ಅಹಮದಾಬಾದ್:ರಾಷ್ಟ್ರೀಯ ಏಕತಾ ದಿನದ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಗಾಂಧಿನಗರಕ್ಕೆ ಆಗಮಿಸಿರುವ 50ಕ್ಕೂ ಹೆಚ್ಚು CRPF, BSF ಹಾಗೂ ITBP ಸಿಬ್ಬಂದಿಗೆ ಡೆಂಗ್ಯೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಪೈಕಿ 43 ಯೋಧರನ್ನು ಗಾಂಧಿನಗರ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಈ ಪೈಕಿ 43 ಯೋಧರನ್ನು ಗಾಂಧಿನಗರ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅಸ್ಸಾಂ ಮೂಲದ 26 ವರ್ಷದ CRPF ಯೋಧ ಅಮಲ್ ಬರ್ಮನ್ ಮೃತಪಟ್ಟಿದ್ದಾರೆ.
ಆದರೆ, ಅಮಲ್ ಬರ್ಮನ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮಲ್ ಬರ್ಮನ್ ಅವರು ಡೆಂಗ್ಯೂ ಸೋಂಕಿಗಾಗಿ ಗಾಂಧಿನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಸಾವಿನ ನಿಖರ ಕಾರಣದ ವರದಿಯನ್ನು ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.
ಅವರು ಅಕ್ಟೋಬರ್ 6ರ ರಾತ್ರಿ ಸುಮಾರು 9.30ಕ್ಕೆ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಬಂದಿದ್ದರು. ಅವರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು ಎಂದು ಗಾಂಧಿನಗರ ಸಾರ್ವಜನಿಕ ಆಸ್ಪತ್ರೆಯ ಪ್ರಾಂತೀಯ ವೈದ್ಯಾಧಿಕಾರಿ ವಿಪುಲ ಪಾಂಡ್ಯ ತಿಳಿಸಿದ್ದಾರೆ.
'ಅಕ್ಟೋಬರ್ 6ರ ರಾತ್ರಿ ಸುಮಾರು 9.30ಕ್ಕೆ ಅಮಲ್ ಬರ್ಮನ್ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ತಕ್ಷಣವೇ ECG ಮತ್ತು ಕಾರ್ಡಿಯಾಕ್ ಮಾರ್ಕರ್ ಪರೀಕ್ಷೆಗಳನ್ನು ನಡೆಸಲಾಯಿತು. ಅವರಿಗೆ ಅಲ್ಪಾವಧಿಗೆ ಚಿಕಿತ್ಸೆ ನೀಡಿದರೂ, ಬೆಳಿಗ್ಗೆ ಸುಮಾರು 6.50ಕ್ಕೆ ಅವರು ಕೊನೆಯುಸಿರೆಳೆದರು. ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿನ ಅಧಿಕೃತ ಕಾರಣದ ವರದಿಯನ್ನು ಸದ್ಯ ನಿರೀಕ್ಷಿಸಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ.
ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸಿದೆ.



