂ, ಅದು ಖಾಸಗಿ ಆಸ್ತಿ ಎಂದು ಹೇಳಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ ಎಂದು ಶಂಕರನಾರಾಯಣನ್ ತಿಳಿಸಿದರು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಪೀಠವು ಸ್ಮಾರಕದ ಸ್ಥಿತಿ ಹಾಗೂ ಅದು ಖಾಸಗಿ ಆಸ್ತಿಯೇ ಅಥವಾ ಸಾರ್ವಜನಿಕ ಆಸ್ತಿಯೇ ಎಂಬುದನ್ನು MCD ಮತ್ತು ASI ಅಧಿಕಾರಿಗಳನ್ನು ಪ್ರಶ್ನಿಸಿತು.

MCD ಪರ ಹಿರಿಯ ವಕೀಲ ಎಸ್.ಡಿ. ಸಂಜಯ್, ಆ ಪ್ರದೇಶ ಖಾಸಗಿ ಆಸ್ತಿಯಾಗಿದ್ದು MCD ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರಿಸಿದರು. ಆಗ ನ್ಯಾಯಪೀಠವು ಆ ಖಾಸಗಿ ಭೂಮಿಯ 'ಹೋಲ್ಡಿಂಗ್ ಸಂಖ್ಯೆ' ಕೇಳಿತು. ಆದರೆ ವಕೀಲರು ಉತ್ತರಿಸಲು ಸಾಧ್ಯವಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, ಪ್ರದೇಶವು MCD ವ್ಯಾಪ್ತಿಗೆ ಬರುತ್ತದೆಯೇ ಇಲ್ಲವೇ ಎಂಬುದನ್ನು ತಿಳಿಯದೆ ಪ್ರಮಾಣಪತ್ರ ಸಲ್ಲಿಸಿದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿತು.

"ನೀವು ವಿಷಯವನ್ನು ತೀರಾ ಹಗುರವಾಗಿ ಪರಿಗಣಿಸುತ್ತಿದ್ದೀರಿ. ನಿಮಗೆ ಸೂಚನೆ ನೀಡಿದ ಅಧಿಕಾರಿಗಳ ಹೆಸರುಗಳನ್ನು ನಮಗೆ ತಿಳಿಸಿ. ನಾವು ಅವರನ್ನು ಇಂದೇ ಸೇವೆಯಿಂದ ಅಮಾನತುಗೊಳಿಸುತ್ತೇವೆ. ಇದು ನಂಬಲಸಾಧ್ಯವಾದಷ್ಟು ಆಘಾತಕಾರಿ," ಎಂದು ನ್ಯಾಯಪೀಠ ಹೇಳಿತು.

►ಕಸದ ತಾಣವಾದ 'ಜಮ್ರೂದ್‌ ಪುರ್ ಸಮಾಧಿಗಳು'

ಲೋಧಿ ಕಾಲದ 'ಜಮ್ರೂದ್‌ ಪುರ್ ಸಮಾಧಿಗಳ' ದುಸ್ಥಿತಿಯನ್ನೂ ನ್ಯಾಯಾಲಯದ ಆಯುಕ್ತರು ವಿವರಿಸಿದರು. ಅಲ್ಲಿ ದನದ ಕೊಟ್ಟಿಗೆಯನ್ನು ನಡೆಸಲಾಗುತ್ತಿದ್ದು, ಸ್ಥಳವನ್ನು ಕಸದ ತೊಟ್ಟಿಯಂತೆ ಬಳಸಲಾಗುತ್ತಿದೆ ಎಂದು ತಿಳಿಸಿದರು.

ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿ ಅಮಾನುಲ್ಲಾ ಅವರು ASI ಮಹಾನಿರ್ದೇಶಕರಿಂದ ವಿವರಣೆ ಕೋರಿದರು. MCDಯನ್ನೂ ಪ್ರಶ್ನಿಸಿದ ಅವರು, "ಅದನ್ನು ಗೋಶಾಲೆಯಾಗಿ ಬಳಸುವ ಧೈರ್ಯ ನಿಮಗಿದೆಯೇ?" ಎಂದು ಕೇಳಿದರು.

ಒಂದು ಅಚಾತುರ್ಯವನ್ನು ಒಪ್ಪಿಕೊಳ್ಳಬಹುದು. ಆದರೆ ಹಲವು ಸ್ಮಾರಕಗಳ ಆವರಣದಲ್ಲಿ 14ರಿಂದ 16 ಇಂಚು ಎತ್ತರದವರೆಗೆ ಕಸದ ರಾಶಿ ಸಂಗ್ರಹವಾಗಿರುವುದು ಕಂಡುಬಂದಿದೆ. ಸುಮಾರು 20 ವರ್ಷಗಳ ಕಸವನ್ನು ತೆರವುಗೊಳಿಸಬೇಕಾದ ಪರಿಸ್ಥಿತಿ ಇದೆ. ಅದಕ್ಕೆ ಸಹಜವಾಗಿಯೇ ಸಮಯ ಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು.

ಪರಿಶೀಲನೆಯ ಬಳಿಕವೂ MCDಗೆ ಸ್ಮಾರಕಗಳನ್ನು ನಿರ್ವಹಿಸುವ ಸಾಮರ್ಥ್ಯವಿದೆ ಎಂದು ತಮಗೆ ಅನಿಸುತ್ತಿಲ್ಲ ಎಂದರು.

►'ಕೇವಲ ಅನುದಾನ ಪಡೆಯುವುದರಲ್ಲಿ ಆಸಕ್ತಿ'

ASI ವಿರುದ್ಧವೂ ನ್ಯಾಯಪೀಠ ತೀವ್ರ ಟೀಕೆ ಮಾಡಿತು. "ಅವರಿಗೆ ಕೇವಲ ಹಣ ಸಂಗ್ರಹಿಸುವುದರಲ್ಲಿ ಆಸಕ್ತಿ. ಅಲ್ಲಿ ಕೇವಲ ಕಾವಲುಗಾರರನ್ನು ನೇಮಿಸಿದ್ದಾರೆ. ಬೇರೇನೂ ಚಟುವಟಿಕೆ ನಡೆಯುತ್ತಿಲ್ಲ. ದಿಲ್ಲಿಯಲ್ಲಿರುವ ASI ತಾಣಗಳಿಗೆ ಯಾರೂ ಹೋಗುವುದಿಲ್ಲ. ASI ತನ್ನ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಅವರು ಏನನ್ನೂ ಮಾಡುವುದಿಲ್ಲ, ಕೇವಲ ಅನುದಾನ ಪಡೆಯುತ್ತಾರೆ ಮತ್ತು ನೂರಾರು ಸಿಬ್ಬಂದಿಯನ್ನು ಹೊಂದಿದ್ದಾರೆ," ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು.

ವೇತನ ಪಟ್ಟಿಯಲ್ಲಿರುವ ಸಿಬ್ಬಂದಿ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಅಸಮಾಧಾನವನ್ನೂ ಅವರು ವ್ಯಕ್ತಪಡಿಸಿದರು.

ASI ಮತ್ತು MCDಯ ನಿರ್ಲಕ್ಷ್ಯದಿಂದ ವಿವಿಧ ಸ್ಮಾರಕಗಳು ಕಸದ ರಾಶಿಯಾಗಿ ಮಾರ್ಪಟ್ಟಿರುವ ಕುರಿತು 'ಹಿಂದೂಸ್ತಾನ್ ಟೈಮ್ಸ್' ಮತ್ತು 'ಟೈಮ್ಸ್ ಆಫ್ ಇಂಡಿಯಾ' ಪ್ರಕಟಿಸಿದ್ದ ವರದಿಗಳನ್ನು ನ್ಯಾಯಾಲಯದ ಆಯುಕ್ತರು ಈ ಹಿಂದೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಸ್ಮಾರಕಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದು ಎರಡೂ ಪ್ರಾಧಿಕಾರಗಳು ಪ್ರಮಾಣಪತ್ರದಲ್ಲಿ ಹೇಳಿರುವುದು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಗಮನಿಸಿತ್ತು. ಅಧಿಕಾರಿಗಳ ವಿರುದ್ಧ ಕಠಿಣ ಆದೇಶ ಹೊರಡಿಸಲು ನ್ಯಾಯಪೀಠ ಮುಂದಾಗಿದ್ದರೂ, ಹೊಸ ಪ್ರಮಾಣಪತ್ರ ಸಲ್ಲಿಸಲು ಅವರಿಗೆ ಕೊನೆಯ ಅವಕಾಶ ನೀಡಿತು.

ಹಿರಿಯ ವಕೀಲ ಹಾಗೂ ಈ ಪ್ರಕರಣದಲ್ಲಿ ನ್ಯಾಯಾಲಯದ ಆಯುಕ್ತರಾಗಿರುವ ಗೋಪಾಲ್ ಶಂಕರನಾರಾಯಣನ್ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, ವಿವಿಧ ಸರ್ಕಾರಿ ಸಂಸ್ಥೆಗಳ ನಡುವೆ ಸಮನ್ವಯದ ಸಂಪೂರ್ಣ ಕೊರತೆಯಿದೆ ಎಂದು ಹೇಳಿತು. ಆಯಾ ಇಲಾಖೆಗಳ ಅಧಿಕಾರಿಗಳು ವಿಷಯದ ಗಂಭೀರತೆ ಮತ್ತು ತಾವು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಅರ್ಥಮಾಡಿಕೊಂಡಿಲ್ಲ. ನ್ಯಾಯಾಲಯದ ಮುಂದೆ ಹೇಳುವ ವಿಚಾರಗಳನ್ನು ವಾಸ್ತವದಲ್ಲಿ ಜಾರಿಗೆ ತರಬೇಕೆಂಬ ಗಂಭೀರತೆ ಅವರ ಧೋರಣೆಯಲ್ಲಿ ಕಾಣಿಸುತ್ತಿಲ್ಲ ಎಂದು ನ್ಯಾಯಪೀಠ ತಿಳಿಸಿತು.

ಸ್ಮಾರಕಗಳ ಸ್ಥಿತಿಗತಿ, ಒಡೆತನ, ವಿವಾದಗಳ ಇತ್ಯರ್ಥ ಹಾಗೂ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಲಭ್ಯವಿಲ್ಲ. ಕಾನೂನುಬದ್ಧವಾಗಿ ಈ ವಿವರಗಳನ್ನು ತಿಳಿದಿರಬೇಕಾದ ಮತ್ತು ದಾಖಲೆಗಳನ್ನು ನಿರ್ವಹಿಸಬೇಕಾದ ಅಧಿಕಾರಿಗಳು ಸಂಪೂರ್ಣ ಅಜ್ಞಾನ ಪ್ರದರ್ಶಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

"ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಆದರೆ, ವಕೀಲರ ಮನವಿಯನ್ನು ಪರಿಗಣಿಸಿ ಅವರಿಗೆ ಕೊನೆಯ ಅವಕಾಶ ನೀಡುತ್ತಿದ್ದೇವೆ. ಹೀಗಾಗಿ, ಸದ್ಯಕ್ಕೆ ಯಾವುದೇ ಕಠಿಣ ಆದೇಶ ಹೊರಡಿಸುವುದಿಲ್ಲ," ಎಂದು ನ್ಯಾಯಪೀಠ ಹೇಳಿತು. ಇತರ ಅಧಿಕಾರಿಗಳೊಂದಿಗೆ ಪ್ರಕರಣವನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಕೇಂದ್ರ ಸರಕಾರದ ಅಧಿಕಾರಿಗಳಿಗೆ ವಹಿಸುವ ಅಗತ್ಯವಿದೆ ಎಂದೂ ತಿಳಿಸಿತು.

ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿಯನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸುವಂತೆ ನ್ಯಾಯಪೀಠ ಆದೇಶಿಸಿತು. ಮುಂದಿನ ವಿಚಾರಣೆಗೆ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ MCD, NDMC, NCT ದಿಲ್ಲಿಯ ಪುರಾತತ್ವ ಇಲಾಖೆ, ASI, DDA ಮತ್ತು CPWDಯ ಹಿರಿಯ ಅಧಿಕಾರಿಗಳು ನ್ಯಾಯಾಲಯದಲ್ಲಿ ಖುದ್ದು ಹಾಜರಾಗಬೇಕು ಎಂದು ಸೂಚಿಸಿತು.

ಅಕ್ಟೋಬರ್ 16ರಂದು ಮಧ್ಯಾಹ್ನ 1 ಗಂಟೆಗೆ ಪ್ರಕರಣದ ವಿಚಾರಣೆ ನಡೆಯಲಿದ್ದು, ಆ ಸಂದರ್ಭದಲ್ಲಿ DTTSC ಕೂಡ ಹಾಜರಿರಬೇಕು ಎಂದು ಸೂಚಿಸಿತು. ಬೇರೆ ಯಾವುದೇ ಕಾರ್ಯಕ್ರಮಗಳಿದ್ದರೂ ಅವುಗಳನ್ನು ರದ್ದುಗೊಳಿಸಿದಂತೆ ಪರಿಗಣಿಸಬೇಕು. ಯಾವುದೇ ಪ್ರತಿನಿಧಿ ಅಥವಾ ಬದಲೀ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಕಳುಹಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಿತು.

ದಿಲ್ಲಿ ಗಾಲ್ಫ್ ಕ್ಲಬ್ ಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪ್ರಮಾಣಪತ್ರದ ಬಗ್ಗೆಯೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪ್ರಮಾಣಪತ್ರದಲ್ಲಿ ಅನುಸರಿಸಿದ ಕಾರ್ಯವಿಧಾನದ ವಿವರಗಳಿರಬೇಕಿತ್ತು ಎಂದು ಹೇಳಿದ ನ್ಯಾಯಾಲಯ, ಸಂಬಂಧಿತ ನಿಯಮಗಳ ಉಲ್ಲೇಖದೊಂದಿಗೆ ಹೊಸ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries