ನವದೆಹಲಿ: ದೆಹಲಿಯ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳ ಪಟ್ಟಿಯಿಂದ ದೆಹಲಿ ಪೊಲೀಸರು ಅಧಿಕೃತವಾಗಿ ತೆರವುಗೊಳಿಸಿದ್ದಾರೆ.
ಇದರ ಬದಲಾಗಿ ಸಾರ್ವಜನಿಕರ ಪ್ರತಿಭಟನೆಗಳಿಗಾಗಿ ಮೂರು ಹೊಸ ಸ್ಥಳಗಳನ್ನು ಗುರುತಿಸಿ, ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಕಾರ, ಇನ್ಮುಂದೆ ಪ್ರತಿಭಟನೆಗಳನ್ನು ನಡೆಸಲು ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಪೂರ್ವ ದೆಹಲಿಯ ಸಿಬಿಡಿ ಮೈದಾನಗಳನ್ನು ನಿಗದಿಪಡಿಸಲಾಗಿದೆ.
ಪ್ರತಿಭಟನೆಗಳಿಗೆ ಪರ್ಯಾಯ ಹಾಗೂ ಸೂಕ್ತ ಸ್ಥಳಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯ ಸಮಿತಿಯೊಂದನ್ನು ರಚಿಸಿತ್ತು.
ಈ ಸಮಿತಿಯ ಶಿಫಾರಸಿನ ಮೇರೆಗೆ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳ ಪಟ್ಟಿಯಿಂದ ಕೈಬಿಡಲಾಗಿದೆ. ಈ ಮೂರೂ ಹೊಸ ಸ್ಥಳಗಳಲ್ಲಿ ಧರಣಿಗಳನ್ನು ಆಯೋಜಿಸಲು ಶೀಘ್ರದಲ್ಲೇ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಂತರ್ ಮಂತರ್ ಬಳಿ ಬೃಹತ್ ಪ್ರತಿಭಟನೆಗಳಿಗೆ ಕರೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ. ಈ ನಡುವೆ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.



