HEALTH TIPS

ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದ ವಾಹನಗಳ ಮುಟ್ಟುಗೋಲು: ಸುಪ್ರೀಂಕೋರ್ಟ್‌

ನವದೆಹಲಿ: ಸಂಚಾರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್‌, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿಢೀರ್‌ ತಪಾಸಣೆ ನಡೆಸಿ, ಸಂಚಾರ ನಿಯಮ ಉಲ್ಲಂಘಿಸಿ ದಂಡದ ಶುಲ್ಕ ಉಳಿಸಿಕೊಂಡಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ತಿಳಿಸಿದೆ. 


ದಂಡ ಪಾವತಿಸುವವರೆಗೂ ವಾಹನಕ್ಕೆ ಸಂಬಂಧಿಸಿದ ಎಲ್ಲ ಆನ್‌ಲೈನ್‌ ಸೇವೆಗಳನ್ನು ಸ್ಥಗಿತಗೊಳಿಸುವಂತೆ ತಿಳಿಸಿದೆ.

'ಅಧಿಕಾರಿಗಳು ದಂಡ ವಸೂಲಿಯನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಸಾವಿರಾರು ಕೋಟಿ ರೂಪಾಯಿ ದಂಡ ಪಾವತಿ ರಸೀದಿ ಸೃಷ್ಟಿಸಿದರೂ ಯಾವುದೇ ಪ್ರಯೋಜನವಿಲ್ಲ' ಎಂದು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ, ಕೆ.ವಿ.ವಿಶ್ವನಾಥನ್‌ ನೇತೃತ್ವದ ನ್ಯಾಯಪೀಠ ತಿಳಿಸಿದೆ.

ದೇಶದಾದ್ಯಂತ ನೀಡಲಾದ ಇ-ಚಲನ್‌ಗಳ ಪೈಕಿ 49,194.05 ಕೋಟಿ ಮೊತ್ತದಷ್ಟು ದಂಡ ಬಾಕಿ ಉಳಿದಿತ್ತು. ಈ ಮೊತ್ತದಲ್ಲಿ ₹26,175.05 ಕೋಟಿ ಮೊತ್ತವನ್ನು ಈಗಾಗಲೇ ವಸೂಲಿ ಮಾಡಲಾಗಿದೆ ಎಂದು ನ್ಯಾಯಪೀಠದ ಗಮನಸೆಳೆಯಲಾಯಿತು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಎಸ್‌.ರಾಜಶೇಖರನ್‌ ವರ್ಸಸ್‌ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ನಡೆಯುತ್ತಿರುವ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, 'ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕೇವಲ ಚಲನ್‌ಗಳನ್ನು ಸೃಷ್ಟಿಸಿದರೆ ಯಾವುದೇ ಉಪಯೋಗವಿಲ್ಲ. ಪೊಲೀಸರು, ಸಾವಿರ ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿ ಇ-ಚಲನ್‌ಗಳನ್ನು ಸೃಷ್ಟಿಸಬಹುದು, ಪ್ರಶ್ನೆ ಇರುವುದು ಇ-ಚಲನ್‌ಗಳ ದಂಡವನ್ನು ಹೇಗೆ ಸಂಗ್ರಹಿಸುತ್ತೀರಿ ಎಂಬುದಾಗಿದೆ' ಎಂದು ಪೀಠವು ಅಭಿಪ್ರಾಯಪಟ್ಟಿದೆ.

'ವಾಹನಗಳನ್ನು ದಿಢೀರ್‌ ತಪಾಸಣೆ ನಡೆಸಬೇಕು. ಅಂತಹ ಸಂದರ್ಭದಲ್ಲಿ ದಂಡ ಬಾಕಿ ಉಳಿಸಿಕೊಂಡಿದ್ದರೆ, ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಂಡು, ವಾಹನಗಳನ್ನು ಮುಟ್ಟುಗೋಲು ಹಾಕಬೇಕು' ಎಂದು ನ್ಯಾಯಾಲಯವು ಆದೇಶಿಸಿದೆ.

ದಂಡ ಬಾಕಿ ಉಳಿಸಿಕೊಂಡಿರುವ ಇ-ಚಲನ್‌ಗಳನ್ನು ಸಂಬಂಧಿಸಿದ ನ್ಯಾಯಾಲಯಗಳಿಗೆ ವರ್ಗಾಯಿಸುತ್ತಿರುವ ಈಗಿನ ಪದ್ಧತಿಯು ಅಸಮರ್ಪಕವಾಗಿದೆ. ತನ್ನ ಆದೇಶಗಳನ್ನು ಕೇವಲ ಕಾಗದದ ನಿರ್ದೇಶನದಂತೆ ಪರಿಗಣಿಸಬಾರದು. ನಾವು ಅನಿರ್ದಿಷ್ಟಾವಧಿಯವರೆಗೂ ನಿರ್ದೇಶನಗಳನ್ನು ನೀಡುತ್ತಲೇ ಬರುತ್ತೇವೆ, ಅವುಗಳನ್ನು ಜಾರಿಗೊಳಿಸದೇ, ಕಾಗದದ ಪತ್ರದಲ್ಲಿ ಉಳಿದರೆ, ಒಂದು ದಿನ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆ ನಿರ್ಧಾರವು ಅಧಿಕಾರಿಗಳಿಗೆ ಇಷ್ಟವಾಗದೇ ಇರಬಹುದು' ಎಂದು ಅಧಿಕಾರಿಗಳಿಗೆ ಸುಪ್ರೀಂಕೋರ್ಟ್‌ ಇದೇ ವೇಳೆ ಎಚ್ಚರಿಕೆ ನೀಡಿದೆ.

ಕೇಂದ್ರಿಯ ಮೋಟಾರ್‌ ವಾಹನ ಕಾಯ್ದೆ-1989ರ 167 ಎ(3) ನಿಯಮದ ಅಡಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಎಲೆಕ್ಟ್ರಾನಿಕ್‌ ಜಾರಿ ವ್ಯವಸ್ಥೆಯಡಿಯಲ್ಲಿ 12 ನಮೂನೆಯ ಸಂಚಾರ ನಿಯಮ ಉಲ್ಲಂಘನೆಗಳನ್ನು ಸರಿಯಾಗಿ ನಿರ್ವಹಣೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿದೆ.

ದಂಡ ವಸೂಲಾತಿ- ಹಲವು ನಿರ್ದೇಶನ

  • ವಾಹನಗಳನ್ನು ಮುಟ್ಟುಗೋಲು ಹಾಕುವ ಜೊತೆಗೆ ದಂಡ ಸಂಗ್ರಹಿಸುವ ನಿಟ್ಟಿನಲ್ಲಿ ಕೆಲವೊಂದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ.

  • ದಂಡ ಬಾಕಿ ಉಳಿಸಿಕೊಂಡ ವಾಹನಗಳ ಆನ್‌ಲೈನ್‌ ಸೇವೆಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು.

  • ನೋಂದಣಿ ಪ್ರಮಾಣ ಪತ್ರದ ನಕಲು ನೀಡಲು ತಡೆ, ಮಾಲೀಕರ ವಿಳಾಸ ನವೀಕರಣ ಸೇವೆ ಸ್ಥಗಿತ

  • ವಾಹನ ಕ್ಷಮತೆಯ ‍ಪ್ರಮಾಣಪತ್ರ ತಡೆಹಿಡಿಯುವುದು ಹಾಗೂ ಪರಿವಾಹನ್‌ ಪೋರ್ಟಲ್‌ನಲ್ಲಿ ವಾಹನವನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸುವುದು

  • ವಾಹನದ ಮಾಲೀಕತ್ವ ವರ್ಗಾವಣೆಯನ್ನು ತಡೆಹಿಡಿಯುವುದು

  • ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವವರ ಚಾಲನ ಪರವಾನಗಿಯನ್ನು ಯಾವುದೇ ಕಾರಣಕ್ಕೂ ನವೀಕರಿಸದೇ, ಅಮಾನತಿನಲ್ಲಿಡಬೇಕು.

  • ದಂಡದ ಶುಲ್ಕ ಪಾವತಿಸುವವರೆಗೂ ಕೂಡ ಯಾವುದೇ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಮಾಣಪತ್ರ ನೀಡಬಾರದು 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries