ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ವಿಮಾನ ಇಂಧನ (ಎಟಿಎಫ್) ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ಕುರಿತು ವಿಮಾನಯಾನ ಸಂಸ್ಥೆಗಳು ಹಾಗೂ ತೈಲ ಮಾರಾಟ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮಂಗಳವಾರ ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಗಳ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಶೇ 40ರಷ್ಟು ಇಂಧನಕ್ಕೆ ವ್ಯಯವಾಗುತ್ತಿದ್ದು ಬೆಲೆ ಏರಿಕೆಯಿಂದ ಸಂಸ್ಥೆಗಳು ಸಂಕಷ್ಟ ಎದುರಿಸುತ್ತಿವೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟು ವಿಮಾನ ಇಂಧನ ದರದ ಮೇಲೆ ಭಾರಿ ಹೊರೆಯನ್ನುಂಟುಮಾಡುತ್ತಿದೆ. ನಾವು ವಿಮಾನಯಾನ ಸಂಸ್ಥೆಗಳು ಮತ್ತು ತೈಲ ಮಾರಾಟ ಕಂಪನಿಗಳೊಂದಿಗೆ ಈ ಕುರಿತು ಚರ್ಚೆ ನಡೆಸುತ್ತಿದ್ದೇವೆ ಎಂದು ರಾಮಮೋಹನ್ ನಾಯ್ಡು ಮಾಧ್ಯಮಗಳಿಗೆ ತಿಳಿಸಿದರು.
ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೊ, ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣದ ಇಂಧನ ಹೆಚ್ಚುವರಿ ಶುಲ್ಕವನ್ನು (ಫ್ಯುಯೆಲ್ ಸರ್ಚಾರ್ಜ್) ಹೆಚ್ಚಿಸುವುದಾಗಿ ಸೋಮವಾರ ಘೋಷಿಸಿತ್ತು.
ಪಶ್ಚಿಮ ಏಷ್ಯಾದಲ್ಲಿ ಎದುರಾಗಿರುವ ರಾಜಕೀಯ ಉದ್ವಿಗ್ನತೆಯಿಂದ ಕಳೆದ ಕೆಲವು ತಿಂಗಳುಗಳಿಂದ ಎಟಿಎಫ್ ಬೆಲೆಯಲ್ಲಿ ತೀವ್ರ ಏರಿಳಿತ ಕಂಡುಬರುತ್ತಿವೆ ಎಂದು ಇಂಡಿಗೊ ಹೇಳಿದೆ. ಇಂಧನ ದರ ಸತತವಾಗಿ ಏರಿಕೆಯಾಗುತ್ತಿದ್ದು, ಕಳೆದ ದಶಕದಲ್ಲೇ ಅತ್ಯಧಿಕ ಮಟ್ಟಕ್ಕೆ ತಲುಪಿದೆ ಎಂದು ಇಂಡಿಗೊ ಕಳವಳ ವ್ಯಕ್ತಪಡಿಸಿದೆ.



