ಕೋಝಿಕ್ಕೋಡ್: ವಯನಾಡಿನ ಸಾಂಪ್ರದಾಯಿಕ ಕೃಷಿ ಪರಂಪರೆ ಹಾಗೂ ಅಪರೂಪದ ಭತ್ತದ ತಳಿಗಳ ಸಂರಕ್ಷಣೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ಖ್ಯಾತ ಬೀಜ ಸಂರಕ್ಷಕ, ಪದ್ಮಶ್ರೀ ಪುರಸ್ಕøತ ಚೆರುವಯಲ್ ರಾಮನ್ (75) ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದರು. ಅವರ ನಿಧನದಿಂದ ಕೇರಳದ ಕೃಷಿ ಕ್ಷೇತ್ರ ಹಾಗೂ ಸ್ಥಳೀಯ ಬೀಜ ತಳಿಗಳ ಸಂರಕ್ಷಣಾ ಕಾರ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
50ಕ್ಕೂ ಹೆಚ್ಚು ಸ್ಥಳೀಯ ಭತ್ತದ ತಳಿಗಳ ಸಂರಕ್ಷಣೆ
ಕುರಿಚ್ಯ ಸಮುದಾಯದಲ್ಲಿ ಜನಿಸಿದ ಚೆರುವಯಲ್ ರಾಮನ್ ಅವರು ಆಧುನಿಕ ಕೃಷಿ ಪದ್ಧತಿಗಳು, ಹೈಬ್ರಿಡ್ ಬೀಜಗಳು ಹಾಗೂ ರಾಸಾಯನಿಕ ಕೀಟನಾಶಕಗಳನ್ನು ಅವಲಂಬಿಸದೆ, ತಲೆಮಾರುಗಳಿಂದ ಬಳಕೆಯಲ್ಲಿದ್ದ 50ಕ್ಕೂ ಹೆಚ್ಚು ಸ್ಥಳೀಯ ಭತ್ತದ ತಳಿಗಳನ್ನು ಬೆಳೆಸಿ ಸಂರಕ್ಷಿಸುವ ಮೂಲಕ ಗಮನ ಸೆಳೆದಿದ್ದರು.
ಪಾರಂಪರಿಕ ಬೀಜ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದರ ಜೊತೆಗೆ, ಅವುಗಳ ಬಗ್ಗೆ ಅಧ್ಯಯನ ನಡೆಸಲು ಆಗಮಿಸುತ್ತಿದ್ದ ಸಂಶೋಧಕರು ಮತ್ತು ರೈತರಿಗೆ ಉಚಿತವಾಗಿ ಬೀಜಗಳನ್ನು ವಿತರಿಸುತ್ತಿದ್ದರು. ಈ ಮೂಲಕ ದೇಶದ ಸಾಂಪ್ರದಾಯಿಕ ಕೃಷಿ ಪರಂಪರೆಯ ಸಂರಕ್ಷಣೆಗೆ ಮಾದರಿಯಾಗಿದ್ದರು.
ಕೃಷಿ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಅಪಾರ ಕೊಡುಗೆ
ಕೃಷಿ ಹಾಗೂ ಜೀವವೈವಿಧ್ಯ ಸಂರಕ್ಷಣಾ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಅಪೂರ್ವ ಸೇವೆಯನ್ನು ಗುರುತಿಸಿ, ಭಾರತ ಸರ್ಕಾರವು 2023ರಲ್ಲಿ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸಾವಯವ ಕೃಷಿಯ ಮಹತ್ವ, ಸ್ಥಳೀಯ ಬೀಜ ತಳಿಗಳ ವೈಶಿಷ್ಟ್ಯ ಮತ್ತು ಸಾಂಪ್ರದಾಯಿಕ ಕೃಷಿ ಸಂಸ್ಕೃತಿಯ ಅಗತ್ಯವನ್ನು ದೇಶ-ವಿದೇಶಗಳಲ್ಲಿ ಪರಿಚಯಿಸಿದ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು.
ಪಾರಂಪರಿಕ ಬೀಜ ಸಂಪತ್ತನ್ನು ಕಾಪಾಡುವ ಮೂಲಕ ಕೃಷಿ ಜೀವವೈವಿಧ್ಯಕ್ಕೆ ಹೊಸ ಅರ್ಥ ನೀಡಿದ್ದ ಚೆರುವಯಲ್ ರಾಮನ್ ಅವರ ಅಗಲಿಕೆಯಿಂದ ರೈತ ಸಮುದಾಯ, ಕೃಷಿ ಸಂಶೋಧಕರು ಹಾಗೂ ಪರಿಸರ ಪ್ರೇಮಿಗಳಲ್ಲಿ ಶೋಕ ಆವರಿಸಿದೆ.



