ತಿರುವನಂತಪುರಂ: ರಾಜ್ಯದಲ್ಲಿ ಬೀದಿನಾಯಿಗಳ ಪೈಕಿ ಶೇ.5 ಕ್ಕಿಂತ ಕಡಿಮೆ ನಾಯಿಗಳು ಮಾತ್ರ ಸ್ಥಳೀಯ ತಳಿಯಾಗಿದ್ದು, ಉಳಿದವುಗಳಲ್ಲಿ ಬಹುಪಾಲು ವಿದೇಶಿ ತಳಿಯ ಸಾಕು ನಾಯಿಗಳು ಅಥವಾ ಅವುಗಳ ಮಿಶ್ರ ತಳಿಗಳಾಗಿವೆ ಎಂದು ಲಭ್ಯ ಅಂಕಿಅಂಶಗಳು ಸೂಚಿಸುತ್ತವೆ. ಸಾಕಲು ತಂದ ನಾಯಿಗಳನ್ನು ಬಳಿಕ ಬೀದಿಗೆ ಬಿಟ್ಟುಬಿಡುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ನಾಯಿಗಳ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೊಳಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಪ್ರಾಣಿಸಂರಕ್ಷಣಾ ಇಲಾಖೆ ಅಧಿಕಾರಿಗಳ ಪ್ರಕಾರ, ರಾಜ್ಯದ ಬೀದಿಗಳಲ್ಲಿ ಅಲೆಯುವ ನಾಯಿಗಳಲ್ಲಿ ಹೆಚ್ಚಿನವು ಬೀದಿಯಲ್ಲೇ ಹುಟ್ಟಿದವಲ್ಲ. ಬದಲಾಗಿ, ಮನೆಗಳಲ್ಲಿ ಸಾಕಿ ಬಳಿಕ ಮಾಲೀಕರು ಕೈಬಿಟ್ಟ ನಾಯಿಗಳಾಗಿವೆ.
ನಿರ್ವಹಣಾ ವೆಚ್ಚ ಹೆಚ್ಚಳವೂ ಕಾರಣ:
ಸಾಕು ನಾಯಿಗಳ ಆಹಾರ ಮತ್ತು ಚಿಕಿತ್ಸೆಯ ವೆಚ್ಚ ಹೆಚ್ಚುತ್ತಿರುವುದರಿಂದ ಅನೇಕ ಕುಟುಂಬಗಳಿಗೆ ಅವುಗಳ ನಿರ್ವಹಣೆ ಕಷ್ಟವಾಗುತ್ತಿದೆ. ಮಕ್ಕಳ ಆಟಿಕೆ ಅಥವಾ ಕುತೂಹಲಕ್ಕಾಗಿ ನಾಯಿಗಳನ್ನು ಖರೀದಿಸುವ ಕೆಲವರು, ನಂತರ ಅವುಗಳ ಜವಾಬ್ದಾರಿ ವಹಿಸಲು ಸಿದ್ಧರಿಲ್ಲದೆ ನಿರ್ಜನ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟುಹೋಗುತ್ತಿದ್ದಾರೆ ಎನ್ನಲಾಗಿದೆ.
ಸರಿಯಾದ ತರಬೇತಿ ನೀಡದ ಕಾರಣ ನಾಯಿಗಳು ಆಕ್ರಮಣಕಾರಿ ಸ್ವಭಾವ ತೋರಿಸಿದಾಗ ಅಥವಾ ಅನಾರೋಗ್ಯಕ್ಕೆ ಒಳಗಾದಾಗಲೂ ಕೆಲವು ಮಾಲೀಕರು ಅವುಗಳನ್ನು ತ್ಯಜಿಸುತ್ತಿದ್ದಾರೆ.
ಬೀದಿ ಜೀವನಕ್ಕೆ ಒಗ್ಗಿಕೊಳ್ಳದ ಇಂತಹ ನಾಯಿಗಳಿಗೆ ಆಹಾರ ಹುಡುಕಿಕೊಳ್ಳಲು ಕಷ್ಟವಾಗುತ್ತದೆ. ಜೊತೆಗೆ, ಅವು ಮನುಷ್ಯರ ಕ್ರೌರ್ಯಕ್ಕೂ ಬಲಿಯಾಗುತ್ತವೆ. ಈ ಪರಿಸ್ಥಿತಿಗಳು ಅವುಗಳಲ್ಲಿ ಆಕ್ರಮಣಕಾರಿ ವರ್ತನೆ ಹೆಚ್ಚಲು ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪರಿಣಾಮವಾಗಿ ಸಾರ್ವಜನಿಕರು ಹಾಗೂ ಮಕ್ಕಳು ನಾಯಿಗಳ ಕಡಿತಕ್ಕೆ ಒಳಗಾಗುವ ಘಟನೆಗಳು ಸಂಭವಿಸುತ್ತಿವೆ.
ನಾಯಿಗಳನ್ನು ತ್ಯಜಿಸುವವರಿಗೆ ದಂಡನೆ ಅಗತ್ಯ
ಬೀದಿನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು ನಡೆಸುವ ಸಂತಾನಹರಣ ಯೋಜನೆಗಳ ಜೊತೆಗೆ ಕಟ್ಟುನಿಟ್ಟಿನ ಕಾನೂನುಗಳನ್ನೂ ಜಾರಿಗೊಳಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ಸಾಕು ನಾಯಿಗಳನ್ನು ಬೀದಿಗೆ ಬಿಡುವವರಿಗೆ ಭಾರಿ ದಂಡ ಹಾಗೂ ಕಾನೂನುಬದ್ಧ ಶಿಕ್ಷೆ ವಿಧಿಸುವ ಕ್ರಮ ಕೈಗೊಂಡಾಗ ಮಾತ್ರ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಪ್ರಾಣಿ ಪ್ರೇಮಿಗಳು ಮತ್ತು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾಕು ನಾಯಿಗಳ ಸಂಖ್ಯೆಗೆ ಮಿತಿ:
ಇದೇ ವೇಳೆ, ರಾಜ್ಯದಲ್ಲಿ ಸಾಕು ನಾಯಿಗಳ ಪಾಲನೆ, ಸಂತಾನೋತ್ಪತ್ತಿ ಮತ್ತು ಅವುಗಳನ್ನು ತ್ಯಜಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚು ಪಾರದರ್ಶಕ ಹಾಗೂ ಜವಾಬ್ದಾರಿಯುತ ವ್ಯವಸ್ಥೆ ರೂಪಿಸಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರ ಭಾಗವಾಗಿ, ಒಂದು ಮನೆಯಲ್ಲಿ ಗರಿಷ್ಠ ಮೂರು ಸಾಕು ನಾಯಿಗಳನ್ನು ಮಾತ್ರ ಸಾಕಲು ಅವಕಾಶ ನೀಡುವ ಸಮಗ್ರ ಸಾಕುಪ್ರಾಣಿ ಮಾಲೀಕತ್ವ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸಾಕು ನಾಯಿಗಳ ನೋಂದಣಿಯನ್ನೂ ಕಡ್ಡಾಯಗೊಳಿಸಲಾಗುತ್ತದೆ.
ನಿಯಂತ್ರಣವಿಲ್ಲದ ಸಂತಾನೋತ್ಪತ್ತಿಯನ್ನು ತಡೆಯುವುದು ಮತ್ತು ಜವಾಬ್ದಾರಿಯುತ ಸಾಕುಪ್ರಾಣಿ ಪಾಲನೆಯ ಸಂಸ್ಕøತಿಯನ್ನು ಬೆಳೆಸುವುದು ಈ ನಿಯಮದ ಪ್ರಮುಖ ಉದ್ದೇಶಗಳಾಗಿವೆ.
ನೋಂದಣಿ ಇಲ್ಲದೆ ಸಾಕಿದರೆ ಕಾನೂನು ಕ್ರಮ
ಪ್ರಸ್ತುತ ಕೇರಳದಲ್ಲಿ ಸಾಕು ನಾಯಿಗಳ ಸಂಖ್ಯೆ ಬೀದಿನಾಯಿಗಳ ಸಂಖ್ಯೆಯ ಎರಡು ಪಟ್ಟು ಹೆಚ್ಚಿದೆ ಎಂದು ಅನಧಿಕೃತ ಅಂದಾಜುಗಳು ಸೂಚಿಸುತ್ತವೆ. ಆದರೆ, ಸಮರ್ಪಕ ನೋಂದಣಿ ವ್ಯವಸ್ಥೆ ಇಲ್ಲದ ಕಾರಣ ನಿಖರವಾದ ಅಧಿಕೃತ ಮಾಹಿತಿ ಲಭ್ಯವಿರಲಿಲ್ಲ.
ಹೊಸ ನಿಯಮ ಜಾರಿಯಾದ ಬಳಿಕ ಸಾಕು ನಾಯಿಗಳ ಸಮಗ್ರ ದತ್ತಾಂಶ ಸಂಗ್ರಹಿಸಲು ಹಾಗೂ ಅವುಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
ಹೊಸ ನಿಯಮಗಳ ಪ್ರಕಾರ, ನೋಂದಣಿ ಮಾಡಿಸದೆ ಸಾಕು ನಾಯಿಗಳನ್ನು ಸಾಕುವುದು ಕಾನೂನುಬಾಹಿರವಾಗಲಿದೆ. ಅನಧಿಕೃತವಾಗಿ ನಾಯಿಗಳ ಸಂತಾನೋತ್ಪತ್ತಿ ನಡೆಸುವವರು ಹಾಗೂ ಮನೆಯಲ್ಲಿ ಅನುಮತಿಸಲಾದ ಮಿತಿಗಿಂತ ಹೆಚ್ಚಿನ ನಾಯಿಗಳನ್ನು ಸಾಕುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.



