HEALTH TIPS

ಕುಂಬಳೆಯ ಸಂಚಾರ ಸುಧಾರಣೆ: ಬಸ್ ಸಿಬ್ಬಂದಿ-ಅಧಿಕಾರಿಗಳ ನಡುವೆ ತೀವ್ರಗೊಂಡ ಸಂಘರ್ಷ; ಯೂಟರ್ನ್ ಬಂದ್

ಕುಂಬಳೆ: ಕುಂಬಳೆಯಲ್ಲಿ ಜಾರಿಗೊಳಿಸಲಾದ ಹೊಸ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಖಾಸಗಿ ಬಸ್ ಸಿಬ್ಬಂದಿ ನಡುವಿನ ಸಂಘರ್ಷ ತೀವ್ರಗೊಂಡಿದೆ. ಸಂಚಾರ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಹೊಸ ಬಸ್ ತಂಗುದಾಣದ ಸಮೀಪದ ಯೂಟರ್ನ್ ಅನ್ನು ಪಂಚಾಯಿತಿ ಅಧಿಕೃತರು ಮತ್ತು ಪೋಲೀಸರು ಬ್ಯಾರಿಕೇಡ್ ಅಳವಡಿಸಿ ಮುಚ್ಚಿದ್ದಾರೆ.


ಬದಿಯಡ್ಕ, ಸೀತಾಂಗೋಳಿ, ಪೆರ್ಲ ಹಾಗೂ ಪೇರಾಲ್ ಕಣ್ಣೂರು ಭಾಗಗಳಿಂದ ಬರುವ ಬಸ್‍ಗಳು ಹಳೆಯ ಬಸ್ ನಿಲ್ದಾಣದ ಸಮೀಪ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಮತ್ತು ಇಳಿಸಬೇಕು ಎಂಬುದು ಕುಂಬಳೆ ಗ್ರಾಮ ಪಂಚಾಯಿತಿ, ಪೋಲೀಸ್ ಇಲಾಖೆ ಹಾಗೂ ಮೋಟಾರು ವಾಹನ ಇಲಾಖೆಯ ಸೂಚನೆಯಾಗಿದೆ. ಆದರೆ, ಈ ನಿಯಮವನ್ನು ಪಾಲಿಸಲು ಬಸ್ ಸಿಬ್ಬಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆರು ತಿಂಗಳಿನಿಂದಲೂ ಬಗೆಹರಿಯದ ವಿವಾದ:

ಹೊಸ ಸಂಚಾರ ವ್ಯವಸ್ಥೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಿನಿಂದ ಪಂಚಾಯಿತಿ ಆಡಳಿತ ಮಂಡಳಿ, ಕುಂಬಳೆ ಪೋಲೀಸರು ಮತ್ತು ಬಸ್ ಸಿಬ್ಬಂದಿ ನಡುವೆ ಚರ್ಚೆಗಳು ನಡೆಯುತ್ತಿವೆ. ಸಮಸ್ಯೆ ಪರಿಹಾರಕ್ಕಾಗಿ ಹಲವು ಸಭೆಗಳನ್ನು ನಡೆಸಿದರೂ ಒಮ್ಮತ ಮೂಡಿಲ್ಲ. ಪಂಚಾಯಿತಿ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದರೆ, ಬಸ್ ಸಿಬ್ಬಂದಿ ಹಳೆಯ ಬಸ್ ನಿಲ್ದಾಣಕ್ಕೆ ತೆರಳಲು ನಿರಾಕರಿಸುತ್ತಿದ್ದಾರೆ.

ಯೂಟರ್ನ್ ಮುಚ್ಚಿದ್ದರಿಂದ ಬಸ್‍ಗಳಿಗೆ ತೊಂದರೆ:

ಬಸ್ ಸಿಬ್ಬಂದಿ ಅಧಿಕಾರಿಗಳ ಸೂಚನೆಯನ್ನು ಪಾಲಿಸದ ಹಿನ್ನೆಲೆಯಲ್ಲಿ ಹೊಸ ಬಸ್ ತಂಗುದಾಣದ ಸಮೀಪದ ಯೂಟರ್ನ್ ಅನ್ನು ಬ್ಯಾರಿಕೇಡ್ ಅಳವಡಿಸಿ ಮುಚ್ಚಲಾಗಿದೆ. ಇದರಿಂದ ಬದಿಯಡ್ಕ ಭಾಗದಿಂದ ಬರುವ ಬಸ್‍ಗಳು ಹೊಸ ಬಸ್ ತಂಗುದಾಣವನ್ನು ತಲುಪಲು ಹಳೆಯ ಬಸ್ ನಿಲ್ದಾಣದ ವೃತ್ತದವರೆಗೆ ತೆರಳಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕ್ರಮಕ್ಕೆ ಬಸ್ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದು, ತಮ್ಮ ಅಸಮಾಧಾನವನ್ನು ಪಂಚಾಯಿತಿ ಮತ್ತು ಪೋಲೀಸರಿಗೆ ತಿಳಿಸಿದ್ದಾರೆ. ಮತ್ತೊಂದೆಡೆ, ಹೊಸ ಸಂಚಾರ ವ್ಯವಸ್ಥೆಗೆ ವ್ಯಾಪಾರಿಗಳ ಯುವ ಘಟಕ ಬೆಂಬಲ ವ್ಯಕ್ತಪಡಿಸಿದೆ. ನಗರವಾಸಿಗಳಲ್ಲಿ ಈ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಠಿಣ ಕ್ರಮಕ್ಕೆ ಮುಂದಾದ ಅಧಿಕಾರಿಗಳು:

ಕಾಸರಗೋಡು-ತಲಪಾಡಿ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‍ಗಳು ಹಾಗೂ ಕೆಎಸ್‍ಆರ್‍ಟಿಸಿ ಬಸ್‍ಗಳು ಹೊಸ ಬಸ್ ತಂಗುದಾಣಗಳನ್ನು ತಲುಪಲು ಅನಿಲ್ ಕುಂಬಳೆ ರಸ್ತೆಯ ಸಮೀಪದ ಯೂಟರ್ನ್ ಬಳಸುತ್ತಿವೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್ ಸಿಬ್ಬಂದಿಯಿಂದ ಯಾವುದೇ ದೂರುಗಳಿಲ್ಲ ಎಂದು ವರದಿಯಾಗಿದೆ.

ತಲಪಾಡಿ-ಕಾಸರಗೋಡು ಭಾಗದಿಂದ ಬರುವ ಬಸ್‍ಗಳು ಹೊಸ ತಂಗುದಾಣಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡ ಬಳಿಕ ಹಳೆಯ ಬಸ್ ನಿಲ್ದಾಣದ ಸಮೀಪದಲ್ಲಿಯೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಹಾಗಿರುವಾಗ ಬದಿಯಡ್ಕ ಭಾಗದಿಂದ ಬರುವ ಬಸ್‍ಗಳ ಸಿಬ್ಬಂದಿ ಮಾತ್ರ ಸಂಚಾರ ವ್ಯವಸ್ಥೆಯ ನಿಯಮವನ್ನು ಪಾಲಿಸಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬುದು ಪಂಚಾಯಿತಿ ಅಧಿಕಾರಿಗಳ ಪ್ರಶ್ನೆಯಾಗಿದೆ.

ಸಂಚಾರ ಸುಧಾರಣೆಗೆ ಸಂಬಂಧಿಸಿದಂತೆ ಪಂಚಾಯಿತಿ ಆಡಳಿತ ಮಂಡಳಿ ಕೈಗೊಂಡ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂಬ ಒತ್ತಡ ಹೆಚ್ಚಾಗಿದೆ. ಈ ಹಿಂದೆ ಮೋಟಾರು ವಾಹನ ಇಲಾಖೆಯು ಬಸ್ ಸಿಬ್ಬಂದಿಗೆ ನೋಟಿಸ್‍ಗಳನ್ನೂ ನೀಡಿತ್ತು. ಆದರೂ ನಿಯಮ ಪಾಲನೆಗೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಕೆಎಸ್‍ಟಿಪಿ ರಸ್ತೆಯಾಗಿದ್ದರೂ ಸ್ಥಳೀಯ ಆಡಳಿತದ ಹೊಣೆಗಾರಿಕೆ ಪಂಚಾಯಿತಿಗೆ ಇರುವುದರಿಂದ ಪಂಚಾಯಿತಿ ಕೈಗೊಂಡ ನಿರ್ಧಾರವನ್ನು ಗೌರವಿಸಬೇಕು ಎಂದು ವ್ಯಾಪಾರಿಗಳು ಮತ್ತು ನಗರವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ವಿವಾದ ಮುಂದುವರಿದರೆ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಬಸ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕುಂಬಳೆಯಲ್ಲಿ ಸಂಚಾರ ವ್ಯವಸ್ಥೆಯ ವಿವಾದ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.


ಅಭಿಮತ:

-ಕುಂಬಳೆ ಪೇಟೆಯಲ್ಲಿ ಗ್ರಾ.ಪಂ.ಆಡಳಿತ ಹಾಗೂ ಬಸ್ ನಿರ್ವಾಹಕರ ಮಧ್ಯೆ ಹಲವು ಕಾಲಗಳಿಂದಿರುವ ತರ್ಕ ಇನ್ನಾದರೂ ಕೊನೆಯಾಗಬೇಕು. ಬಸ್ ಸಿಬ್ಬಂದಿಗಳು ಅಧಿಕೃತರ ನಿರ್ದೇಶಾನುಸಾರ ಕ್ರಮಗಳನ್ನು ಪಾಲಿಸಿದರೆ ಉತ್ತಮ. ಇಬ್ಬರ ಜಗಳದಲಲಿ ಬಡವಾದ ಕೂಸು ಎಂಬಂತೆ ಪ್ರಯಾಣಿಕರಿಗೆ, ನಾಗರಿಕರಿಗೆ ಹೆಚ್ಚು ತೊಂದರೆಗಳಾಗದಂತೆ ಕ್ರಮಗಳನ್ನು ಅನುಸರಿಸಬೇಕು. ಇದು ಹೀಗೆಯೇ ಮುಂದುವರಿದರೆ ಕೊನೆಯ ತೀರ್ಮಾಣವನ್ನು ಪ್ರಯಾಣಿಕರೇ ಕ್ಯಗೊಳ್ಳಬೇಕಿದ್ದು, ಬಳಿಕ ಪರಿತಪಿಸಿ ಫಲವಿಲ್ಲ.

-ಯೋಗೀಶ್ ಕುಮಾರ್ ದೇವೀನಗರ.ಕುಂಬಳೆ

ಸಾಮಾನ್ಯ ನಾಗರಿಕ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries